ಮೊದಲ ಟಿ20: ಜಾನಿ ಬೇರ್‌ಸ್ಟೋವ್ ಅಬ್ಬರಕ್ಕೆ ಬೆಚ್ಚಿಬಿದ್ದ ಹರಿಣಗಳು..!

By Suvarna NewsFirst Published Nov 28, 2020, 11:55 AM IST
Highlights

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೇಪ್‌ಟೌನ್(ನ.28): ಜಾನಿ ಬೇರ್‌ಸ್ಟೋವ್(86) ಅಜೇಯ ಅರ್ಧಶತಕದ ನೆರವಿನಿಂದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇಯಾನ್ ಮಾರ್ಗನ್ ಪಡೆ 1-0 ಮುನ್ನಡೆ ಸಾಧಿಸಿದೆ.

ಇಲ್ಲಿನ ನ್ಯೂಲ್ಯಾಂಡ್ಸ್‌ ಸ್ಟೇಡಿಯಂನಲ್ಲಿ ಶುಕ್ರವಾರ(ನ.27) ರಾತ್ರಿ ನಡೆದ ಮೊದಲ ಚುಟುಕು ಕ್ರಿಕೆಟ್‌ ಪಂದ್ಯದಲ್ಲಿ 180 ರನ್‌ಗಳ ಸವಾಲಿನ ಗುರಿಯನ್ನು ಇನ್ನು 4 ಎಸೆತಗಳು ಬಾಕಿ ಇರುವಂತೆಯೇ ಆಂಗ್ಲರ ಪಡೆ ಗೆಲುವಿನ ನಗೆ ಬೀರಿತು. ಬೃಹತ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ ಆರಂಭದಲ್ಲೇ ತಂಡ 34 ರನ್‌ ಕಲೆಹಾಕುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಆ ಬಳಿಕ ಬೆನ್ ಸ್ಟೋಕ್ಸ್(37) ಹಾಗೂ ಜಾನಿ ಬೇರ್‌ಸ್ಟೋವ್ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಅದರಲ್ಲೂ ಜಾನಿ ಬೇರ್‌ಸ್ಟೋವ್ ಕೇವಲ 48 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 86 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇಂಡೋ-ಆಸೀಸ್ ಮೊದಲ ಏಕದಿನ ಪಂದ್ಯದಲ್ಲಿ 2 ಅಪರೂಪದ ದಾಖಲೆ ನಿರ್ಮಾಣ..!

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ಮೊದಲ ಓವರ್‌ನಲ್ಲೇ ಬವುಮಾ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಎರಡನೇ ವಿಕೆಟ್‌ಗೆ ನಾಯಕ ಕ್ವಿಂಟನ್ ಡಿಕಾಕ್-ಫಾಫ್ ಡುಪ್ಲೆಸಿಸ್ ಜೋಡಿ 77 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಡಿಕಾಕ್ 30 ರನ್ ಬಾರಿಸಿದರೆ, ಮಾಜಿ ನಾಯಕ ಡುಪ್ಲೆಸಿಸ್ 58 ರನ್ ಬಾರಿಸಿ ಕರ್ರನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ವ್ಯಾನ್ ಡರ್ ಡ್ಯುಸೇನ್(37) ಹಾಗೂ ಹೆನ್ರಿಚ್ ಕ್ಲಾಸೇನ್(20) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಮೂಲಕ ಹರಿಣಗಳ ಪಡೆ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ: 179/6
ಫಾಫ್ ಡುಪ್ಲೆಸಿಸ್: 58
ಸ್ಯಾಮ್ ಕರನ್: 28/3

ಇಂಗ್ಲೆಂಡ್: 183/5
ಜಾನಿ ಬೇರ್‌ಸ್ಟೋವ್: 86
ಜಾರ್ಜ್ ಲಿಂಡೆ: 20/2
 

click me!