ಐಪಿಎಲ್ 2021: ವಾರ್ನರ್ ತಲೆದಂಡ, ಸನ್‌ರೈಸರ್ಸ್‌ಗೆ ವಿಲಿಯಮ್ಸನ್‌ ಹೊಸ ನಾಯಕ

By Suvarna NewsFirst Published May 1, 2021, 5:33 PM IST
Highlights

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಬರಲು ಪರದಾಡುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ವಾರ್ನರ್ ಬದಲಿಗೆ ಇನ್ನುಳಿದ ಐಪಿಎಲ್‌ ಪಂದ್ಯಗಳಲ್ಲಿ ಆರೆಂಜ್ ಆರ್ಮಿಯನ್ನು ಕೇನ್‌ ವಿಲಿಯಮ್ಸನ್ ಮುನ್ನಡೆಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಹೈದರಾಬಾದ್‌(ಮೇ.01): ಸತತ ಸೋಲುಗಳಿಂದ ಕಂಗೆಟ್ಟಿದ್ದ ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ನಾಯಕ ಡೇವಿಡ್ ವಾರ್ನರ್‌ ತಲೆದಂಡವಾಗಿದ್ದು, ಇನ್ನುಳಿದ ಐಪಿಎಲ್ ಪಂದ್ಯಗಳಿಗೆ ಆರೆಂಜ್ ಆರ್ಮಿಯನ್ನು ಕೇನ್‌ ವಿಲಿಯಮ್ಸನ್‌ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೇವಿಡ್ ವಾರ್ನರ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 6 ಪಂದ್ಯಗಳನ್ನಾಡಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಗೆಲುವು ದಾಖಲಿಸಿದ್ದು ಬಿಟ್ಟರೆ, ಸನ್‌ರೈಸರ್ಸ್‌ ಹೈದರಾಬಾದ್ ತಂಡ ಉಳಿದೆಲ್ಲಾ ಪಂದ್ಯಗಳಲ್ಲೂ ಸೋಲಿನ ಕಹಿಯುಂಡಿದೆ.

IPL 2021: ಅಪರೂಪದ ದಾಖಲೆ ಬರೆಯಲು ಸಜ್ಜಾದ ರೋಹಿತ್, ರೈನಾ..!

🚨 Announcement 🚨 pic.twitter.com/B9tBDWwzHe

— SunRisers Hyderabad (@SunRisers)

ಇದರ ಬೆನ್ನಲ್ಲೇ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ಡೇವಿಡ್‌ ವಾರ್ನರ್‌ರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಹೀಗಿದ್ದು ವಾರ್ನರ್‌ ಸನ್‌ರೈಸರ್ಸ್‌ ತಂಡದಲ್ಲಿರಲಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ವಿದೇಶಿ ಆಟಗಾರರ ಕಾಂಬಿನೇಷನ್‌ನಲ್ಲೂ ಕೆಲವೊಂದು ಬದಲಾವಣೆಗಳಾಗಲಿವೆ ಎನ್ನುವುದನ್ನು ಸನ್‌ರೈಸರ್ಸ್ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಭಾನುವಾರ(ಮೇ.02)ದಂದು ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ದ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌ ಸನ್‌ರೈಸರ್ಸ್‌ ತಂಡವನ್ನು ಮುನ್ನಡೆಸಲಿದ್ದು, ಆರೆಂಜ್ ಆರ್ಮಿಯ ಅದೃಷ್ಟ ಬದಲಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 26 ಪಂದ್ಯಗಳ ಮುಕ್ತಾಯದ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇವಲ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
 

click me!