ಸಚಿನ್ ತೆಂಡೂಲ್ಕರ್ ಅಪರೂಪದ ವಿಶ್ವದಾಖಲೆ ಸರಿಗಟ್ಟಿದ ಜೋ ರೂಟ್! ಪಾಕ್ ವಿರುದ್ಧ ಇಂಗ್ಲೆಂಡ್ ನಾಯಕನ ಅಮೋಘ ಸಾಧನೆ

Published : Aug 21, 2026, 12:44 PM IST
Joe Root and Sachin Tendulkar

ಸಾರಾಂಶ

ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಜೋ ರೂಟ್, ಅತಿ ಹೆಚ್ಚು ಟೆಸ್ಟ್ ಅರ್ಧಶತಕಗಳ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ನಾಯಕನಾಗಿ 3000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಹೆಡಿಂಗ್ಲಿ: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್, ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಪಾಕ್ ವಿರುದ್ಧ 66 ರನ್ ಗಳಿಸಿ ಔಟಾದ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರೂ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ತಲಾ 68 ಅರ್ಧಶತಕಗಳನ್ನು ಬಾರಿಸಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಸಚಿನ್ 200 ಟೆಸ್ಟ್‌ಗಳ 329 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ರೂಟ್ ಕೇವಲ 167 ಟೆಸ್ಟ್‌ಗಳ 305 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಅಂದರೆ, ಸಚಿನ್‌ಗಿಂತ 33 ಇನ್ನಿಂಗ್ಸ್‌ ಕಡಿಮೆ ಆಡಿ ರೂಟ್ ಈ ಸಾಧನೆ ಮಾಡಿರುವುದು ವಿಶೇಷ.

ಸಂಕಷ್ಟದಲ್ಲಿದ್ದ ಇಂಗ್ಲೆಂಡ್‌ಗೆ ಆಸರೆಯಾದ ಜೋ ರೂಟ್

ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ಸ್ಕೋರ್ 171 ರನ್‌ಗಳನ್ನು ಬೆನ್ನಟ್ಟುವಾಗ ಇಂಗ್ಲೆಂಡ್ 48 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ರೂಟ್, ಜೋರ್ಡಾನ್ ಕಾಕ್ಸ್ ಜೊತೆಗೂಡಿ 204 ಎಸೆತಗಳಲ್ಲಿ 150 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು. ರೂಟ್ ಅವರ ಆಕರ್ಷಕ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಸೇರಿದ್ದವು. ಖುರ್ರಂ ಶೆಹಜಾದ್ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿ ಔಟಾಗುವ ಮುನ್ನ, ರೂಟ್ ಇಂಗ್ಲೆಂಡ್‌ಗೆ ಉತ್ತಮ ಮುನ್ನಡೆ ತಂದುಕೊಟ್ಟರು. ಪಾಕ್ ಎದುರು ಜೋ ರೂಟ್ 112 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 66 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತವರಿನ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿಯಲು ರೂಟ್‌ಗೆ ಇನ್ನು ಕೇವಲ 13 ರನ್‌ಗಳು ಬೇಕಾಗಿವೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು (15,921 ರನ್) ಮುರಿಯಲು ಜೋ ರೂಟ್‌ಗೆ (14,180 ರನ್) ಇನ್ನು ಕೇವಲ 1741 ರನ್‌ಗಳ ಅಗತ್ಯವಿದೆ. ಹಾಗೆಯೇ, ಸಚಿನ್ ಅವರ 51 ಶತಕಗಳ ದಾಖಲೆಯನ್ನು ಸರಿಗಟ್ಟಲು ರೂಟ್ (41) ಇನ್ನು 10 ಶತಕಗಳನ್ನು ಬಾರಿಸಬೇಕಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಾಯಕನಾಗಿ ಅತಿಹೆಚ್ಚು ರನ್ ಬಾರಿಸಿ ದಾಖಲೆ ಬರೆದ ರೂಟ್:

ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕನಾಗಿ ಮತ್ತೊಮ್ಮೆ ಪುನರಾಯ್ಕೆಯಾಗಿರುವ ಜೋ ರೋಟ್, ಇದೀಗ ಪಾಕಿಸ್ತಾನ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲೇ, ನಾಯಕನಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೋ ರೂಟ್ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ 3 ಸಾವಿರ ರನ್ ಬಾರಿಸಿದ ಜಗತ್ತಿನ ಮೊದಲ ನಾಯಕ ಎನ್ನುವ ಅಪರೂಪದ ಮೈಲಿಗಲ್ಲು ನೆಟ್ಟಿದ್ದಾರೆ.

ನಾಯಕನಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 3000 ರನ್ ಪೂರೈಸಲು ಜೋ ರೂಟ್‌ಗೆ 42 ರನ್ ಅಗತ್ಯವಿತ್ತು. ಎರಡನೇ ದಿನದಾಟದಲ್ಲಿ ರೂಟ್ ಈ ಅಪರೂಪದ ಮೈಲಿಗಲ್ಲು ದಾಖಲಿಸಿದ್ದಾರೆ. ಜೋ ರೂಟ್ ನಾಯಕನಾಗಿ 34 ಟೆಸ್ಟ್ ಪಂದ್ಯಗಳನ್ನಾಡಿ 8 ಶತಕ, 13 ಅರ್ಧಶತಕ ಸಹಿತ 3000+ ರನ್ ಬಾರಿಸಿದ್ದಾರೆ. 35 ವರ್ಷದ ಜೋ ರೂಟ್, ಬೆನ್ ಸ್ಟೋಕ್ಸ್ ಟೆಸ್ಟ್ ನಿವೃತ್ತಿ ಬಳಿಕ ಮತ್ತೊಮ್ಮೆ ಇಂಗ್ಲೆಂಡ್ ಟೆಸ್ಟ್‌ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ನಾಯಕನಾಗಿ ಎರಡನೇ ಅತಿಹೆಚ್ಚು ರನ್ ಗಳಿಸಿದ ದಾಖಲೆ ಮಾಜಿ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಸ್ಟೋಕ್ಸ್ 40 ಟೆಸ್ಟ್ ಪಂದ್ಯಗಳನ್ನಾಡಿ 2,160 ರನ್ ಬಾರಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡ ಮಾಸ್ಟರ್ ಬ್ಲಾಸ್ಟರ್ ಪುತ್ರ ಅರ್ಜುನ್ ತೆಂಡೂಲ್ಕರ್
ರೋಹಿತ್ ಶರ್ಮಾ ಮಗಳು ಓದುತ್ತಿರೋರು ಈ ಪ್ರೀಮಿಯಂ ಶಾಲೆಯಲ್ಲಿ! ವಾರ್ಷಿಕ ಫೀಸ್ ಕೇಳಿದ್ರೆ ದಂಗಾಗ್ತೀರಾ!