
ಪುಣೆ (ಅ.21): ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಕೇದಾರ್ ಜಾಧವ್ (Kedar Jadhav) ಅವರ ಸಂಪೂರ್ಣ ಭಿನ್ನವಾದ ಅವತಾರ ಸಾರ್ವಜನಿಕವಾಗಿ ಹೊರಬಿದ್ದಿದೆ. ಮೂಲತಃ ಮಹಾರಾಷ್ಟ್ರದ ಪುಣೆ ಮೂಲದವರಾದ ಕೇದಾರ್ ಜಾಧವ್, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿಜಯದಶಮಿ ಉತ್ಸವದ ಪಥ ಸಂಚಲನದಲ್ಲಿ ಸಂಪೂರ್ಣ ಸಂಘದ ಗಣವೇಷ ತೊಟ್ಟು ಭಾಗವಹಿಸಿದ್ದು, ಈ ಕುರಿತು ಅವರು ಹಂಚಿಕೊಂಡಿರುವ ಫೋಟೋ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಟೀಮ್ ಇಂಡಿಯಾ ಪರ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೇದಾರ್ ಜಾಧವ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಆಳವಾದ ನಂಟಿದೆ ಎಂಬ ವಿಷಯ ಹಲವರಿಗೆ ತಿಳಿದಿರಲಿಲ್ಲ. ಅಕ್ಟೋಬರ್ 20 ರಂದು ಪುಣೆಯ ಡೆಕ್ಕನ್ ಜಿಮ್ಖಾನಾ ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಆರ್ಎಸ್ಎಸ್ ವಿಜಯದಶಮಿ ಉತ್ಸವದ ಕಾರ್ಯಕ್ರಮದಲ್ಲಿ ಜಾಧವ್ ಸಕ್ರಿಯವಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಕೇದಾರ್ ಜಾಧವ್ ಅವರು ಆರ್ಎಸ್ಎಸ್ ಸಮವಸ್ತ್ರದಲ್ಲಿರುವ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ (Instagram) ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಬಿಳಿ ಶರ್ಟ್, ಖಾಕಿ ಪ್ಯಾಂಟ್, ಕಪ್ಪು ಟೋಪಿ ಧರಿಸಿದ್ದು, ಕೈಯಲ್ಲಿ ದಂಡ (ಕೋಲು) ಹಿಡಿದುಕೊಂಡು ಶಿಸ್ತಿನ ಸ್ವಯಂಸೇವಕನಂತೆ ಮಿಂಚಿದ್ದಾರೆ. ಫೋಟೋದೊಂದಿಗೆ ಆರ್ಎಸ್ಎಸ್ ವಿಚಾರಧಾರೆ ಹಾಗೂ ಪಥ ಸಂಚಲನಕ್ಕೆ ಸಂಬಂಧಿಸಿದ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, "ಸಂಘದ ಪಥ ಸಂಚಲನ ಎಂದರೆ ಕೇವಲ ಶಿಸ್ತುಬದ್ಧ ಹೆಜ್ಜೆಗಳಷ್ಟೇ ಅಲ್ಲ..." ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
ಪ್ರಸ್ತುತ 41 ವರ್ಷ ವಯಸ್ಸಿನ ಕೇದಾರ್ ಜಾಧವ್, 2024 ರ ಜೂನ್ 3 ರಂದು ಕ್ರಿಕೆಟ್ನ ಎಲ್ಲಾ ಮಾದರಿಗಳಿಂದ (All forms of cricket) ನಿವೃತ್ತಿ ಘೋಷಿಸಿದ್ದರು. ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕವೇ ತಮ್ಮ ನಿವೃತ್ತಿಯ ನಿರ್ಧಾರವನ್ನು ಕ್ರೀಡಾಲೋಕಕ್ಕೆ ತಿಳಿಸಿದ್ದರು. ಕೇದಾರ್ ಜಾಧವ್ 2014 ರ ನವೆಂಬರ್ 16 ರಂದು ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದ (ODI) ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಏಕದಿನ ಕ್ರಿಕೆಟ್ (ODI): ಭಾರತದ ಪರ ಒಟ್ಟು 73 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಕೇದಾರ್ ಜಾಧವ್, 42.09 ರ ಉತ್ತಮ ಸರಾಸರಿಯಲ್ಲಿ 1,389 ರನ್ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 2 ಭರ್ಜರಿ ಶತಕಗಳು ಹಾಗೂ 6 ಅರ್ಧಶತಕಗಳು ಸೇರಿವೆ. ಉಪಯುಕ್ತ ಪಾರ್ಟ್-ಟೈಮ್ ಬೌಲರ್ ಕೂಡ ಆಗಿದ್ದ ಇವರು, ಏಕದಿನ ಕ್ರಿಕೆಟ್ನಲ್ಲಿ 27 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಟಿ20 ಕ್ರಿಕೆಟ್ (T20I): ಭಾರತದ ಪರ 9 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಇವರು 123.23 ರ ಸ್ಟ್ರೈಕ್ ರೇಟ್ನಲ್ಲಿ 58 ರನ್ ಗಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೇದಾರ್ ಜಾಧವ್ ಮುಖ್ಯವಾಗಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ 'ಚೆನ್ನೈ ಸೂಪರ್ ಕಿಂಗ್ಸ್' (CSK) ಹಾಗೂ 'ಸನ್ರೈಸರ್ಸ್ ಹೈದರಾಬಾದ್' (SRH) ತಂಡಗಳ ಪರ ಆಡಿದ್ದಾರೆ. ಸಿಎಸ್ಕೆ ಪರ ಆಡುವಾಗ ಹಲವು ತುರ್ತು ಸಂದರ್ಭಗಳಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ಐಪಿಎಲ್ನಲ್ಲಿ ಒಟ್ಟು 95 ಪಂದ್ಯಗಳನ್ನು ಆಡಿರುವ ಇವರು 123.17 ರ ಸ್ಟ್ರೈಕ್ ರೇಟ್ನಲ್ಲಿ 4 ಅರ್ಧಶತಕಗಳೊಂದಿಗೆ 1,196 ರನ್ಗಳನ್ನು ಗಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.