ಆಕರ್ಷಕ ದ್ವಿಶತಕ ಚಚ್ಚಿದ ಇಶಾನ್ ಕಿಶನ್
ಛಟ್ಟೋಗ್ರಾಮ(ಡಿ.10): ಪ್ರತಿಭಾನ್ವಿತ ಎಡಗೈ ಬ್ಯಾಟರ್ ಇಶಾನ್ ಕಿಶನ್, ಬಾಂಗ್ಲಾದೇಶ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ. ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ 4ನೇ ಬ್ಯಾಟರ್ ಎನ್ನುವ ಹಿರಿಮೆಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ.
ಹೌದು, ಝಹೂರ್ ಅಹಮದ್ ಚೌಧರಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭದಲ್ಲೇ ಅನುಭವಿ ಬ್ಯಾಟರ್ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಇಶಾನ್ ಕಿಶನ್, ಬಾಂಗ್ಲಾದೇಶ ಬ್ಯಾಟರ್‌ಗಳ ಮೇಲೆ ಸವಾರಿ ಮಾಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
A knock to remember from Ishan Kishan ✨ | https://t.co/SRyQabJ2Sf pic.twitter.com/xh3Es9Jc4X
— ICC (@ICC)ಇಶಾನ್ ಕಿಶನ್ ದಾಖಲೆಯ ದ್ವಿಶತಕ: ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ್ದ ಇಶಾನ್ ಕಿಶನ್ 49 ಎಸೆತಗಳನ್ನು ಎದುರಿಸಿ ಅರ್ಧಶತಕವನ್ನು ಪೂರೈಸಿದರು. ಅರ್ಧಶಕ ಬಾರಿಸಿದ ಬಳಿಕ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮೊರೆ ಹೋದರು. ಪರಿಣಾಮ ಕೇವಲ 85 ಎಸೆತಗಳಲ್ಲಿ ಇಶಾನ್ ಕಿಶನ್, ಚೊಚ್ಚಲ ಏಕದಿನ ಕ್ರಿಕೆಟ್ ಶತಕ ಸಿಡಿಸಿ ಸಂಭ್ರಮಿಸಿದರು. ಇಶಾನ್ ಕಿಶನ್ ಶತಕ ಬಾರಿಸುತ್ತಿದ್ದಂತೆಯೆ ಮತ್ತಷ್ಟು ಆಕ್ರಮಣಕಾರಿಯಾಟ ಆಡತೊಡಗಿದರು. 100ರಿಂದ 150 ರನ್ ಬಾರಿಸಲು ಇಶಾನ್ ಕಿಶನ್ ಕೇವಲ 18 ಎಸೆತಗಳನ್ನು ಮಾತ್ರ ತೆಗೆದುಕೊಂಡರು. ಇಶಾನ್ ಕಿಶನ್ ಕೇವಲ 103 ಎಸೆತಗಳನ್ನು ಎದುರಿಸಿ 150+ ರನ್ ಗಡಿ ದಾಟುವಲ್ಲಿ ಯಶಸ್ವಿಯಾದರು. ಬಾಲ್ ಇರುವುದೇ ದಂಡಿಸುವುದಕ್ಕೆ ಎನ್ನುವಂತೆ ಬ್ಯಾಟ್ ಬೀಸಿದ ಇಶಾನ್ ಕಿಶನ್ ಕೇವಲ 126 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಆಕರ್ಷಕ ದ್ವಿಶತಕ ಸಿಡಿಸಿ ಸಂಭ್ರಮಿಸಿದರು.
Ind vs Ban ಇಶಾನ್ ಕಿಶನ್ ಶತಕದ ವೈಭವ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ ದಾಪುಗಾಲು..!
ಇಶಾನ್ ಕಿಶನ್ ಮೊದಲ ಶತಲ ಪೂರೈಸಲು 85 ಎಸೆತಗಳನ್ನು ತೆಗೆದುಕೊಂಡರೇ, ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಕೇವಲ 41 ಎಸೆತಗಳನ್ನು ತೆಗೆದುಕೊಂಡರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ಬಾರಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ಇಶಾನ್ ಕಿಶನ್ ಪಾತ್ರರಾದರು. ಅಂತಿಮವಾಗಿ ಇಶಾನ್ ಕಿಶನ್ ಒಟ್ಟು 131 ಎಸೆತಗಳನ್ನು ಎದುರಿಸಿ 24 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ ಆಕರ್ಷಕ 210 ರನ್ ಬಾರಿಸಿ ಟಸ್ಕಿನ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು.