
ಕೋಲ್ಕತಾ(ಏ.11): ಯುವ ಎಡಗೈ ವೇಗಿ ಯಶ್ ದಯಾಳ್, ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದ ವೇಳೆ ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ ಎದುರು 5 ಸಿಕ್ಸರ್ ಚಚ್ಚಿಸಿಕೊಂಡರು. ಇದರ ಎಫೆಕ್ಟ್ ಕೇವಲ ತಂಡದ ಮೇಲಷ್ಟೇ ಅಲ್ಲದೇ ತಮ್ಮ ಕುಟುಂಬದ ಮೇಲೂ ಪರಿಣಾಮ ಬೀರಿದೆ.
ಹೌದು, ಉತ್ತರ ಪ್ರದೇಶ ಮೂಲದ ಎಡಗೈ ವೇಗಿ ಯಶ್ ದಯಾಳ್, ಕೋಲ್ಕತಾ ನೈಟ್ ರೈಡರ್ಸ್ ಎದುರು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಕೆಆರ್ ತಂಡದ ರಿಂಕು ಸಿಂಗ್ ಎದುರು 5 ಸಿಕ್ಸರ್ ನೀಡಿ ದುಬಾರಿ ಬೌಲರ್ ಆಗಿ ಹೊರಹೊಮ್ಮಿದ್ದರು. ತಮ್ಮ ಮಗ ರಿಂಕು ಸಿಂಗ್ ಅವರಿಂದ 5 ಸಿಕ್ಸರ್ ಚಚ್ಚಿಸಿಕೊಂಡ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರಂತೆ. ಈ ವಿಚಾರವನ್ನ ಯಶ್ ದಯಾಳ್ ಅವರ ತಂದೆ ಚಂದ್ರಪಾಲ್ ದಯಾಳ್ ಬಹಿರಂಗ ಪಡಿಸಿದ್ದಾರೆ.
"ಪಂದ್ಯದ ಬಳಿಕ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಯಿತು. ಊಟ ಸೇವಿಸದೆ ನಿರಂತರವಾಗಿ ಅಳುತ್ತಿದ್ದ ಯಶ್ ದಯಾಳ್ ಅವರ ತಾಯಿಯನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟೆವು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಯಶ್ ದಯಾಳ್ ಒಂಟಿಯಾಗದಂತೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸೇರಿ ತಂಡದ ಎಲ್ಲಾ ಆಟಗಾರರು ಅವರ ಜತೆಯಲ್ಲಿಯೇ ಇದ್ದು ಸಂತೈಸಿದರು" ಎಂದಿದ್ದಾರೆ.
ಇದೊಂದು ದುಸ್ವಪ್ನದ ಸಂಜೆಯೇ ಸರಿ ಎಂದಿರುವ ಯಶ್ ದಯಾಳ್ ಅವರ ತಂದೆ ಚಂದ್ರಪಾಲ್, ಕ್ರೀಡೆಯಲ್ಲಿ ಇಂತಹ ಪರಿಸ್ಥಿತಿಗಳು ಒಮ್ಮೊಮ್ಮೆ ಬರುತ್ತವೆ. ಜೀವನದಲ್ಲೂ ವೈಫಲ್ಯವನ್ನು ಅನುಭವಿಸುತ್ತೇವೆ. ಆದರೆ ಅಂತಹ ವೈಫಲ್ಯವನ್ನು ಮೆಟ್ಟಿನಿಂತು ನಾವೆಷ್ಟು ಬಲಿಷ್ಠವಾಗುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ಯಶ್ ದಯಾಳ್ ಅವರನ್ನು ಒಂಟಿಯಾಗಿರುವಂತೆ ಬಿಡಲಿಲ್ಲ. ಹೋಟೆಲ್‌ಗೆ ವಾಪಾಸ್ಸಾದ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ, ಹಂಗಾಮಿ ನಾಯಕ ರಶೀದ್ ಖಾನ್ ಸೇರಿದಂತೆ ತಂಡದ ಎಲ್ಲಾ ಆಟಗಾರರು ಯಶ್ ದಯಾಳ್ ಅವರನ್ನು ಸಂತೈಸಿದರು. ಇದಾದ ಬಳಿಕ ಹೋಟೆಲ್‌ನಲ್ಲಿಯೇ ಹಾಡು, ನೃತ್ಯ ಮಾಡಿದರು. ಇದು ಸೋಲಿನಿಂದ ನೋವಿನಿಂದ ಹೊರಬರುವಂತೆ ಮಾಡಲು ಪ್ರಯತ್ನಿಸಿತು ಎಂದು ಚಂದ್ರಪಾಲ್ ಹೇಳಿದ್ದಾರೆ.
IPL 2023: ಮೋಸದಾಟವಾಡಿ ಕೊಹ್ಲಿಯನ್ನು ಔಟ್ ಮಾಡಿದ್ರಾ ಅಮಿತ್ ಮಿಶ್ರಾ..? ಇಲ್ಲಿದೆ ನೋಡಿ ವಿಡಿಯೋ ಸಾಕ್ಷಿ..!
ಯಶ್ ದಯಾಳ್, ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. 2021ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ ಪರ ಯಶ್ ದಯಾಳ್ 14 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಯಶ್ ದಯಾಳ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
ರಿಂಕು ಸಿಕ್ಸರ್ ಬಾರಿಸಿದ್ದು ನಾಯಕ ರಾಣಾ ಬ್ಯಾಟಲ್ಲಿ!
ಅಹಮದಾಬಾದ್: ಗುಜರಾತ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ನ ರಿಂಕು ಸಿಂಗ್ ಕೊನೆ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ತಮ್ಮ ಬ್ಯಾಟ್ನಿಂದಲ್ಲ, ಬದಲಾಗಿ ಕೆಕೆಆರ್ ನಾಯಕ ನಿತೀಶ್ ರಾಣಾ ಅವರ ಬ್ಯಾಟ್‌ನಿಂದ. ಇದನ್ನು ಸ್ವತಃ ರಾಣಾ ಪಂದ್ಯದ ಬಳಿಕ ಬಹಿರಂಗಪಡಿಸಿದ್ದಾರೆ.
‘ರಿಂಕು ಸಿಂಗ್ ಬಳಸಿದ ಬ್ಯಾಟ್ ನನ್ನದು. ಕಳೆದ ಮುಷ್ತಾಕ್ ಅಲಿ ಟಿ20, ಈ ಆವೃತ್ತಿ ಐಪಿಎಲ್ನ ಮೊದಲೆರಡು ಪಂದ್ಯಗಳಲ್ಲಿ ನಾನು ಅದೇ ಬ್ಯಾಟ್ ಬಳಸಿದ್ದೆ. ರಿಂಕು ಆ ಬ್ಯಾಟ್ ಕೇಳಿದಾಗ ನಾನು ಕೊಟ್ಟಿರಲಿಲ್ಲ. ಆದರೆ ಡ್ರೆಸಿಂಗ್ ಕೋಣೆಯಿಂದ ಯಾರೋ ತಂದು ರಿಂಕ್‌ಗೆ ಕೊಟ್ಟರು. ಈಗ ಆ ಬ್ಯಾಟ್ ನನ್ನದಲ್ಲ, ರಿಂಕು ಅವರದ್ದು’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.