ಕೊರೋನಾ ನಡುವೆಯೇ ಭಾರತದಲ್ಲಿ ಮತ್ತೆ ಕ್ರಿಕೆಟ್ ಆರಂಭ..!

By Suvarna NewsFirst Published Sep 14, 2020, 8:59 AM IST
Highlights

ಕೊರೋನಾ ಭೀತಿಯ ನಡುವೆಯೇ ಭಾರತದಲ್ಲಿ ಟಿ20 ಕ್ರಿಕೆಟ್ ಆರಂಭವಾಗಲಿದೆ. ಇದೇ ಸೆಪ್ಟೆಂಬರ್ 15ರಿಂದ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ರಾಂಚಿ(ಸೆ.14): ಕೊರೋನಾ ಹಿನ್ನೆಲೆಯಲ್ಲಿ ಬಿಸಿಸಿಐ ಕಳೆದ ಮಾರ್ಚ್‌ನಿಂದ  ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ ಟೂರ್ನಿಗಳನ್ನು ನಡೆಸಿರಲಿಲ್ಲ. ಆದರೆ ಇದೀಗ ಕೊರೋನಾ ನಡುವೆಯೂ ಸೆ.15ರಿಂದ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ಇದೇ ಮೊದಲ ಬಾರಿಗೆ ದೇಶೀಯ ಟಿ20 ಲೀಗ್‌ ಆಯೋಜನೆಗೆ ಮುಂದಾಗಿದೆ. 

33 ದಿನಗಳ ಕಾಲ ಟೂರ್ನಿ ನಡೆಸಲು ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ನಿರ್ಧರಿಸಲಾಗಿದೆ. ಯುಎಇಯಲ್ಲಿ ನಡೆಯಲಿರುವ 2020ರ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾರಣದಿಂದ ಜಾರ್ಖಂಡ್‌ ರಾಜ್ಯದ ತಾರಾ ಆಟಗಾರರಾದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌. ಧೋನಿ, ಇಶಾನ್‌ ಕಿಶನ್‌ ಹಾಗೂ ವರುಣ್‌ ಆ್ಯರೋನ್‌ ಅಲಭ್ಯರಾಗಲಿದ್ದಾರೆ. 

ನಿಮ್ಮ ಕ್ರಿಕೆಟ್ ದೃಷ್ಟಿಕೋನವೇ ಬದಲಾಗಲಿದೆ; ಸಂಚಲನ ಸೃಷ್ಟಿಸಿದ ಭಜ್ಜಿ ಟ್ವೀಟ್!

ರಾಂಚಿ ರೈಡರ್ಸ್‌, ದುಮ್ಕಾಡೇರ್‌ ಡೇವಿಲ್ಸ್‌, ಧನ್‌ಬಾದ್‌ ಡೈಮಂಡ್ಸ್‌, ಸಿಂಗ್ಬೂಮ್‌ ಸ್ಟ್ರೈಕ​ರ್‍ಸ್, ಜೆಮ್ಶೆಡ್‌ಪುರ ಜಗ್ಲೆ​ರ್‍ಸ್ ಮತ್ತು ಬೊಕರೊ ಬ್ಲಾಸ್ಟ​ರ್‍ಸ್ ಎಂಬ 6 ತಂಡಗಳ 100 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ.

ಈ ಟೂರ್ನಿ ಯಶಸ್ವಿಯಾಗಿ ಆಯೋಜನೆಗೊಂಡರೆ ಕೊರೋನಾ ಬಳಿಕ ಭಾರತದಲ್ಲಿ ನಡೆಯಲಿರುವ ಮೊದಲ ಅಧಿಕೃತ ಕ್ರಿಕೆಟ್ ಟೂರ್ನಿ ಎನಿಸಲಿದೆ. ಭಾರತದಲ್ಲಿ ನಡೆಯಬೇಕಿದ್ದ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19ರಿಂದ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದೆ.
 

click me!