ದಾವಣಗೆರೆ ಕ್ರಿಕೆಟ್ ಅಕಾಡೆಮಿ ಆಟಗಾರ ಶ್ರೇಯಸ್ ಮೋವಾ ಟಿ-20 ವಿಶ್ವಕಪ್‌ನಲ್ಲಿ ಕೆನಡಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರತಿಭಾವಂತ ವಿಕೆಟ್ ಕೀಪರ್ ಹಾಗೂ ಮಧ್ಯಮ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಶ್ರೇಯಸ್ ಮೋವಾ ತಂಡ ಭಾನುವಾರ ಮೊದಲ ಪಂದ್ಯ ಆಡಲಿದೆ ಎಂದರು.
ದಾವಣಗೆರೆ: ದಾವಣಗೆರೆಯಲ್ಲಿ ಆಡಿ ಬೆಳೆದ ಯುವಕ ಶ್ರೇಯಸ್ ಮೋವಾ ಅಮೆರಿಕಾದಲ್ಲಿ ಆರಂಭ ಆಗುತ್ತಿರುವ ಟಿ-20 ವಿಶ್ವಕಪ್ ಪಂದ್ಯಾವಳಿ- 2024ರಲ್ಲಿ ಕೆನಡಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆ ಮೂಲಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಕೀರ್ತಿ ತಂದಿದ್ದಾರೆ. ವಿಶ್ವಕಪ್‌ನಲ್ಲಿ ನಮ್ಮೂರ ಹುಡುಗ ಅತ್ಯುನ್ನತ ಸಾಧನೆ ಮಾಡಲಿ ಎಂದು ದಾವಣಗೆರೆ ಕ್ರಿಕೆಟ್ ಅಕಾಡೆಮಿ ತರಬೇತುದಾರ ಗೋಪಾಲಕೃಷ್ಣ ಶುಭ ಕೋರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಕ್ರಿಕೆಟ್ ಅಕಾಡೆಮಿ ಆಟಗಾರ ಶ್ರೇಯಸ್ ಮೋವಾ ಟಿ-20 ವಿಶ್ವಕಪ್‌ನಲ್ಲಿ ಕೆನಡಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರತಿಭಾವಂತ ವಿಕೆಟ್ ಕೀಪರ್ ಹಾಗೂ ಮಧ್ಯಮ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಶ್ರೇಯಸ್ ಮೋವಾ ತಂಡ ಭಾನುವಾರ ಮೊದಲ ಪಂದ್ಯ ಆಡಲಿದೆ ಎಂದರು.
ಶ್ರೇಯಸ್ ಮೋವಾ 2006ರಿಂದ 2016ರವರೆಗೆ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದರು. ಸೇಂಟ್ ಜಾನ್ಸ್ ಶಾಲೆಯಲ್ಲಿ 9ನೇ ತರಗತಿವರೆಗೆ, 10ನೇ ತರಗತಿ ಮಾಡ್ರನ್ ಶಾಲೆಯಲ್ಲಿ ಓದಿ, ಇಲ್ಲಿನ ಬಿಐಇಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮಾಡಿ, ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ತೆರಳಿದ್ದರು. ಕೆನಡಾದಲ್ಲೂ ಕ್ರಿಕೆಟ್ ಆಸಕ್ತಿ ಬಿಡದ ಶ್ರೇಯಸ್, ಇದೀಗ ಅಲ್ಲಿನ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಮೂಲಕ ನಮ್ಮೆಲ್ಲರಿಗೂ ಹೆಮ್ಮೆ ಮೂಡಿಸಿದ್ದಾರೆ ಎಂದು ಹೇಳಿದರು.
ಅಕಾಡೆಮಿ ಹಾಗೂ ಕೆಎಸ್‌ಸಿಎ ಹಿರಿಯ ತರಬೇತುದಾರ, ಹಾಲಿ ಶಿವಮೊಗ್ಗದಲ್ಲಿ ಮುಖ್ಯ ಕೋಚ್ ಆಗಿರುವ ಪಿ.ವಿ.ನಾಗರಾಜ ಪಂಡಿತ್ ಬಳಿ ತರಬೇತಿ ಪಡೆದಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂತರ ರಾಜ್ಯ ವಯೋಮಿತಿಯ 19 ವರ್ಷ, 16 ವರ್ಷದ ಒಳಗಿನ ತಂಡವನ್ನು ಪ್ರತಿನಿಧಿಸಿದ್ದ ಶ್ರೇಯಸ್ ಮೋವಾ, ತುಮಕೂರು ಕ್ರಿಕೆಟ್ ವಲಯದ ಸಂಚಾಲಕ ಕೆ.ಶಶಿಧರ ನೇತೃತ್ವದ ವೀನಸ್ ಕ್ರಿಕೆಟ್ ತಂಡವನ್ನು ಸಹ ಸುಮಾರು ವರ್ಷ ಪ್ರತಿನಿಧಿಸಿದ್ದರು. ಆರ್.ವಿನಯಕುಮಾರ ಭಾರತ ತಂಡ ಪ್ರತಿನಿಧಿಸಿದ್ದರೆ, ಶ್ರೇಯಸ್ ಮೋವಾ ಕೆನಡಾ ತಂಡಪ್ರತಿನಿಧಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಅಮೆರಿಕಾ ಬದಲು ಕೆನಡಾ ಆಯ್ಕೆ:
ಶ್ರೇಯಸ್ ಮೋವಾ ತಂದೆ ಎಂ.ಜಿ.ವಾಸುದೇವ ರೆಡ್ಡಿ ಮಾತನಾಡಿ, ತಮ್ಮ ಮನೆಯಲ್ಲಿ ಕ್ರಿಕೆಟ್ ಆಟಗಾರರ ಸಂಖ್ಯೆ ಹೆಚ್ಚು. ತಾವು ಚಿಕ್ಕಪ್ಪ, ದೊಡ್ಡಪ್ಪ, ಮಾವಂದಿರು ಹೀಗೆ ಎಲ್ಲರೂ ಕ್ರಿಕೆಟ್ ಆಟಗಾರರು. ಅದೇ ಪ್ರಭಾವ ಶ್ರೇಯಸ್ ಮೇಲೂ ಬಿದ್ದಿತು. ಎಂಜಿನಿಯರಿಂಗ್ ಮುಗಿಸಿದ ನಂತರ ಅಮೆರಿಕಾದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಕ್ಕರೂ, ಅಲ್ಲಿ ಕ್ರಿಕೆಟ್ ಇಲ್ಲ ಎಂಬ ಕಾರಣಕ್ಕೆ ಹೋಗಲಿಲ್ಲ. ಅನಂತರ ಕೆನಡಾದಲ್ಲಿ ಅವಕಾಶ ಸಿಕ್ಕಾಗ ಖುಷಿಯಿಂದ ಹೋದ ಶ್ರೇಯಸ್, ಈಗ ಅದೇ ದೇಶದ ತಂಡವನ್ನು ಪ್ರತಿನಿಧಿಸುತ್ತಿರುವುದು ನಮ್ಮ ಖುಷಿ ಹೆಚ್ಚಿಸಿದೆ ಎಂದರು.
ಕೆನಡಾದಲ್ಲಿಯೇ ಉನ್ನತ ಶಿಕ್ಷಣ ಪಡೆದು, ಉದ್ಯೋಗವನ್ನೂ ಪಡೆದ ಶ್ರೇಯಸ್ ಕೆನಡಾ ಪೌರತ್ವವನ್ನೂ ಪಡೆದರು. ಜೊತೆಗೆ ಕ್ರಿಕೆಟ್ ಅಭ್ಯಾಸ, ಪಂದ್ಯಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದರು. ಉತ್ತಮ ಕೀಪರ್, ಬ್ಯಾಟ್ಸ್‌ಮನ್ ಆಗಿರುವ ಶ್ರೇಯಸ್ ಕೆನಡಾ ರಾಷ್ಟ್ರೀಯ ತಂಡವನ್ನು ಹಲವಾರು ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಇದೀಗ ಟಿ-20 ವಿಶ್ವಕಪ್‌ಗೆ ಆಯ್ಕೆಯಾಗಿ, ಉತ್ತಮ ಸಾಧನೆ ಮೆರೆಯಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ ಎಂದರು.
ತಾಯಿ ಎನ್.ಯಶೋಧ ಮಾತನಾಡಿ, ತಮ್ಮ ಮಗ ಶ್ರೇಯಸ್ ಕೆನಡಾ ತಂಡವನ್ನು ಪ್ರತಿನಿಧಿಸುತ್ತಿದ್ದಾನೆ. ಭಾರತದ ಮೇಲೆ ಕೆನಡಾ ಪಂದ್ಯವೂ ಇದೆ. ನಮ್ಮ ಮಗ ಭಾರತದ ವಿರುದ್ಧ ಉತ್ತಮವಾಗಿ ಆಡಬೇಕು. ಆ ಪಂದ್ಯದಲ್ಲಿ ಭಾರತವೇ ಗೆಲ್ಲಬೇಕೆಂದು ಪ್ರಾರ್ಥಿಸುತ್ತೇವೆ. ಶ್ರೇಯಸ್‌ಗೆ ರಾಹುಲ್ ದ್ರಾವಿಡ್ ನೆಚ್ಚಿನ ಆಟಗಾರ, ಅವನ ಬ್ಯಾಟಿಂಗ್ ದ್ರಾವಿಡ್ ಶೈಲಿಯಲ್ಲಿದೆ. ವಿರಾಟ್ ಕೊಯ್ಲಿ ಜೊತೆಗೆ ಫೋಟೋ ತೆಗೆಸಿಕೊಂಡು, ಕಳಿಸಲು ಹೇಳಿದ್ದೇನೆ. ನಮ್ಮ ರಾಜ್ಯದ ಕೆ.ಎಲ್. ರಾಹುಲ್ ಸಹ ತಮ್ಮ ಮೆಚ್ಚಿನ ಆಟಗಾರ. ಟಿ-20 ಸ್ಕ್ವಾಡ್‌ನಲ್ಲಿ ರಾಹುಲ್ ಇರಬೇಕಿತ್ತು ಎಂದರು.
ಅಕಾಡೆಮಿ ಕೋಚ್‌ಗಳಾದ ತಿಮ್ಮೇಶ, ಉಮೇಶ ಸಿರಿಗೆರೆ ಇತರರು ಇದ್ದರು.
ಶ್ರೇಯಸ್ ಮಾವನ ಮನೆಯಲ್ಲೂ ಸಂಭ್ರಮ
ತಮಗೆ ಸ್ಫೂರ್ತಿ, ಶ್ರೇಯಸ್ ಇಬ್ಬರು ಮಕ್ಕಳು. ಶ್ರೇಯಸ್‌ಗಿಂತ 7 ವರ್ಷ ದೊಡ್ಡವಳಾದ ಮಗಳು ಸಿಂಗಾಪುರದಲ್ಲಿದ್ದಾಳೆ. ಕೆನಡಾ ಟಿ-20 ವಿಶ್ವ ಕಪ್ ತಂಡವನ್ನು ಪ್ರತಿನಿಧಿಸುತ್ತಿರುವ ತಮ್ಮ ಶ್ರೇಯಸ್ ಮೋವಾ ಸಾಧನೆ ನಮಗೆ ಹೆಮ್ಮೆ ಮೂಡಿಸಿದೆ. ಹೈದರಾಬಾದ್‌ನ ಮಾಧುರಿ ಜೊತೆಗೆ ಶ್ರೇಯಸ್ ಮದುವೆಯಾಗಿದ್ದು, ಈಗ ಹೈದರಾಬಾದ್‌ನಲ್ಲೂ ಬೀಗರ ಮನೆಯಲ್ಲಿ ತುಂಬಾ ಖುಷಿಯಲ್ಲಿದ್ದಾರೆ. ಮಾಧುರಿ ಮನೆಯವರಿಗೂ ಕ್ರಿಕೆಟ್ ಹುಚ್ಚು, ಅಳಿಯನೂ ಕೆನಡಾ ತಂಡ ಪ್ರತಿನಿಧಿಸುತ್ತಿರುವುದಕ್ಕೆ ಖುಷಿಯಾಗಿದ್ದಾರೆ. ನನ್ನ ಮಗ ಶ್ರೇಯಸ್ ಭಾರತ ತಂಡವನ್ನು ಪ್ರತಿನಿಧಿಸಬೇಕು, ವಿರಾಟ್ ಕೊಯ್ಲಿ, ರೋಹಿತ್ ಶರ್ಮ, ಕೆ.ಎಲ್.ರಾಹುಲ್ ರಂತಹವರ ಜೊತೆ ಭಾರತ ತಂಡವನ್ನು ಪ್ರತಿನಿಧಿಸಿ, ತಂಡದ ಅವಿಭಾಜ್ಯ ಅಂಗವಾಗಬೇಕೆಂಬ ಕನಸು ನಮ್ಮಂತೆಯೇ ಶ್ರೇಯಸ್‌ಗೂ ಇದೆ ಎನ್ನುತ್ತಾರೆ ಶ್ರೇಯಸ್ ತಾಯಿ ಎನ್.ಯಶೋಧ.