
ಚೆನ್ನೈ: ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನ (CSK) ಶೇ.15 ರಿಂದ 20ರಷ್ಟು ಷೇರುಗಳನ್ನು ಮಾಜಿ ನಾಯಕ ಎಂ.ಎಸ್. ಧೋನಿ ಖರೀದಿಸಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳನ್ನು ಸಿಎಸ್‌ಕೆ ಟೀಮ್ ಮ್ಯಾನೇಜ್‌ಮೆಂಟ್ ತಳ್ಳಿಹಾಕಿದೆ. ಆದರೆ, ಫ್ರಾಂಚೈಸಿಯಲ್ಲಿ ಧೋನಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಕ್ರಿಕ್‌ಬಝ್ ವರದಿ ಪ್ರಕಾರ, ಧೋನಿ ಈ ಹಿಂದೆ ಖಾಸಗಿ ವಹಿವಾಟಿನ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದ್ದಾರೆ.
ಧೋನಿ ಬಳಿ ಒಂದು ಲಕ್ಷ ಷೇರುಗಳಿದ್ದರೂ, ಕಂಪನಿಯ ಒಟ್ಟು ಷೇರುಗಳಿಗೆ ಹೋಲಿಸಿದರೆ ಇದು ಕೇವಲ 0.01% ರಿಂದ 0.02% ಮಾತ್ರ. ಐಪಿಎಲ್ ಫ್ರಾಂಚೈಸಿಗಳ ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ, ಧೋನಿ ಹೊಂದಿರುವ ಷೇರುಗಳ ಬೆಲೆ ಸುಮಾರು 2.6 ಕೋಟಿಯಿಂದ 3 ಕೋಟಿ ರೂಪಾಯಿ ಅಷ್ಟೇ. ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರ ಕುಟುಂಬವು ತಂಡದಲ್ಲಿ ಶೇ. 55ಕ್ಕಿಂತ ಹೆಚ್ಚು ಷೇರುಗಳನ್ನು ಮತ್ತು ನಿಯಂತ್ರಣವನ್ನು ಹೊಂದಿದೆ. ಅಲ್ಲದೆ, 30 ಕೋಟಿಗೂ ಹೆಚ್ಚು ಸಾರ್ವಜನಿಕ ಷೇರುದಾರರಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ, ಸಿಎಸ್‌ಕೆಯ ಶೇ.15-20ರಷ್ಟು ದೊಡ್ಡ ಪಾಲುದಾರಿಕೆಯನ್ನು ಪಡೆಯಲು ಧೋನಿ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ತಂಡದ ಮ್ಯಾನೇಜ್‌ಮೆಂಟ್ ಸ್ಪಷ್ಟಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಸಾರ್ವಜನಿಕ ಮಾರುಕಟ್ಟೆಯಲ್ಲಿಲ್ಲದ (unlisted) ಕಂಪನಿಯಾಗಿದೆ. ಷೇರು ಪಾಲುದಾರಿಕೆ ಕಡಿಮೆ ಇದ್ದರೂ, ತಂಡದ ಪ್ರಮುಖ ನಿರ್ಧಾರಗಳಲ್ಲಿ ಧೋನಿಯ ಪ್ರಭಾವ ದೊಡ್ಡದಿದೆ. ಮಾಜಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಸ್ಥಾನ ತೊರೆದ ನಂತರ ಹೊಸ ಕೋಚ್ ಆಯ್ಕೆ ಹಾಗೂ ಮೆಗಾ ಹರಾಜಿಗೆ ಮುನ್ನ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ಧೋನಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಗಾಯದ ಕಾರಣ ಕಳೆದ ಸೀಸನ್‌ನಲ್ಲಿ ಆಡದಿದ್ದ ಧೋನಿ, ಮುಂಬರುವ ಸೀಸನ್‌ನಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಹೊಸ ಕೋಚ್ ಜೊತೆ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ ಐದು ಟ್ರೋಫಿ ಗೆಲ್ಲುವ ಮೂಲಕ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಇತ್ತೀಚಿಗಿನ ವರ್ಷಗಳಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. 2023ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಆಗಿದ್ದ ಸಿಎಸ್‌ಕೆ ತಂಡವು ಆ ಬಳಿಕ ಪ್ಲೇ ಆಫ್‌ಗೇರಲು ಪದೇ ಪದೇ ವಿಫಲವಾಗುತ್ತಾ ಬಂದಿದೆ. ಮುಂದಿನ ಸೀಸನ್‌ನಲ್ಲಾದರೂ ಸಿಎಸ್‌ಕೆ ಕಮ್‌ಬ್ಯಾಕ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.