
ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ತಂಡದ ತಾರಾ ಆಟಗಾರ್ತಿ ಹಾಗೂ ಉಪನಾಯಕಿ ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್ ಮತ್ತು ರಾಧಾ ಯಾದವ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಭರ್ಜರಿ ಬಹುಮಾನ ಘೋಷಿಸಿದೆ. ಮೂವರು ಆಟಗಾರ್ತಿಯರಿಗೆ ತಲಾ 2.25 ಕೋಟಿ ರೂಪಾಯಿ ಬಹುಮಾನ ನೀಡಲು ಮಹಾರಾಷ್ಟ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇದಲ್ಲದೆ, ಮುಂಬೈ ಮೂಲದ ಭಾರತೀಯ ತಂಡದ ಕೋಚ್ ಅಮೋಲ್ ಮಜುಂದಾರ್ ಅವರಿಗೆ 22.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ.
ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಸ್ಮೃತಿ ಮಂಧನಾ. ಸ್ಮೃತಿ ಮಂಧನಾ ಪರ ಭಾರತ ಪರ 9 ಪಂದ್ಯಗಳನ್ನಾಡಿ 54.25ರ ಬ್ಯಾಟಿಂಗ್ ಸರಾಸರಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸಹಿತ 434 ರನ್ ಸಿಡಿಸಿದ್ದರು. ಇನ್ನು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 127 ರನ್ ಗಳಿಸಿ ಭಾರತದ ಸ್ಮರಣೀಯ ಗೆಲುವಿಗೆ ಜೆಮಿಮಾ ರೋಡ್ರಿಗ್ಸ್ ಅವರ ಅಜೇಯ ಶತಕ ಕಾರಣವಾಗಿತ್ತು. ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ ರಾಧಾ ಯಾದವ್ ಭಾರತದ ಆಡುವ ಹನ್ನೊಂದರ ಬಳಗದಲ್ಲಿದ್ದರು.
ಭಾನುವಾರ ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಭಾರತ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್‌ನಲ್ಲಿ ಸ್ಮೃತಿ ಮಂಧನಾ 45 ರನ್ ಗಳಿಸಿದರೆ, ಜೆಮಿಮಾ 24 ರನ್ ಗಳಿಸಿದ್ದರು. ಈ ಹಿಂದೆ, ಬಿಸಿಸಿಐ ವಿಶ್ವಕಪ್ ಗೆದ್ದ ಭಾರತೀಯ ತಂಡಕ್ಕೆ 51 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಇದು ಐಸಿಸಿ ನೀಡುವ 39.78 ಕೋಟಿ ರೂಪಾಯಿ ಬಹುಮಾನದ ಮೊತ್ತಕ್ಕಿಂತ ಹೆಚ್ಚುವರಿಯಾಗಿತ್ತು. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುಮಾನದ ಮೊತ್ತವಾಗಿದೆ.
ಭಾರತದ ಆಟಗಾರ್ತಿ ರೇಣುಕಾ ಠಾಕೂರ್‌ಗೆ ಹಿಮಾಚಲ ಪ್ರದೇಶ ಸರ್ಕಾರ ಮತ್ತು ಭಾರತದ ವೇಗಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರ ತಲಾ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಪ್ರಶಸ್ತಿ ಗೆದ್ದ ಭಾರತೀಯ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಅಮನ್‌ಜೋತ್ ಕೌರ್‌ಗೆ ಪಂಜಾಬ್ ಸರ್ಕಾರ ತಲಾ 11 ಲಕ್ಷ ರೂಪಾಯಿ ಮತ್ತು ಫೀಲ್ಡಿಂಗ್ ಕೋಚ್ ಮುನಿಶ್ ಬಾಲಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.