ತಮ್ಮ ದಾಖಲೆ ಮುರಿದ Dwayne Bravo ಚಾಂಪಿಯನ್ ಬೌಲರ್‌ ಎಂದು ಬಣ್ಣಿಸಿದ ಲಸಿತ್ ಮಾಲಿಂಗ..!

By Naveen KodaseFirst Published Apr 1, 2022, 2:16 PM IST
Highlights

* ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ದಾಖಲೆ ಬರೆದ ಡ್ವೇನ್ ಬ್ರಾವೋ

* ದೀಪಕ್ ಹೂಡಾ ವಿಕೆಟ್ ಕಬಳಿಸಿ ಹೊಸ ಮೈಲಿಗಲ್ಲು ನೆಟ್ಟ ಸಿಎಸ್‌ಕೆ ಬೌಲರ್

* ಬ್ರಾವೋ ಸಾಧನೆಗೆ ಅಭಿನಂದನೆ ಸಲ್ಲಿಸಿದ ಲಸಿತ್ ಮಾಲಿಂಗ

ಬೆಂಗಳೂರು(ಏ.01): ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಅನುಭವಿ ಆಲ್ರೌಂಡರ್ ಡ್ವೇನ್ ಬ್ರಾವೋ (Dwayne Bravo) ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) 171ನೇ ಕಬಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಲಖನೌ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ದದ ಪಂದ್ಯದಲ್ಲಿ ಡ್ವೇನ್ ಬ್ರಾವೋ, ದೀಪಕ್ ಹೂಡಾ (Deepak Hooda) ಅವರ ವಿಕೆಟ್ ಕಬಳಿಸುತ್ತಿದ್ದಂತೆಯೇ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ ಆಗಿ ಹೊರಹೊಮ್ಮಿದ್ದಾರೆ. ಇಷ್ಟು ವರ್ಷಗಳ ಕಾಲ ಲಸಿತ್ ಮಾಲಿಂಗ (Lasith Malinga) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಬ್ರಾವೋ ಯಶಸ್ವಿಯಾಗಿದ್ದಾರೆ. ಕೆರಿಬಿಯನ್ ಆಲ್ರೌಂಡರ್ ಸಾಧನೆಗೆ ಮಾಲಿಂಗ ಅಭಿನಂದನೆ ಸಲ್ಲಿಸಿದ್ದಾರೆ.

ಲಖನೌ ಸೂಪರ್‌ ಜೈಂಟ್ಸ್‌ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಡ್ವೇನ್ ಬ್ರಾವೋ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಲಖನೌನ ಆಲ್ರೌಂಡರ್‌ ದೀಪಕ್ ಹೂಡಾ(171), ಬ್ರಾವೋ ಪಾಲಿನ 171ನೇ ಬಲಿಯಾದರು. ಲಖನೌ ಎದುರಿನ ಪಂದ್ಯದಲ್ಲಿ ಡ್ವೇನ್ ಬ್ರಾವೋ 4 ಓವರ್‌ ಬೌಲಿಂಗ್ ಮಾಡಿ 35 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದಾರೆ. ಇದರ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಲಖನೌ ಎದುರು 6 ವಿಕೆಟ್‌ಗಳ ಅಂತರದ ಆಘಾತಕಾರಿ ಸೋಲು ಕಂಡಿದೆ. 

ಇನ್ನು ಐಪಿಎಲ್‌ನಲ್ಲಿ ಈ ಅಮೋಘ ಸಾಧನೆ ಮಾಡಿದ ಡ್ವೇನ್ ಬ್ರಾವೋ ಅವರಿಗೆ ಶ್ರೀಲಂಕಾ ಹಾಗೂ ಮುಂಬೈ ಇಂಡಿಯನ್ಸ್‌ (Mumbai Indians) ದಿಗ್ಗಜ ಕ್ರಿಕೆಟಿಗ ಲಸಿತ್ ಮಾಲಿಂಗ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಬ್ರಾವೋ ಅವರೊಬ್ಬ ಚಾಂಪಿಯನ್ ಆಟಗಾರ. ಐಪಿಎಲ್ (IPL) ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಕ್ಕೆ ಅಭಿನಂದನೆಗಳು. ಪಯಣ ಮತ್ತಷ್ಟು ದೂರ ಸಾಗಲಿ ಯಂಗ್ ಮ್ಯಾನ್ ಎಂದು ಡ್ವೇನ್ ಬ್ರಾವೋ ಅವರಿಗೆ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಶುಭ ಹಾರೈಸಿದ್ದಾರೆ. 

ಲಸಿತ್ ಮಾಲಿಂಗ ಸದ್ಯ ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಸಿತ್ ಮಾಲಿಂಗ ಒಟ್ಟು 153 ಐಪಿಎಲ್ ಪಂದ್ಯಗಳನ್ನಾಡಿ 170 ವಿಕೆಟ್ ಪಡೆದಿದ್ದರು. ದಶಕಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಲಸಿತ್ ಮಾಲಿಂಗ 2019ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಪಂದ್ಯವನ್ನಾಡಿದ್ದರು. 2019ರ ಐಪಿಎಲ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್ ರೋಚಕ ಜಯ ಸಾಧಿಸುವ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. 

ಇದು ಫೋಟೋ ಶಾಪ್ ಖಂಡಿತ ಅಲ್ಲ, ಧೋನಿ-ಗಂಭೀರ್ ಸಂಗಮಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ..!

ಇನ್ನೊಂದೆಡೆ ಕಾಕತಾಳೀಯ ಎನ್ನುವಂತೆ ಡ್ವೇನ್ ಬ್ರಾವೋ ಕೂಡಾ ತಮ್ಮ 153ನೇ ಐಪಿಎಲ್ ಪಂದ್ಯದಲ್ಲೇ ದಿಗ್ಗಜ ವೇಗಿ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್‌ಗಳ ಪಟ್ಟಿಯಲ್ಲಿ ಡ್ವೇನ್ ಬ್ರಾವೋ(171) ಮೊದಲ ಸ್ಥಾನದಲ್ಲಿದ್ದರೆ, ಲಸಿತ್ ಮಾಲಿಂಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ(166 ವಿಕೆಟ್), ಪೀಯೂಸ್ ಚಾವ್ಲಾ(157 ವಿಕೆಟ್) ಹಾಗೂ ಹರ್ಭಜನ್ ಸಿಂಗ್(150 ವಿಕೆಟ್) ಕ್ರಮವಾಗಿ ಮೊದಲ ಐದು ಸ್ಥಾನ ಹಂಚಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಡ್ವೇನ್ ಬ್ರಾವೋ ಅವರ ಗರಿಷ್ಠ ವಿಕೆಟ್‌ ದಾಖಲೆ ಅಳಿಸಿಹಾಕುವುದು ಕಷ್ಟಸಾಧ್ಯ ಎನಿಸಿದೆ.

click me!