
ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ನವೆಂಬರ್ 30ರಿಂದ ಆರಂಭವಾಗಲಿದೆ. ಇದೀಗ ಹರಿಣಗಳ ಎದುರಿನ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಭಾರತ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಋತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಭಾರತ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ಸದ್ಯ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್, ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಏಕದಿನ ಸರಣಿಯಲ್ಲೂ ಪಂತ್ ಅವರೇ ಟೀಂ ಇಂಡಿಯಾ ನಾಯಕರಾಗಬಹುದು ಎನ್ನುವ ಲೆಕ್ಕಾಚಾರ ಜೋರಾಗಿತ್ತು. ಆದರೆ ಅಚ್ಚರಿಯ ರೀತಿಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಹೆಡ್‌ಕೋಚ್ ಗೌತಮ್ ಗಂಭೀರ್, ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಅವರನ್ನು ಬಿಟ್ಟು ಈ ಮೂರು ಕಾರಣಗಳಿಗಾಗಿ ಕೆ ಎಲ್ ರಾಹುಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ನಾಯಕ ಪಟ್ಟ ಕಟ್ಟಲಾಯಿತು. ಭಾರತ ತಂಡದ ಭವಿಷ್ಯದ ನಾಯಕತ್ವವನ್ನು ಗಮನದಲ್ಲಿಟ್ಟುಕೊಂಡು ಶುಭ್‌ಮನ್ ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ರೋಹಿತ್ ಶರ್ಮಾ ಎಲ್ಲಿಯವರೆಗೆ ಭಾರತ ತಂಡದಲ್ಲಿ ಮುಂದುವರೆಯುತ್ತಾರೆ ಎನ್ನುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಇನ್ನು ಕೆ ಎಲ್ ರಾಹುಲ್ ಹಿರಿಯ ಆಟಗಾರರಾಗಿದ್ದು, ಇನ್ನೂ ಮೂರ್ನಾಲ್ಕು ವರ್ಷ ಭಾರತ ತಂಡದಲ್ಲಿರುವ ಸಾಧ್ಯತೆಯಿದೆ. ಹೀಗಾಗಿ ರಾಹುಲ್ ಬ್ಯಾಕ್‌ಅಪ್ ನಾಯಕನಾಗಿ ರೆಡಿ ಮಾಡುವ ಉದ್ದೇಶದಿಂದ ರೋಹಿತ್ ಬದಲಿಗೆ ಕೆ ಎಲ್ ರಾಹುಲ್ ಅವರಿಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.
2024ರ ಆಗಸ್ಟ್‌ನಲ್ಲಿ ರಿಷಭ್ ಪಂತ್ ಕೊನೆಯ ಬಾರಿಗೆ ಭಾರತ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕಳೆದೊಂದು ವರ್ಷದಲ್ಲಿ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಈ ಮಾದರಿಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಕಮ್‌ಬ್ಯಾಕ್ ಸರಣಿಯಲ್ಲೇ ಪಂತ್‌ಗೆ ನಾಯಕತ್ವ ನೀಡುವುದು ಸರಿಯಲ್ಲ ಎನ್ನುವ ಉದ್ದೇಶದಿಂದ ಚೀಫ್ ಸೆಲೆಕ್ಟರ್ಸ್ ಹಾಗೂ ಹೆಡ್ ಕೋಚ್ ರಾಹುಲ್‌ಗೆ ನಾಯಕತ್ವ ಪಟ್ಟ ನೀಡಿದ್ದಾರೆ ಎಂದು ವರದಿಯಾಗಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಳಿಕ ಈಗಿರುವ ಆಟಗಾರರ ಪೈಕಿ ಕೆ ಎಲ್ ರಾಹುಲ್‌ಗೆ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಅನುಭವ ಇದೆ. ಈ ಹಿಂದೆಯೂ ಕೆ ಎಲ್ ರಾಹುಲ್, ಏಕದಿನ ಕ್ರಿಕೆಟ್ ಮಾದರಿಯಲ್ಲಿ ನಾಯಕನಾಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಈ ಮೊದಲು ಕೆ ಎಲ್ ರಾಹುಲ್ 12 ಬಾರಿ ನಾಯಕನಾಗಿ ಭಾರತ ಏಕದಿನ ತಂಡವನ್ನು ಮುನ್ನಡೆಸಿದ್ದು, ಈ ಪೈಕಿ 8 ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ. ರಾಹುಲ್ ನಾಯಕತ್ವದಲ್ಲಿ ಭಾರತ ಕೇವಲ 4 ಪಂದ್ಯಗಳಲ್ಲಿ ಮಾತ್ರ ಸೋತಿದೆ. ನಾಯಕತ್ವದ ಅನುಭವವನ್ನು ಗಮನದಲ್ಲಿಟ್ಟುಕೊಂಡು ರಾಹುಲ್‌ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.