ಟೀಂ ಇಂಡಿಯಾಗೆ ಮೊದಲ ದಿನವೇ ಆಘಾತ.. ಕೆಎಲ್‌ ರಾಹುಲ್‌ಗೆ ಗಾಯ, ತಂಡದಲ್ಲಿ ಭಾರೀ ಆತಂಕ

Published : Aug 15, 2026, 07:06 PM IST
kl rahul injured

ಸಾರಾಂಶ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತದ ಬ್ಯಾಟರ್ ಕೆ ಎಲ್ ರಾಹುಲ್ ಅಜೇಯ 77 ರನ್ ಗಳಿಸಿದ್ದಾಗ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಗಾಯಗೊಂಡು ಹೊರನಡೆದಿದ್ದಾರೆ. ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ ಅಜೇಯ 131 ರನ್ ಗಳಿಸಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಟೆಸ್ಟ್ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಇತಿಹಾಸ ಬರೆದಿದ್ದಾರೆ.

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್‌ಗಳು ಮೊದಲ ದಿನ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇದೇ ವೇಳೆ ತಂಡದ ಪ್ರಮುಖ ಬ್ಯಾಟರ್ ಕೆ ಎಲ್ ರಾಹುಲ್ ಗಾಯಗೊಂಡು ಹೊರನಡೆದಿರುವುದು (Retired Hurt) ಆತಂಕ ಮೂಡಿಸಿದೆ. ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್ 77 ರನ್ ಗಳಿಸಿದ್ದಾಗ ತೀವ್ರ ನೋವಿನ ಕಾರಣ ಪೆವಿಲಿಯನ್ ಸೇರಬೇಕಾಯಿತು.

ತೀವ್ರ ನೋವಿನಿಂದ ಮೈದಾನ ತೊರೆದ ರಾಹುಲ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಕೆ ಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಲು ಯತ್ನಿಸಿದರು. ಆದರೆ ಜೈಸ್ವಾಲ್ (32 ರನ್) ರನೌಟ್ ಆದ ನಂತರ, ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಇನ್ನಿಂಗ್ಸ್ ಮುನ್ನಡೆಸಿದರು. ಅರ್ಧಶತಕ ಪೂರೈಸಿ ಶತಕದತ್ತ ಸಾಗುತ್ತಿದ್ದ ರಾಹುಲ್, ಟೀ-ಬ್ರೇಕ್ ಸಮಯದಲ್ಲಿ ಕೈ ಮತ್ತು ಕಾಲುಗಳ ಸ್ನಾಯು ಸೆಳೆತಕ್ಕೆ (Cramps) ಒಳಗಾದರು. ಮೂರನೇ ಸೆಷನ್‌ನಲ್ಲಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸಿದರಾದರೂ, ತೀವ್ರ ನೋವಿನ ಕಾರಣ ಆಟ ಮುಂದುವರಿಸಲು ಸಾಧ್ಯವಾಗದೆ ರಿಟೈರ್ಡ್ ಹರ್ಟ್ ಆಗಲು ನಿರ್ಧರಿಸಿದರು.

ರಾಹುಲ್ ಅವರ ಜಾಗದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ಶುಭ್‌ಮನ್ ಗಿಲ್ 16 ರನ್ ಗಳಿಸಿ ಔಟಾದರು. ರಾಹುಲ್ ಅವರು ಫಿಸಿಯೋ ಸಹಾಯದಿಂದ ನೋವಿನಲ್ಲೇ ಮೆಟ್ಟಿಲು ಹತ್ತುತ್ತಿರುವ ದೃಶ್ಯಗಳು ಅವರ ಗಾಯದ ತೀವ್ರತೆಯನ್ನು ತೋರಿಸುತ್ತಿವೆ. ಮೊದಲ ದಿನ ಮಳೆಯಿಂದಾಗಿ ಕೇವಲ 73 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ದಿನದಾಟದ ಮುಕ್ತಾಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ. ಮತ್ತೋರ್ವ ಕನ್ನಡಿಗ ದೇವದತ್ ಪಡಿಕ್ಕಲ್ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ. ಸದ್ಯ ಅವರು 131 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ವಿಶೇಷವೆಂದರೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಟೆಸ್ಟ್ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ.

ಬಿಸಿಸಿಐ (BCCI) ಇನ್ನೂ ಕೆ ಎಲ್ ರಾಹುಲ್ ಅವರ ಗಾಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಲಭ್ಯವಿರುವ ದೃಶ್ಯಗಳ ಪ್ರಕಾರ ಅವರ ಗಾಯ ಗಂಭೀರವಾಗಿರುವಂತೆ ತೋರುತ್ತಿದೆ. ಈಗಾಗಲೇ ಸಾಯಿ ಸುದರ್ಶನ್ ಮತ್ತು ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಈಗ ರಾಹುಲ್ ಕೂಡ ಗಾಯಗೊಂಡಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಸದ್ಯ ಕ್ರೀಸ್‌ನಲ್ಲಿ ಪಡಿಕ್ಕಲ್ (131*) ಜೊತೆಗೆ ರಿಷಭ್ ಪಂತ್ (27*) ಬ್ಯಾಟಿಂಗ್ ನಡೆಸುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಮ್ಯಾಚ್ ನಡೆಯುವಾಗಲೇ ಫೋನ್‌ನಲ್ಲಿ ಗರ್ಲ್‌ಫ್ರೆಂಡ್ ಜೊತೆ ಮಾತು; 26 ವರ್ಷದ ಸ್ಟಾರ್ ಕ್ರಿಕೆಟರ್‌ಗೆ ಬಿಬಿಸಿಐ ಶಾಕ್!
ಚೊಚ್ಚಲ ಟೆಸ್ಟ್‌ ಶತಕ ಚಚ್ಚಿದ ದೇವದತ್ ಪಡಿಕ್ಕಲ್; ಗಾಲೆ ಟೆಸ್ಟ್‌ನಲ್ಲಿ ಕನ್ನಡಿಗರದ್ದೇ ದರ್ಬಾರ್..!