ಟೀಂ ಇಂಡಿಯಾಗೆ ಮೊದಲ ಇನ್ನಿಂಗ್ಸ್ ಅಲ್ಪ ಮುನ್ನಡೆ, ರೋಚಕಘಟ್ಟದತ್ತ ಮೊದಲ ಟೆಸ್ಟ್!

Published : Jun 23, 2025, 09:08 AM IST
jasprit bumrah test

ಸಾರಾಂಶ

ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಹ್ಯಾರಿ ಬ್ರೂಕ್‌ ಅವರ 99 ರನ್‌ಗಳ ಹೋರಾಟ ವ್ಯರ್ಥವಾಯಿತು. ಜಸ್‌ಪ್ರೀತ್‌ ಬೂಮ್ರಾ 5 ವಿಕೆಟ್‌ ಕಬಳಿಸಿ ಮಿಂಚಿದರು.

ಲೀಡ್ಸ್‌(ಇಂಗ್ಲೆಂಡ್‌): ಹ್ಯಾರಿ ಬ್ರೂಕ್ ಸೇರಿದಂತೆ ಇಂಗ್ಲೆಂಡ್‌ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಹೋರಾಟದ ಹೊರತಾಗಿಯೂ ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಜಸ್‌ಪ್ರೀತ್‌ ಬೂಮ್ರಾರ ಮಾರಕ ಬೌಲಿಂಗ್‌ ದಾಳಿ ಟೀಂ ಇಂಡಿಯಾಗೆ 6 ರನ್‌ ಮುನ್ನಡೆ ಒದಗಿಸಿಕೊಟ್ಟಿತು. 2ನೇ ಇನ್ನಿಂಗ್ಸ್‌ನಲ್ಲೂ ಭಾರತ ಉತ್ತಮ ಆರಂಭ ಪಡೆದಿದ್ದು, ಇಂಗ್ಲೆಂಡ್‌ಗೆ ದೊಡ್ಡ ಗುರಿ ನೀಡುವತ್ತ ಸಾಗುತ್ತಿದೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್‌ಗೆ ಆಲೌಟಾಗಿತ್ತು. ಇದಕ್ಕೆ ಉತ್ತರವಾಗಿ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 209 ರನ್‌ ಗಳಿಸಿದ್ದ ಇಂಗ್ಲೆಂಡ್‌, 3ನೇ ದಿನವಾದ ಭಾನುವಾರವೂ ಉತ್ತಮ ಆಟವಾಡಿತು. ಆದರೆ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ಗಳಿಸಲಾಗಲಿಲ್ಲ. 100.4 ಓವರ್‌ಗಳಲ್ಲಿ 465 ರನ್‌ಗೆ ಆಲೌಟಾಯಿತು.

ಬ್ರೂಕ್‌ ನರ್ವಸ್‌ ನೈಂಟಿ: ಶತಕ ಸಿಡಿಸಿ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದ ಓಲಿ ಪೋಪ್‌, ಮೊದಲ ಅವಧಿಯಲ್ಲೇ ನಿರ್ಗಮಿಸಿದರು. ಅವರು 106 ರನ್‌ ಗಳಿಸಿ ಪ್ರಸಿದ್ಧ್‌ ಕೃಷ್ಣಗೆ ವಿಕೆಟ್‌ ಒಪ್ಪಿಸಿದರು. ಬಳಿಕ ನಾಯಕ ಬೆನ್‌ ಸ್ಟೋಕ್ಸ್‌ 20 ರನ್‌ಗೆ ಔಟಾದ ಬಳಿಕ 6ನೇ ವಿಕೆಟ್‌ಗೆ ಬ್ರೂಕ್‌-ಜೆಮೀ ಸ್ಮಿತ್‌ 73 ರನ್‌ ಸೇರಿಸಿದರು. ಸ್ಮಿತ್‌ 40 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ತಂಡದ ಮೊತ್ತ 400ರ ಸನಿಹದಲ್ಲಿದ್ದಾಗ ಬ್ರೂಕ್‌ ಶತಕದ ಅಂಚಿನಲ್ಲಿ ಎಡವಿದರು. ಭಾರತೀಯ ಬೌಲರ್‌ಗಳ ಬೆವರಿಳಿಸಿ 99 ರನ್‌ ಗಳಿಸಿದ ಅವರು ಪ್ರಸಿದ್ಧ್‌ ಎಸೆತದಲ್ಲಿ ದೊಡ್ಡ ಎಸೆತಕ್ಕೆ ಕೈಹಾಕಿ ಶಾರ್ದೂಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಬ್ರೂಕ್‌ ಔಟಾದರೂ ಇಂಗ್ಲೆಂಡ್‌ ರನ್‌ ವೇಗಕ್ಕೆ ಕಡಿವಾಣ ಬೀಳಲಿಲ್ಲ. ಕ್ರಿಸ್‌ ವೋಕ್ಸ್‌ 38, ಬ್ರೈಡನ್‌ ಕಾರ್ಸ್‌ 20, ಜೋಶ್‌ ಟಂಗ್‌ 11 ರನ್‌ ಗಳಿಸಿ ತಂಡವನ್ನು 465ರ ಗಡಿ ದಾಟಿಸಿದರು. ಕೊನೆ 2 ಸೇರಿದಂತೆ ಒಟ್ಟು 5 ವಿಕೆಟ್‌ ಪಡೆದ ಬೂಮ್ರಾ, ಭಾರತದ ಇನ್ನಿಂಗ್ಸ್‌ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜೈಸ್ವಾಲ್‌ ಫೇಲ್‌: 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಆಘಾತ ಎದುರಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ 4 ರನ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ ಚೊಚ್ಚಲ ಪಂದ್ಯವಾಡುತ್ತಿರುವ ಸಾಯಿ ಸುದರ್ಶನ್‌ ಜೊತೆಗೂಡಿದ ಕೆ.ಎಲ್‌.ರಾಹುಲ್‌ ಭಾರತಕ್ಕೆ ಆಸರೆಯಾದರು. ಈ ಜೋಡಿ 60+ ರನ್‌ ಜೊತೆಯಾಟವಾಡಿತು. ಸಾಯಿ ಸುದರ್ಶನ್ 30 ರನ್ ಗಳಿಸಿ ಮತ್ತೊಮ್ಮೆ ಬೆನ್ ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಮೂರನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ ಎರಡು ವಿಕೆಟ್‌ ಕಳೆದುಕೊಂಡು 90 ರನ್ ಗಳಿಸಿದ್ದು, ಒಟ್ಟಾರೆ 96 ರನ್ ಗಳಿಸಿದೆ. ಕೆ ಎಲ್ ರಾಹುಲ್ ಅಜೇಯ 47 ರನ್ ಬಾರಿಸಿದ್ದು, ನಾಯಕ ಶುಭ್‌ಮನ್ ಗಿಲ್ 6 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

150 ಕ್ಯಾಚ್‌: ರಿಷಭ್‌ ಮೂರನೇ ಭಾರತೀಯ

ಭಾರತ ಪರ ಟೆಸ್ಟ್‌ನಲ್ಲಿ 150 ಕ್ಯಾಚ್‌ ಪಡೆದ 3ನೇ ವಿಕೆಟ್‌ ಕೀಪರ್‌ ಎಂಬ ಖ್ಯಾತಿಗೆ ರಿಷಭ್ ಪಂತ್‌ ಪಾತ್ರರಾಗಿದ್ದಾರೆ. ಅವರು 86 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ. ಎಂ.ಎಸ್‌.ಧೋನಿ 166 ಇನ್ನಿಂಗ್ಸ್‌ಗಳಲ್ಲಿ 256, ಸಯ್ಯದ್‌ ಕಿರ್ಮಾನಿ 151 ಇನ್ನಿಂಗ್ಸ್‌ಗಳಲ್ಲಿ 160 ಕ್ಯಾಚ್ ಪಡೆದಿದ್ದಾರೆ.

12 ಬಾರಿ 5+ ವಿಕೆಟ್‌: ಕಪಿಲ್‌ ದೇವ್‌ ದಾಖಲೆ ಸರಿಗಟ್ಟಿದ ಬುಮ್ರಾ

ಭಾರತದ ಹೊರಗಡೆ ನಡೆದ ಟೆಸ್ಟ್‌ ಪಂದ್ಯಗಳಲ್ಲಿ ಅತಿ ಹೆಚ್ಚು 5+ ವಿಕೆಟ್‌ ಕಿತ್ತ ಭಾರತೀಯ ಸಾಧಕರ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಬುಮ್ರಾ(34 ಇನ್ನಿಂಗ್ಸ್‌) ಹಾಗೂ ಕಪಿಲ್‌ ದೇವ್‌(66 ಇನ್ನಿಂಗ್ಸ್‌) ತಲಾ 12 ಬಾರಿ ಈ ಸಾಧನೆ ಮಾಡಿದ್ದಾರೆ. ಇಶಾಂತ್‌ ಶರ್ಮಾ 9, ಜಹೀರ್‌ ಖಾನ್‌ 8, ಇರ್ಫಾನ್ ಪಠಾಣ್‌ 7 ಬಾರಿ ತಲಾ 5ಕ್ಕಿಂತ ಹೆಚ್ಚು ವಿಕೆಟ್‌ ಕಿತ್ತಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!