ಇಂಡೋ-ಆಸೀಸ್‌ ಕದನ: ಪಿಂಕ್ ಬಾಲ್‌ ಟೆಸ್ಟ್‌ನಿಂದ ಪುಕೊವಿಸ್ಕಿ ಔಟ್‌; ಹೊಸ ಬ್ಯಾಟ್ಸ್‌ಮನ್ ಸೇರ್ಪಡೆ..!

By Suvarna NewsFirst Published Dec 12, 2020, 2:19 PM IST
Highlights

ಭಾರತ ವಿರುದ್ದದ ಮೊದಲ ಟೆಸ್ಟ್‌ ಪಂದ್ಯಕ್ಕೆ ವಿಲ್ ಪುಕೊವಿಸ್ಕಿ ಬದಲಿಗೆ ಮಾರ್ಕಸ್ ಹ್ಯಾರಿಸ್ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಸಿಡ್ನಿ(ಡಿ.12): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದ್ದು, ಡೇವಿಡ್ ವಾರ್ನರ್ ಬಳಿಕ ವಿಲ್ ಪುಕೊವಿಸ್ಕಿ ಕೂಡಾ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದು, ವಿಲ್ ಪುಕೊವಿಸ್ಕಿ ಬದಲಿಗೆ ಮಾರ್ಕಸ್ ಹ್ಯಾರಿಸ್‌ ಕಾಂಗರೂ ತಂಡ ಕೂಡಿಕೊಂಡಿರುವುದಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ ಖಚಿತ ಪಡಿಸಿದೆ.

ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌, ಭಾರತ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಪರಿಣಾಮ ಕೊನೆಯ ಏಕದಿನ ಹಾಗೂ ಟಿ20 ಸರಣಿಯಿಂದಲೂ ವಾರ್ನರ್ ಹೊರಬಿದ್ದಿದ್ದರು. ಬಳಿಕ ಮೊದಲ ಟೆಸ್ಟ್‌ ಪಂದ್ಯಕ್ಕೂ ಡೇವಿಡ್‌ ವಾರ್ನರ್‌ ಸಂಪೂರ್ಣ ಫಿಟ್ ಇಲ್ಲದ ಕಾರಣ ಎಡಗೈ ಬ್ಯಾಟ್ಸ್‌ಮನ್‌ಗೆ ವಿಶ್ರಾಂತಿ ನೀಡಲಾಗಿದೆ. 

ಇನ್ನು ಡೇವಿಡ್ ವಾರ್ನರ್ ಬದಲಿಗೆ ವಿಲ್ ಪುಕೊವಿಸ್ಕಿ ಅವರಿಗೆ ಮೊದಲ ಟೆಸ್ಟ್‌ ಪಂದ್ಯಕ್ಕೆ ಕ್ರಿಕೆಟ್‌ ಆಸ್ಟ್ರೇಲಿಯಾ ಬುಲಾವ್ ನೀಡಿತ್ತು. ಆದರೆ ಭಾರತ 'ಎ' ವಿರುದ್ದ ಮೊದಲ ಅಭ್ಯಾಸ ಪಂದ್ಯದ ವೇಳೆ ಕಾರ್ತಿಕ್‌ ತ್ಯಾಗಿ ಬೌಲಿಂಗ್‌ ವೇಳೆ ತಲೆಗೆ ಚೆಂಡು ಬಡಿದು ಕನ್ಕಶನ್‌ಗೆ ಒಳಗಾಗಿದ್ದರು. ಹೀಗಾಗಿ ವಿಲ್ ಪುಕೊವಿಸ್ಕಿ ಕೂಡಾ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದು, ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ವೇಳೆಗೆ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

ಆಸೀಸ್‌ ಯುವ ಆಟಗಾರರ ಕನಸಿಗೆ ಟೀಂ ಇಂಡಿಯಾ ವೇಗಿಗಳಿಂದ ತಣ್ಣೀರು..!

ಕಳೆದ ಕೆಲ ವಾರಗಳಿಂದ ನಮ್ಮಲ್ಲಿ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಅದೃಷ್ಟಕ್ಕೆ ಮಾರ್ಕಸ್ ಹ್ಯಾರಿಸ್ ಅವರಂತಹ ಸಮರ್ಥ ಆಟಗಾರರು ನಮ್ಮಲ್ಲಿದ್ದಾರೆ. ಈ ಸೀಸನ್‌ನಲ್ಲಿ ವಿಕ್ಟೋರಿಯಾ ಪರ ಮಾರ್ಕಸ್ ಹ್ಯಾರಿಸ್ ಅದ್ಭುತ ಫಾರ್ಮ್‌ನ್ನು ಹೊಂದಿದ್ದರು. ಅಲ್ಲದೇ ಭಾರತ ವಿರುದ್ದದ 2 ಅಭ್ಯಾಸ ಪಂದ್ಯಗಳಲ್ಲೂ ಟೀಂ ಇಂಡಿಯಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಟ್ರಾವರ್ ಹಾರ್ನ್ಸ್‌ ಹೇಳಿದ್ದಾರೆ.

ಮಾರ್ಕಸ್‌ ಹ್ಯಾರಿಸ್‌ ಆಸ್ಟ್ರೇಲಿಯಾ ತಂಡದ ಪರ 9 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಇನ್ನು ಈ ಸೀಸನ್‌ನ 2 ಶೆಫಲ್ಡ್‌ ಶೀಲ್ಡ್‌ ಪಂದ್ಯಾವಳಿಯಲ್ಲಿ ಹ್ಯಾರಿಸ್ ವಿಕ್ಟೋರಿಯಾ ಪರ 118.33ರ ಸರಾಸರಿಯಲ್ಲಿ 355 ರನ್ ಬಾರಿಸಿದ್ದಾರೆ. ಇನ್ನು ಸೌಥ್ ಆಸ್ಟ್ರೇಲಿಯಾ ವಿರುದ್ದ ಅಮೋಘ 239 ರನ್ ಚಚ್ಚುವ ಮೂಲಕ ಆಯ್ಕೆಗಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

click me!