IPL 2021: ಪಂಜಾಬ್ ಕಿಂಗ್ಸ್ ಅಬ್ಬರದ ಬ್ಯಾಟಿಂಗ್; ರಾಜಸ್ಥಾನಕ್ಕೆ 222 ರನ್ ಟಾರ್ಗೆಟ್!

By Suvarna NewsFirst Published Apr 12, 2021, 9:29 PM IST
Highlights

ಐಪಿಎಲ್ ಟೂರ್ನಿ 14ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಸುಸ್ತಾಗಿದೆ. ಬೌಂಡರಿ ಸಿಕ್ಸರ್ ಸುರಿಮಳೆ ಮೂಲಕ ಪಂಜಾಬ್ ಕಿಂಗ್ಸ್ 221 ರನ್ ಕಲೆಹಾಕಿದೆ. ಪಂಜಾಬ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

ಮುಂಬೈ(ಏ.12): ಪಂಜಾಬ್ ನಾಯಕ ಕೆಎಲ್ ರಾಹುಲ್, ಕ್ರಿಸ್ ಗೇಲ್ ಹಾಗೂ ದೀಪಕ್ ಹೂಡ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಬೆಚ್ಚಿ ಬಿದ್ದಿದೆ. ಮಯಾಂಗ್ ಅಗರ್ವಾಲ್ ಹೊರತು ಪಡಿಸಿದರೆ ಉಳಿದೆಲ್ಲಾ ಬ್ಯಾಟ್ಸ್‌ಮನ್ ರಾಜಸ್ಥಾನ ವಿರುದ್ಧ ಅಬ್ಬರಿಸಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್  ವಿಕೆಟ್ 6 ನಷ್ಟಕ್ಕೆ 221 ರನ್ ಸಿಡಿಸಿದೆ

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್, ಆರಂಭದಲ್ಲಿ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು. ಅಗರ್ವಾಲ್ 14 ರನ್ ಸಿಡಿಸಿ ಔಟಾದರು. ಆದರೆ ಕ್ರಿಸ್ ಗೇಲ್ ಜೊತೆ ಸೇರಿದ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು.

ಕ್ರಿಸ್ ಗೇಲ್ 28 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 40 ರನ್ ಸಿಡಿಸಿ ಔಟಾದರು. ಆದರೆ ರಾಹುಲ್ ಅಬ್ಬರ ಮುಂದುರಿಯಿತು. ಇತ್ತ ದೀಪಕ್ ಹೂಡ ಪಂಜಾಬ್ ತಂಡದ ರನ್ ವೇಗ ಹೆಚ್ಚಿಸಿದರು. ಸಿಕ್ಸರ್ ಮೂಲಕ ಅಬ್ಬರಿಸಿದ ಹೂಡ ಕೇವಲ 20 ಎಸೆತದಲ್ಲಿ ಹಾಫ್ ಸೆಂಚುರಿ ದಾಖಲಿಸಿದರು. 

ಹೂಡ ಇನ್ನಿಂಗ್ಸ್ ಪಂದ್ಯದ ಗತಿಯನ್ನೇ ಬದಲಿಸಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಪಂಜಾಬ್ 17 ಓವರ್‌ಗಳಲ್ಲಿ 180 ರನ್ ಗಡಿ ದಾಟಿತು. ಹೂಡ 28 ಎಸೆತದಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 64 ರನ್ ಸಿಡಿಸಿ ಔಟಾದರು. ನಿಕೋಲಸ್ ಪೂರನ್ ಡಕೌಟ್ ಆದರು. 

ರಾಹುಲ್‌ಗೆ ಶಾರೂಖ್ ಖಾನ್ ಉತ್ತಮ ಸಾಥ್ ನೀಡಿದರು. ರಾಹುಲ್ 50 ಎಸೆತದಲ್ಲಿ 91 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 221 ರನ್ ಸಿಡಿಸಿತು. 14ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 200 ರನ್ ಗಡಿ ದಾಟಿದ ಮೊದಲ ತಂಡ ಅನ್ನೋ ಹೆಗ್ಗಳಿಕೆಗೆ ಪಂಜಾಬ್ ಪಾತ್ರವಾಗಿದೆ.

click me!