
ಮುಂಬೈ (ಅ.30): ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ 339 ರನ್ ಸವಾಲಿದ್ದರೂ ಮಹಾನ್ ಚೇಸಿಂಗ್ ಮಾಡಿದ ಭಾರತ ತಂಡ 5 ವಿಕೆಟ್‌ಗಳಿಂದ 7 ಬಾರಿಯ ಚಾಂಪಿಯನ್ ಹಾಗೂ ಹಾಲಿ ಚಾಂಪಿಯನ್ ಕೂಡ ಆಗಿದ್ದ ಆಸೀಸ್ ತಂಡವನ್ನು ಮಣಿಸಿ ಫೈನಲ್‌ಗೇರಿದೆ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್‌ಗೇರಿರುವುದು ಇದು ಮೂರನೇ ಬಾರಿ. ಅದರಲ್ಲೂ ತವರಿನ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳಿಲ್ಲದೆ ವಿಶ್ವಕಪ್ ಫೈನಲ್ ನಡೆಯಲಿರುವುದು ಇತಿಹಾಸವಾಗಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 339 ರನ್‌ಗಳನ್ನು ಚೇಸ್ ಮಾಡುವ ಕಠಿಣ ಸವಾಲು ಪಡೆದಿದ್ದ ಭಾರತ ತಂಡ 48.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 341 ರನ್ ಬಾರಿಸಿ ಆಸೀಸ್ ತಂಡವನ್ನು ಮಣಿಸಿ ಫೈನಲ್ ಸಾಧನೆ ಮಾಡಿತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.
ಭಾರತದ ಬ್ಯಾಟಿಂಗ್ ವೇಳೆ 9ನೇ ಎಸೆತದಲ್ಲಿ ಕ್ರೀಸ್‌ಗೆ ಬಂದಿದ್ದ ಜೆಮಿಮಾ ರೋಡ್ರಿಗಸ್ ಗೆಲುವಿನವರೆಗೂ ಮೈದಾನದಲ್ಲಿದ್ದು ಭಾರತದ ಮಹಾನ್ ಗೆಲುವಿಗೆ ಸಾಕ್ಷಿಯಾದರು. 134 ಎಸೆತ ಎದುರಿಸಿದ 25 ವರ್ಷದ ಬ್ಯಾಟರ್ 14 ಬೌಂಡರಿಯೊಂದಿಗೆ 127 ರನ್ ಬಾರಿಸಿ ಅಜೇಯವಾಗುಳಿದರು.
59 ರನ್ ಗಳಿಸುವಾಗಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಜೆಮಿಮಾ ಆಡಿದ ಇನ್ನಿಂಗ್ಸ್ ಅತ್ಯಂತ ಸ್ಮರಣೀಯ ಎನಿಸುವಂಥ ಗೆಲುವು ತಂದುಕೊಟ್ಟಿತು. ಶೆಫಾಲಿ ವರ್ಮ ಕೇವಲ 10 ರನ್ ಬಾರಿಸಿ ಔಟಾದರೆ, ಅನುಭವಿ ಆಟಗಾರ್ತಿ ಸ್ಮೃತಿ ಮಂದನಾ 24 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಜೆಮಿಮಾಗೆ ಜೊತೆಯಾಗಿ ನಾಯಕಿ ಹರ್ಮಾನ್‌ಪ್ರೀತ್ ಕೌರ್, ಆಸೀಸ್ ಬೌಲಿಂಗ್‌ಅನ್ನು ಎಚ್ಚರಿಕೆಯಿಂದ ಎದುರಿಸಿದರು. ಆರಂಭದಲ್ಲಿ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಜೋಡಿ, ಲಯ ಕಂಡುಕೊಂಡ ಬಳಿಕ ಆಸೀಸ್ ಬೌಲರ್‌ಗಳನ್ನು ಚೆಂಡಾಡಲು ಆರಂಭಿಸಿತು.
ಹರ್ಮಾನ್‌ಪ್ರೀತ್ ಕೌರ್ 88 ಎಸೆತಗಳ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ, 2 ಸಿಕ್ಸರ್‌ನೊಂದಿಗೆ 89 ರನ್ ಬಾರಿಸಿದರು. ಇದರಿಂದಾಗಿ ಜೆಮಿಮಾ ಜೊತೆ ಮೂರನೇ ವಿಕೆಟ್‌ಗೆ 156 ಎಸೆತಗಳಲ್ಲಿ 167 ರನ್‌ಗಳ ಭರ್ಜರಿ ಜೊತೆಯಾಟವಾಡಿತು. ಈ ಜೊತೆಯಾಟವೇ ಆಸೀಸ್‌ನ ಗೆಲುವಿನ ಕನಸನ್ನು ನುಚ್ಚುನೂರು ಮಾಡಿತು.ಅರ್ಧಶತಕದವರೆಗೂ ಎಚ್ಚರಿಕೆಯಿಂದ ಆಟವಾಡಿದ ಜೋಡಿ ಬಳಿಕ ಇನ್ನಿಂಗ್ಸ್‌ಗೆ ವೇಗ ನೀಡಿದ್ದರಿಂದ ಭಾರತ ಅಪರೂಪದ ಸೆಮಿಫೈನಲ್ ಗೆಲುವು ಕಾಣಲು ಸಾಧ್ಯವಾಯಿತು. ಹರ್ಮಾನ್‌ಪ್ರೀತ್ ಕೌರ್ ಔಟಾದ ಬಳಿಕ ದೀಪ್ತಿ ಶರ್ಮ (24) ಜೆಮಿಮಾ ಜೊತೆ ನಾಲ್ಕನೇ ವಿಕೆಟ್‌ಗೆ 38 ರನ್ ಜೊತೆಯಾಟವಾಡಿದರು. ತಂಡದ ಮೊತ್ತ 264 ರನ್ ಆಗಿದ್ದಾಗ ರನ್‌ಔಟ್‌ಗೆ ಬಲಿಯಾದರು.
ಜೆಮಿಮಾ ಬಾರಿಸಿದ ಶತಕ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಭಾರತದ ಬ್ಯಾಟರ್‌ನ ಕೇವಲ 2ನೇ ಶತಕ ಎನಿಸಿದೆ. 2017ರಲ್ಲಿ ಹರ್ಮಾನ್ ಪ್ರೀತ್ ಕೌರ್ ಸೆಮಿಫೈನಲ್‌ನಲ್ಲಿ ಅಜೇಯ 171 ರನ್ ಬಾರಿಸಿದ್ದು ಹಿಂದಿನ ದಾಖಲೆ. ವಿಶ್ವಕಪ್‌ನ ನಾಕೌಟ್ ಪಂದ್ಯವೊಂದರಲ್ಲಿ ಇಬ್ಬರು ಬ್ಯಾಟರ್‌ಗಳು ಶತಕ ಬಾರಿಸಿ 2ನೇ ಉದಾಹರಣೆ ಇದಾಗಿದೆ. ಇದಕ್ಕೂ ಮುನ್ನ 2022ರ ವಿಶ್ವಪ್ ಫೈನಲ್‌ನಲ್ಲಿ ಅಲೀಸಾ ಹೀಲಿ ಹಾಗೂ ನಟ್ ಸ್ಕೀವರ್ ಬ್ರಂಟ್ ಇಬ್ಬರೂ ಶತಕ ಬಾರಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.