Ind vs SA ODI Series: ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾ ಕಠಿಣ ಅಭ್ಯಾಸ

Suvarna News   | Asianet News
Published : Jan 18, 2022, 09:30 AM ISTUpdated : Jan 18, 2022, 09:36 AM IST
Ind vs SA ODI Series: ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾ ಕಠಿಣ ಅಭ್ಯಾಸ

ಸಾರಾಂಶ

* ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಜನವರಿ 19ರಿಂದ ಆರಂಭ * ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್‌. ರಾಹುಲ್‌ಗೆ ನಾಯಕ ಪಟ್ಟ * ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾದ ಟೀಂ ಇಂಡಿಯಾ

ಪಾರ್ಲ್‌(ಜ.18)‍: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಸೋಲಿನ ಬಳಿಕ ಬುಧವಾರದಿಂದ(ಜ.19) ಆರಂಭಗೊಳ್ಳಲಿರುವ ಏಕದಿನ ಸರಣಿಯ ಸವಾಲನ್ನು ಎದುರಿಸಲು ಟೀಂ ಇಂಡಿಯಾ (Team India) ಸೋಮವಾರದಿಂದ ಸಿದ್ಧತೆ ಆರಂಭಿಸಿದೆ. ಭಾನುವಾರ ಕೇಪ್‌ಟೌನ್‌ನಿಂದ ಪಾರ್ಲ್‌ಗೆ ಆಗಮಿಸಿದ ತಂಡ, ಸೋಮವಾರ ನೆಟ್ಸ್‌ನಲ್ಲಿ ಬೆವರಿಳಿಸಿತು. ಕೆ.ಎಲ್‌.ರಾಹುಲ್‌ (KL Rahul) ಮೊದಲ ಬಾರಿಗೆ ಏಕದಿನ ತಂಡವನ್ನು ಮುನ್ನಡೆಸಲಿದ್ದು, ಅಭ್ಯಾಸದ ವೇಳೆ ಅವರು ತಮ್ಮ ಸಹ ಆಟಗಾರರೊಂದಿಗೆ ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು. ಟೆಸ್ಟ್‌ ನಾಯಕತ್ವಕ್ಕೆ (Test Captaincy) ದಿಢೀರ್‌ ರಾಜೀನಾಮೆ ನೀಡಿದ ವಿರಾಟ್‌ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹರಿಣಗಳೆದುರು 2-1 ಅಂತರದಲ್ಲಿ ಸರಣಿ ಕೈಚೆಲ್ಲಿತ್ತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದರು.ಹೀಗಾಗಿ, ಇದೀಗ ವಿರಾಟ್ ಕೊಹ್ಲಿ ಯಾವುದೇ ನಾಯಕತ್ವದ ಒತ್ತಡವಿಲ್ಲದೇ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದರ ಜತೆಗೆ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಾದರೂ ಕೊಹ್ಲಿ ಶತಕ ಬಾರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. 

ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಕೆ.ಎಲ್‌. ರಾಹುಲ್ ಸಂಪೂರ್ಣ ಏಕದಿನ ಸರಣಿಗೆ ಭಾರತ ತಂಡವನ್ನು ಮುನ್ನಡೆಸುತ್ತಿದ್ದು, ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಐಪಿಎಲ್ ಟೂರ್ನಿಯಲ್ಲಿ ಮಿಂಚಿರುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್, ಲೆಗ್ ಸ್ಪಿನ್ನರ್‌ ಯುಜುವೇಂದ್ರ ಚಹಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇನ್ನುಳಿದಂತೆ ಅನುಭವಿ ಬ್ಯಾಟರ್ ಶಿಖರ್ ಧವನ್‌ ಕೂಡಾ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದು, ಆರಂಭಿಕರಾಗಿ ಕೆ.ಎಲ್‌. ರಾಹುಲ್ ಜತೆಗೆ ಋತುರಾಜ್ ಗಾಯಕ್ವಾಡ್‌, ಇಶಾನ್ ಕಿಶನ್ ಹಾಗೂ ಶಿಖರ್ ಧವನ್ ನಡುವೆ ನೇರಾ ಪೈಪೋಟಿ ಏರ್ಪಟ್ಟಿದೆ. 

ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಕೂಡಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇದೆಲ್ಲದರ ಜತೆಗೆ ವೇಗಿ ಮೊಹಮ್ಮದ್ ಸಿರಾಜ್ ಏಕದಿನ ಸರಣಿಗೆ ಸಂಪೂರ್ಣ ಫಿಟ್ ಆಗಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ವಿಂಡೀಸ್‌ ಸರಣಿಗೆ ರೋಹಿತ್‌ ಫಿಟ್‌ ಆಗುವ ನಿರೀಕ್ಷೆ

ನವದೆಹಲಿ: ಭಾರತ ಸೀಮಿತ ಓವರ್‌ ತಂಡದ ನಾಯಕ ರೋಹಿತ್‌ ಶರ್ಮಾ ಮುಂದಿನ ತಿಂಗಳು ತವರಿನಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ ವೇಳೆಗೆ ಸಂಪೂರ್ಣ ಫಿಟ್‌ ಆಗುವ ನಿರೀಕ್ಷೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್‌ ತಂಡದ ಉಪನಾಯಕ, ಏಕದಿನ ತಂಡದ ನಾಯಕನಾಗಿ ತೆರಳಬೇಕಿದ್ದ ರೋಹಿತ್‌, ಸ್ನಾಯು ಸೆಳೆತದಿಂದಾಗಿ ಪ್ರವಾಸದಿಂದ ಹೊರಬಿದ್ದರು.

Ind vs SA: ಇಲ್ಲಿದೆ ನೋಡಿ ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಕಂಪ್ಲೀಟ್‌ ಡೀಟೈಲ್ಸ್‌..!

ಬುಧವಾರ(ಜ.19)ದಿಂದ ದ.ಆಫ್ರಿಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್‌ ಬದಲು ಕೆ.ಎಲ್‌.ರಾಹುಲ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ‘ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಪುನಶ್ವೇತನ ಶಿಬಿರದಲ್ಲಿ ಪಾಲ್ಗೊಂಡಿರುವ ರೋಹಿತ್‌ ಚೇತರಿಸಿಕೊಳ್ಳುತ್ತಿದ್ದಾರೆ. ವಿಂಡೀಸ್‌ ವಿರುದ್ಧದ ಏಕದಿನ ಸರಣಿ ಆರಂಭಕ್ಕೆ ಇನ್ನೂ 3 ವಾರ ಸಮಯವಿದೆ. ಆ ವೇಳೆಗೆ ಅವರು ಸಂಪೂರ್ಣ ಫಿಟ್‌ ಆಗಲಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ವೆಸ್ಟ್‌ಇಂಡೀಸ್‌ ವಿರುದ್ಧ ಭಾರತ 3 ಏಕದಿನ, 3 ಟಿ20 ಪಂದ್ಯಗಳ ಸರಣಿಗಳನ್ನು ಆಡಲಿದೆ. ಫೆಬ್ರವರಿ 6ರಿಂದ 12ರ ವರೆಗೂ ಏಕದಿನ ಸರಣಿ ನಡೆಯಲಿದ್ದು, ಫೆಬ್ರವರಿ 15ರಿಂದ 20ರ ವರೆಗೂ ಟಿ20 ಸರಣಿ ನಡೆಯಲಿದೆ. ಒಂದು ವೇಳೆ ರೋಹಿತ್‌ ಫಿಟ್‌ ಆಗದಿದ್ದರೆ ಕೆ.ಎಲ್‌.ರಾಹುಲ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!