ಅಪ್ಪಟ ಚಿನ್ನದಿಂದ ಜೆರ್ಸಿ ಧರಿಸಿ ವೆಸ್ಟ್ ಇಂಡೀಸ್ ದಿಗ್ಗಜರ ಕ್ರಿಕೆಟ್ ಆಟ!

Published : Jul 20, 2025, 10:28 AM IST
West Indies

ಸಾರಾಂಶ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಗೇಲ್, ಪೊಲ್ಲಾರ್ಡ್ ಮತ್ತು ಬ್ರಾವೋ ಚಿನ್ನದ ಜೆರ್ಸಿ ಧರಿಸಲಿದ್ದಾರೆ. ಈ ದುಬಾರಿ ಜೆರ್ಸಿಯನ್ನು ಲೊರೆಂಜೆ ಸಂಸ್ಥೆ ತಯಾರಿಸಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಅತಿ ದುಬಾರಿ ಜೆರ್ಸಿ ಎನಿಸಿಕೊಂಡಿದೆ. 

ಲಂಡನ್‌: ಈ ಬಾರಿ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ದಿಗ್ಗಜ ಆಟಗಾರರಾದ ಕ್ರಿಸ್‌ ಗೇಲ್‌, ಪೊಲ್ಲಾರ್ಡ್‌ ಹಾಗೂ ಡ್ವೇಯ್ನ್‌ ಬ್ರಾವೋ ಚಿನ್ನದಿಂದ ಅಲಂಕರಿಸಲ್ಪಟ್ಟ ಜೆರ್ಸಿ ಧರಿಸಿ ಆಡಲಿದ್ದಾರೆ. ಇದು ಅಚ್ಚರಿಯಾದರೂ ಸತ್ಯ.

ದುಬೈ ಮೂಲದ ಲಕ್ಸುರಿ ಬ್ರ್ಯಾಂಡ್‌ ಆಗಿರುವ ಲೊರೆಂಜೆ ಸಂಸ್ಥೆಯು ಚಾನೆಲ್‌2 ಗ್ರೂಪ್‌ ಕಾರ್ಪೊರೇಷನ್‌ ಸಹಭಾಗಿತ್ವದಲ್ಲಿ ಈ ವಿಶೇಷ ಜೆರ್ಸಿ ತಯಾರಿಸಿದೆ. ಇದರಲ್ಲಿ 30 ಗ್ರಾಂ ಚಿನ್ನವಿದ್ದು, ಕ್ರಿಕೆಟ್‌ ಇತಿಹಾಸದಲ್ಲೇ ಅತಿ ದುಬಾರಿ ಜೆರ್ಸಿ ಎನಿಸಿಕೊಂಡಿದೆ. ಜೆರ್ಸಿ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಕ್ರೀಡಾಭಿಮಾನಿಗಳ ಹುಬ್ಬೇರಿಸಿದೆ.

 

ಬಾಲ್‌ಔಟ್‌ನಲ್ಲಿ ಗೆದ್ದ ದಕ್ಷಿಣ ಆಫ್ರಿಕಾ:

ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಹಾಗೂ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ನಡುವಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯವಾಗಿದ್ದು, ಫಲಿತಾಂಶಕ್ಕಾಗಿ ಬಾಲ್‌ಔಟ್ ಮೊರೆ ಹೋಗಲಾಯಿತು. ಬಾಲ್‌ಔಟ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.

ಮಳೆ ಬಾದಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡವು 11 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 79 ರನ್ ಬಾರಿಸಿತು. ವಿಂಡೀಸ್ ಪರ ಲಿಂಡ್ಲೆ ಸಿಮೊನ್ಸ್ 28 ರನ್ ಬಾರಿಸಿದ್ದೇ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇನ್ನು ಡಿಎಲ್‌ಎಸ್ ನಿಯಮದ ಪ್ರಕಾರ 81 ರನ್‌ಗಳ ಗುರಿ ನೀಡಲಾಯಿತು. ಗುರಿ ಬೆನ್ನತ್ತಿದ ಹರಿಣಗಳ ಪಡೆ ಆರಂಭಿಕ ಆಘಾತದ ಹೊರತಾಗಿಯೂ ಕೇವಲ 80 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು. ಸ್ಪೋಟಕ 25 ರನ್ ಸಿಡಿಸಿದ ಜಾನ್ ಪಾಲ್ ಡುಮಿನಿ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.

ಲೆಜೆಂಡ್ಸ್‌ ಲೀಗ್‌: ಪಾಕ್‌ ವಿರುದ್ಧ ಪಂದ್ಯಕ್ಕೆ ಭಾರತ ಆಟಗಾರರ ಬಹಿಷ್ಕಾರ?

ಬರ್ಮಿಂಗ್‌ಹ್ಯಾಮ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಆಟಗಾರರ ನಡುವಿನ ಟೂರ್ನಿಯಾಗಿರುವ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ನಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಿಗದಿಯಾಗಿದೆ. ಆದರೆ ಇತ್ತೀಚೆಗೆ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಭೀಕರ ಹತ್ಯಾಕಾಂಡ ಖಂಡಿಸಿ ಕೆಲ ಭಾರತೀಯ ಆಟಗಾರರು ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ ಹರ್ಭಜನ್‌ ಸಿಂಗ್‌, ಯೂಸುಫ್‌ ಪಠಾಣ್‌, ಇರ್ಫಾನ್‌ ಪಠಾಣ್‌ ಪಾಕ್‌ ವಿರುದ್ಧ ಪಂದ್ಯ ಆಡಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಉಳಿದಂತೆ ಯುವರಾಜ್‌ ಸಿಂಗ್‌, ಶಿಖರ್‌ ಧವನ್‌, ಸುರೇಶ್‌ ರೈನಾ, ವಿನಯ್‌ ಕುಮಾರ್‌, ರಾಬಿನ್‌ ಉತ್ತಪ್ಪ, ಅಂಬಟಿ ರಾಯುಡು, ಪಿಯೂಷ್‌ ಚಾವ್ಲಾ, ವರುಣ್‌ ಆ್ಯರೊನ್‌, ಅಭಿಮನ್ಯು ಮಿಥುನ್‌, ಸಿದ್ಧಾರ್ಥ್‌ ಕೌಲ್‌, ಗುರುಕೀರತ್ ಮಾನ್‌ ಕೂಡಾ ತಂಡದಲ್ಲಿದ್ದಾರೆ. ಇವರು ಕೂಡಾ ಪಾಕ್‌ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಬಹುದು ಎನ್ನಲಾಗುತ್ತಿದೆ.

ದ.ಆಫ್ರಿಕಾದ ನಾರ್ಟನ್ ಕಳೆದ ವರ್ಷ ಕ್ರಿಕೆಟಿಗ, ಈ ಸಲ ರಗ್ಬಿ ನಾಯಕ!

ನವದೆಹಲಿ: 2024ರ ಐಸಿಸಿ ಅಂಡರ್‌-19 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದ ರೈಲಿ ನಾರ್ಟನ್‌ ಈ ಬಾರಿ ಇಟಲಿಯಲ್ಲಿ ನಡೆದ 2025ನೇ ಸಾಲಿನ ಅಂಡರ್‌-20 ರಗ್ಬಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದ.ಆಫ್ರಿಕಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

19 ವರ್ಷದ ನಾರ್ಟನ್ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದು, ಈಗ ರಗ್ಬಿಯಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಪೈನಲ್‌ಗೆ ಅರ್ಹತೆ ಪಡೆದಿದೆ. ಸೆಮಿಫೈನಲ್‌ನಲ್ಲಿ ಅರ್ಜೇಂಟಿನಾ ವಿರುದ್ಧ 48-24 ಅಂತರದಲ್ಲಿ ಗೆದ್ದು ತಮ್ಮ ನಾಯಕತ್ವದಲ್ಲಿ ತಂಡವನ್ನು ಫೈನಲ್‌ಗೇರಿದ್ದಾರೆ. ಕಳೆದ ವರ್ಷ ಅವರು ಅಂಡರ್‌-19 ಕ್ರಿಕೆಟ್‌ ವಿಶ್ವಕಪ್‌ನಲ್ಲಿ 11 ವಿಕೆಟ್‌ ಪಡೆದಿದ್ದರು. 3 ಪಂದ್ಯಗಳಲ್ಲಿ ಒಮ್ಮೆ ಬಾರಿ ಔಟಾಗಿದ್ದ ಅವರು, 50ರ ಸರಾಸರಿಯನ್ನು ಕಾಯ್ದುಕೊಂಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!