
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ವೇಗಿ ಯಶ್ ದಯಾಳ್ ಅವರ ಮೇಲೆ ಯುವತಿಯೊಬ್ಬರು ಲೈಂಗಿಕ ಬಲಾತ್ಕಾರದ ಆರೋಪ ಮಾಡಿದ್ದರು ಹಾಗೂ ಅವರ ಮೇಲೆ ಎಫ್‌ಐಆರ್ ಕೂಡಾ ದಾಖಲಾಗಿತ್ತು. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಯಶ್ ದಯಾಳ್ ಈ ಘಟನೆಯ ಕುರಿತಂತೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಜತೆಗೆ ಮಹಿಳಾ ಆರೋಪಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆಯೇ ಎಫ್‌ಐಆರ್ ದಾಖಲಿಸಿದ್ದಾರೆ.
ಉತ್ತರ ಪ್ರದೇಶ ಮೂಲದ 27 ವರ್ಷದ ಯಶ್ ದಯಾಳ್ ವಿರುದ್ಧ ಯುಪಿಯ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಿಎನ್‌ಎಸ್ ಸೆಕ್ಷನ್ 69 (ವಿವಾಹದ ಸುಳ್ಳು ಭರವಸೆ, ಮೋಸದ ವಿಧಾನಗಳಿಂದ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.ಕಳೆದ ಜೂನ್ 21 ರಂದು ಮಹಿಳೆಯೊಬ್ಬರು ಐಜಿಆರ್‌ಎಸ್ (ಸಮಗ್ರ ದೂರು ಪರಿಹಾರ ವ್ಯವಸ್ಥೆ) ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಿದ್ದರು.
ಇದೀಗ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಆರೋಪ ಮಾಡಿರುವ ಮಹಿಳೆ ಐಫೋನ್ ಹಾಗೂ ಲ್ಯಾಪ್‌ಟಾಪ್ ಕದ್ದಿರುವುದಾಗಿ ಆರೋಪಿಸಿ ಯಶ್ ದಯಾಳ್ ಪ್ರಯಾಗ್‌ರಾಜ್ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಯಾಗ್‌ರಾಜ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ವಿವರವಾಗಿ ದೂರು ದಾಖಲಿಸಿದ್ದು, ಆ ಮಹಿಳೆ ತಮಗೆ 2021ರಲ್ಲಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದರು ಎಂದು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಯಶ್ ದಯಾಳ್, ಆ ಮಹಿಳೆ ತಮ್ಮಿಂದ ಲಕ್ಷಾಂತರ ರುಪಾಯಿ ಪಡೆದು ವಾಪಾಸ್ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸೆಗೆ ಹಣ ಬೇಕೆಂದು ಪಡೆದು, ಆ ಬಳಿಕ ವಾಪಾಸ್ ನೀಡದೇ ವಂಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಎಂದು ಯಶ್ ದಯಾಳ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಇದಷ್ಟೇ ಅಲ್ಲದೇ ಆ ಮಹಿಳೆ ಪದೇ ಪದೇ ಶಾಪಿಂಗ್‌ಗಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಯಶ್ ದಯಾಳ್ ಆರೋಪಿಸಿದ್ದಾರೆ. ಇನ್ನು ಆ ಮಹಿಳೆ ತಮ್ಮ ಮೇಲೆ ದೂರು ದಾಖಲಿಸಿದ್ದು ಗಮನಕ್ಕೆ ಬಂದ ಬಳಿಕ ಕಾನೂನು ಸಲಹೆಗಾರರ ಜತೆ ಸಮಾಲೋಚಿಸಿ ಈಗ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.