T20 World Cup: ಜಸ್‌ಪ್ರೀತ್‌ ಬುಮ್ರಾ ಟಿ20 ವಿಶ್ವಕಪ್‌ನಿಂದ ಔಟ್‌

Published : Sep 29, 2022, 03:11 PM ISTUpdated : Sep 29, 2022, 03:38 PM IST
T20 World Cup: ಜಸ್‌ಪ್ರೀತ್‌ ಬುಮ್ರಾ ಟಿ20 ವಿಶ್ವಕಪ್‌ನಿಂದ ಔಟ್‌

ಸಾರಾಂಶ

ಟೀಮ್‌ ಇಂಡಿಯಾದ ಅಗ್ರ ವೇಗಿ ಜಸ್‌ಪ್ರೀತ್‌ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ ಎಂದುಬ ಬಿಸಿಸಿಐ ಮೂಲಗಳು ತಿಳಿಸಿವೆ. ಬ್ಯಾಕ್‌ ಸ್ಟ್ರೆಸ್‌ ಫ್ರಾಕ್ಚರ್‌ ಕಾರಣದಿಂದಾಗಿ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗಿದೆ.  

ಮುಂಬೈ (ಸೆ. 29): ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನವೇ ಟೀಮ್‌ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, ಬ್ಯಾಕ್‌ ಸ್ಟ್ರೆಸ್‌ ಫ್ರಾಕ್ಚರ್‌ಗೆ ಒಳಗಾಗಿರುವ ತಂಡದ ಅಗ್ರ ವೇಗಿ ಜಸ್‌ಪ್ರೀತ್‌ ಬುಮ್ರಾ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಇದನ್ನು ಬಿಸಿಸಿಐ ಇನ್ನಷ್ಟೇ ಅಧಿಕೃತವಾಗಿ ಖಚಿತಪಡಿಸಬೇಕಿದೆ.ಗಾಯದ ಕುರಿತಾಗಿ ಕೊನೆ ಹಂತದಲ್ಲಿ ಮಾಹಿತಿ ನೀಡಿದ್ದರಿಂದ ಜಸ್‌ಪ್ರೀತ್‌ ಬುಮ್ರಾ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೊನೇ ಹಂತದಲ್ಲಿ ತಂಡದಿಂದ ಹೊರಬಿದ್ದಿದ್ದರು. ಜಸ್‌ಪ್ರೀತ್‌ ಬುಮ್ರಾ ಅವರ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಫಿಸಿಯೋಗಳು ನಿರ್ಧಾರ ಮಾಡಲಿದ್ದಾರೆ ಎಂದು ವರದಿಯಾಗಿದೆ. ಹಾಗೇನಾದರೂ ಅವರಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೇ ಇದ್ದರೂ, 4 ರಿಂದ 6 ತಿಂಗಳ ಕಾಲ ಅವರು ಕ್ರಿಕೆಟ್‌ ಮೈದಾನದಿಂದ ಹೊರಗುಳಿಯಬೇಕಾಗಬಹುದು ಎಂದು ಬಿಸಿಸಿಐ ಮೂಲಗಳು ಹೇಳಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಬುಮ್ರಾ ಬೆನ್ನು ನೋವಿನ ಬಗ್ಗೆ ದೂರು ನೀಡಿದ ಬಳಿಕ ಅವರನ್ನು ಟೀಮ್‌ ಇಂಡಿಯಾದ ಎಲ್ಲಾ ಕಡ್ಡಾಯ ನೆಟ್ಸ್‌ ಅಭ್ಯಾಸದಿಂದ ವಿಶ್ರಾಂತಿ ನೀಡಲಾಗಿತ್ತು.

ಗಾಯದ ಕಾರಣದಿಂದಾಗಿ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಿಂದ ಹೊರಬಿದ್ದಿದ್ದರು. ದೀರ್ಘಕಾಲದ ಗಾಯದ ಬಳಿಕವಷ್ಟೇ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿದ್ದರು. ಆದರೆ, ಈಗ ಅವರು ಎನ್‌ಸಿಎಯಲ್ಲಿ ಗಂಭೀರ ಪ್ರಮಾಣದ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಲಿದ್ದು, ಮುಂದಿನ ಕೆಲ ವಾರಗಳಲ್ಲಿ ಅವರ ಗಾಯದ ಗಂಭೀರತೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಇದು ಬಹಳವಾಗಿ ಚಿಂತೆ ಮಾಡುವ ವಿಚಾರ. ಆದರೆ, ಜಸ್‌ಪ್ರೀತ್‌ ಬುಮ್ರಾ ಕುರಿತಾದ ಸಂಪೂರ್ಣ ವೈದ್ಯಕೀಯ ವರದಿ ಇನ್ನಷ್ಟೇ ಸಿಗಬೇಕಿದೆ. ಬೆನ್ನು ನೋವಿನ ಬಗ್ಗೆ ಅವರು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಹೇಳಿದ ಬೆನ್ನಲ್ಲಿಯೇ ಅವರನ್ನು ಎಲ್ಲಾ ಕಡ್ಡಾಯ ನೆಟ್ಸ್‌ನಿಂದ ವಿಶ್ರಾಂತಿ ನೀಡಲಾಗಿತ್ತು. ತಂಡದ ಮೆಡಿಕಲ್‌ ಟೀಮ್‌ ಅವರ ಪರಿಶೀಲನೆ ಮಾಡುತ್ತಿದೆ. ವೇಗದ ಬೌಲರ್‌ಗೆ ಬ್ಯಾಕ್‌ ಇಂಜುರಿ ಎನ್ನುವುದು ಗಂಭೀರ ಪ್ರಮಾಣದ ಸಮಸ್ಯೆ. ಈ ಗಾಯವಾದಲ್ಲಿ ಅವರು ತಂಡಕ್ಕೆ ತುರ್ತಾಗಿ ಮರಳಲು ಸಾಧ್ಯವಾಗೋದಿಲ್ಲ. ಜಸ್‌ಪ್ರೀತ್‌ ಬುಮ್ರಾ ಅವರ ರಿಕವರಿ ಸಮಯ ಎಷ್ಟು ಎನ್ನುವುದನ್ನು ವೈದ್ಯರು ನಿರ್ಧಾರ ಮಾಡಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ಇನ್‌ಸೈಡ್‌ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಭಾರತಕ್ಕೆ ಆಘಾತ, ಮೂವರು ಆಟಗಾರರು ಔಟ್‌!

ಬುಮ್ರಾ ಅವರ ಫಿಟ್‌ನೆಸ್‌ ಟೀಮ್‌ ಇಂಡಿಯಾ ಥಿಂಕ್‌ ಟ್ಯಾಂಕ್‌ಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕಟ್‌ಗೆ ಮರಳಿದ್ದ ಜಸ್‌ಪ್ರೀತ್‌ ಬುಮ್ರಾ, ನಾಗ್ಪುರದಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಆಡಿದ್ದರು. ಆ ಬಳಿಕ ಹೈದರಾಬಾದ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ 50 ರನ್‌ ನೀಡಿ ವಿಕೆಟ್‌ ಪಡೆಯಲು ವಿಫಲರಾಗಿದ್ದರು.

Yuvraj Singh Six 6s: ಇಂಗ್ಲೀಷರ ಅಹಂಕಾರ ಅಡಗಿಸಿದ್ದ 6 ಸಿಕ್ಸರ್‌ಗಳಿಗೆ 15 ವರ್ಷ!

28 ವರ್ಷದ ಜಸ್‌ಪ್ರೀತ್‌ ಬುಮ್ರಾ (Jasprit Bumrah), ಟಿ20 ವಿಶ್ವಕಪ್‌ಗೆ (T20 World Cup) ಟೀಮ್‌ ಇಂಡಿಯಾ (Team India) ಪ್ರಕಟಿಸಿದ ತಂಡದಲ್ಲಿ ನಾಲ್ವರು ಸದಸ್ಯರ ವೇಗದ ಬೌಲಿಂಗ್‌ ವಿಭಾಗದಲ್ಲಿ ಸ್ಥಾನ ಪಡೆದಿದ್ದರು. ಬುಮ್ರಾ ಅವರೊಂದಿಗೆ ಭುವನೇಶ್ವರ್‌ ಕುಮಾರ್‌, ಆರ್ಶದೀಪ್‌ ಸಿಂಗ್‌ ಹಾಗೂ ಹರ್ಷಲ್‌ ಪಟೇಲ್‌ ಸ್ಥಾನ ಪಡೆದಿದ್ದಾರೆ. ಈಗ ಬುಮ್ರಾ, ಹೊರಬಿದ್ದಿರುವ ಸುದ್ದಿ ಬಂದ ಹಿನ್ನಲೆಯಲ್ಲಿ ಟೀಮ್‌ ಇಂಡಿಯಾ ಅನುಭವಿ ವೇಗಿ ಮೊಹಮದ್‌ ಶಮಿ (Mohammed Shami) ಅಥವಾ ದೀಪಕ್‌ ಚಹರ್‌ (Deepak Chahar) ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬಹುದು. ಈ ಇಬ್ಬರೂ ಬೌಲರ್‌ಗಳು ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ಮೀಸಲು ತಂಡದಲ್ಲಿ ಸ್ಥಾನ ಪಡೆದಿದ್ದರು.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ