ಪಾಕ್‌ ಕ್ರಿಕೆಟರ್‌ಗಳಿಗೆ ಹ್ಯಾಂಡ್‌ಶೇಕ್‌ ಕೊಡೋದಿಲ್ಲ ಟೀಮ್‌ ಇಂಡಿಯಾ ಪ್ಲೇಯರ್ಸ್‌, ಆದ್ರೆ ತಬ್ಬಿಕೊಂಡು ಅಭಿನಂದನೆ ಹೇಳಿದ ಜೆಮಿಮಾ!

Published : Aug 01, 2026, 02:40 PM IST
Jemimah Rodrigues Shares Hug With Pakistan Cricketer

ಸಾರಾಂಶ

'ದಿ ಹಂಡ್ರೆಡ್' ಲೀಗ್ ಪಂದ್ಯದ ನಂತರ ಭಾರತದ ಜೆಮಿಮಾ ರೋಡ್ರಿಗಸ್ ಮತ್ತು ಪಾಕಿಸ್ತಾನದ ಫಾತಿಮಾ ಸನಾ ಪರಸ್ಪರ ಆಲಂಗಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದಿದೆ.

ಲಂಡನ್ (ಆ.1): ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 'ದಿ ಹಂಡ್ರೆಡ್' (The Hundred) ಲೀಗ್ ಟೂರ್ನಿಯ ಪಂದ್ಯದ ಮುಕ್ತಾಯದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆ ಜೆಮಿಮಾ ರೋಡ್ರಿಗಸ್ ಹಾಗೂ ಪಾಕಿಸ್ತಾನದ ಆಲ್ ರೌಂಡರ್ ಫಾತಿಮಾ ಸನಾ ಅವರು ಪರಸ್ಪರ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಹಲ್ಗಾಂ ದಾಳಿ ಹಾಗೂ ಆ ಬಳಿಕದ ಆಪರೇಷನ್‌ ಸಿಂದೂರ್‌ ಸೇನಾ ಕಾರ್ಯಾಚರಣೆಯ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡ ಕ್ರಿಕೆಟ್‌ನಲ್ಲಿ ಹಲವು ಬಾರಿ ಮುಖಾಮುಖಿಯಾಗಿದೆ. ಆದರೆ, ಪ್ರತಿ ಬಾರಿಯೂ ಟೀಮ್‌ ಇಂಡಿಯಾ ಪ್ಲೇಯರ್ಸ್‌ ಪಾಕ್‌ ಆಟಗಾರರಿಗೆ ಹ್ಯಾಂಡ್‌ಶೇಕ್‌ ಮಾಡಲು ನಿರಾಕರಿಸಿದ್ದರು. ಇನ್ನು ಏಷ್ಯಾಕಪ್‌ನಲ್ಲಿ ಎಸಿಬಿ ಅಧ್ಯಕ್ಷ ಮೊಹ್ಸಿನ್‌ ಖಾನ್‌ನಿಂದ ಟ್ರೋಫಿ ಪಡೆದುಕೊಳ್ಳಲು ಕೂಡ ಟೀಮ್‌ ಇಂಡಿಯಾ ಆಟಗಾರರು ನಿರಾಕರಿಸಿದ್ದರು. ಆದರೆ, ಜೆಮಿಮಾ ಮಾತ್ರ ಈ ವಿಚಾರದಲ್ಲಿ ಬೇರೆಯದೇ ನಿಲುವು ಕಾಯ್ದುಕೊಂಡಿದ್ದಾರೆ.

ಗುರುವಾರ ಸದರ್ನ್ ಬ್ರೇವ್ ಹಾಗೂ ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ಫ್ರಾಂಚೈಸಿಗಳ ನಡುವೆ ನಡೆದ ಪಂದ್ಯದ ನಂತರ ಈ ಇಬ್ಬರು ಆಟಗಾರ್ತಿಯರು ಪರಸ್ಪರ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನಿ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡದಿರುವ ನಿಲುವನ್ನು ಕಾಯ್ದುಕೊಂಡಿದ್ದರು. ಆದರೆ, ಈ ಪಂದ್ಯ ಮುಗಿದ ಬಳಿಕ ಎರಡೂ ಫ್ರಾಂಚೈಸಿಗಳ ಆಟಗಾರ್ತಿಯರು ಸಾಂಪ್ರದಾಯಿಕವಾಗಿ ಹಸ್ತಲಾಘವ ಮಾಡಿದರು ಹಾಗೂ ಈ ವೇಳೆ ಜೆಮಿಮಾ ಮತ್ತು ಫಾತಿಮಾ ಪರಸ್ಪರ ಆಲಂಗಿಸಿಕೊಂಡರು.

ಅಜೇಯ ಓಟ ಮುಂದುವರಿಸಿದ ಸದರ್ನ್‌ ಬ್ರೇವ್‌

ಸದರ್ನ್ ಬ್ರೇವ್ ತಂಡವನ್ನು ಪ್ರತಿನಿಧಿಸಿದ ಜೆಮಿಮಾ ರೋಡ್ರಿಗಸ್ ಕೇವಲ 18 ಎಸೆತಗಳಲ್ಲಿ ಅಜೇಯ 28 ರನ್ ಚಚ್ಚಿದರು. ಇನ್ನೊಂದೆಡೆ, ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ಪರ ಆಡಿದ ಫಾತಿಮಾ ಸನಾ ಅವರಿಗೆ ಈ ಪಂದ್ಯ ನಿರಾಸೆ ಮೂಡಿಸಿತು. ಅಂತಿಮವಾಗಿ ಸದರ್ನ್ ಬ್ರೇವ್ ತಂಡವು 24 ರನ್‌ಗಳ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಸದರ್ನ್ ಬ್ರೇವ್ ಈ ಸೀಸನ್‌ನಲ್ಲಿ ತನ್ನ ಅಜೇಯ ಓಟವನ್ನು ನಾಲ್ಕು ಪಂದ್ಯಗಳಿಗೆ ವಿಸ್ತರಿಸಿದರೆ, ಫೀನಿಕ್ಸ್ ತಂಡಕ್ಕೆ ಈವರೆಗೆ ಒಂದೂ ಗೆಲುವು ಸಿಕ್ಕಿಲ್ಲ.

ಮೊದಲು ಬ್ಯಾಟಿಂಗ್ ಮಾಡಿದ ಬ್ರೇವ್ ಪಡೆಯು ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 140 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಲಿಝೆಲ್ ಲೀ 43 ರನ್ ಹಾಗೂ ಮಾಯಾ ಬೌಚಿಯರ್ 45 ರನ್ ಕಲೆಹಾಕಿದರೆ, ಅಂತಿಮ ಘಟ್ಟದಲ್ಲಿ ಜವಾಬ್ದಾರಿಯುತ ಆಟವಾಡಿದ ಜೆಮಿಮಾ ರೋಡ್ರಿಗಸ್ ಅಜೇಯ 28 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ಬೌಲಿಂಗ್‌ನಲ್ಲಿ ಫಾತಿಮಾ ಸನಾ ತಮ್ಮ 15 ಎಸೆತಗಳ ಸ್ಪೆಲ್‌ನಲ್ಲಿ 33 ರನ್ ಬಿಟ್ಟುಕೊಟ್ಟರೆ, ಅಲಾನಾ ಕಿಂಗ್ ಮತ್ತು ಆಲಿಸ್ ಕ್ಯಾಪ್ಸೆ ತಲಾ ಒಂದು ವಿಕೆಟ್ ಪಡೆದರು.

141 ರನ್‌ಗಳ ಗುರಿ ಬೆನ್ನಟ್ಟಿದ ಫೀನಿಕ್ಸ್ ತಂಡಕ್ಕೆ ಟಾಮಿ ಬ್ಯೂಮಂಟ್ (22) ಹಾಗೂ ದವಿನಾ ಪೆರಿನ್ (52 ರನ್, 43 ಎಸೆತ) ಜೋಡಿ ಮೊದಲ ವಿಕೆಟ್‌ಗೆ 73 ರನ್‌ಗಳ ಭರ್ಜರಿ ಪಾಲುದಾರಿಕೆ ನೀಡಿ ಉತ್ತಮ ಆರಂಭ ಒದಗಿಸಿತು. ಆದರೆ, ಈ ಇಬ್ಬರೂ ಔಟ್ ಆಗುತ್ತಿದ್ದಂತೆ ಪಂದ್ಯ ಬ್ರೇವ್ ಕಡೆಗೆ ತಿರುಗಿತು.

ಸಾರಾ ಗ್ಲೆನ್ ಅವರು ಪೆರಿನ್ ವಿಕೆಟ್ ಪಡೆದರೆ, ಲಾರೆನ್ ಬೆಲ್ ಅವರು ಆಲಿಸ್ ಕ್ಯಾಪ್ಸೆ ಅವರ ವಿಕೆಟ್ ಪಡೆದರು. ಕೊನೆಯಲ್ಲಿ ಸೋಫಿ ಮೊಲಿನೆಕ್ಸ್ ಎರಡು ವಿಕೆಟ್ ಕಬಳಿಸಿದ್ದರಿಂದ ಫೀನಿಕ್ಸ್ ಪಡೆ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಲಷ್ಟೇ ಶಕ್ತವಾಯಿತು. ಎಲ್ಲಿಸ್ ಪೆರ್ರಿ 16 ರನ್ ಹಾಗೂ ಫಾತಿಮಾ ಸನಾ 5 ರನ್ ಗಳಿಸಿ ಅಜೇಯರಾಗುಳಿದರು.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

6 ಎಸೆತ, 21 ರನ್: ಫಿನಿಶ್ ಮಾಡ್ತಾರೆ ಅಂದ್ಕೊಂಡ್ರೆ, ಅದೇನೋ ಮಾಡಲು ಹೋಗಿ ಟ್ರೋಲ್‌ ಆದ 3D ಆಲ್ರೌಂಡರ್ ವಿಜಯ್ ಶಂಕರ್!
Ananya Birla: ಬದುಕು ಕಳೆದುಕೊಂಡವರ ಬಾಳಿಗೆ ಬೆಳಕಾದ ಆರ್‌ಸಿಬಿ ಒಡತಿ ಅನನ್ಯ ಬಿರ್ಲಾ!