RCB for Sale ಬೆನ್ನಲ್ಲೇ ಕಾಂತಾರ, ಕೆಜಿಎಫ್ ಹಿಟ್ ಸಿನಿಮಾ ನೀಡಿದ ಹೊಂಬಾಳೆ ಫಿಲ್ಮ್ಸ್‌ ಅಖಾಡಕ್ಕೆ! ಫ್ಯಾನ್ಸ್‌ಗೆ ಗುಡ್ ನ್ಯೂಸ್?

Published : Nov 19, 2025, 01:03 PM IST
RCB Hombale

ಸಾರಾಂಶ

ಆರ್‌ಸಿಬಿ ತಂಡ ಮಾರಾಟಕ್ಕಿದೆ ಎಂಬ ಸುದ್ದಿಯ ಬೆನ್ನಲ್ಲೇ, 'ಕೆಜಿಎಫ್' ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಅದನ್ನು ಖರೀದಿಸಲಿದೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಯ ಸತ್ಯಾಸತ್ಯತೆ, ಹೊಂಬಾಳೆ-ಆರ್‌ಸಿಬಿ ನಡುವಿನ ಈಗಿನ ಸಂಬಂಧ ಮತ್ತು ಸುಮಾರು 17,000 ಕೋಟಿ ರೂ. ಬ್ರ್ಯಾಂಡ್ ಮೌಲ್ಯದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿದೆ. ಹೀಗಿರುವಾಗಲೇ ಆರ್‌ಸಿಬಿ ತಂಡವು ಮಾರಾಟಕ್ಕಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ, ಕೆಜಿಎಫ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದಂತಹ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯು ಆರ್‌ಸಿಬಿಯ ಮುಂದಿನ ಮಾಲೀಕರಾಗಲಿದ್ದಾರೆ ಎನ್ನುವ ಪೋಸ್ಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹಾಗಿದ್ರೆ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿಯ ನೂತನ ಮಾಲೀಕರಾಗಲೂ ಸಾಧ್ಯವೇ?, ರೂಮರ್ಸ್ ನಿಜವಾಗುತ್ತಾ? ಆರ್‌ಸಿಬಿ ಖರೀದಿಸಲು ಎಷ್ಟು ಬಂಡವಾಳ ಬೇಕು? ಆರ್‌ಸಿಬಿ ಬ್ರ್ಯಾಂಡ್‌ ವ್ಯಾಲ್ಯೂ ಎಷ್ಟು ಎನ್ನುವುದನ್ನು ಎಳೆಎಳೆಯಾಗಿ ವಿವರಿಸುತ್ತೇವೆ ನೋಡಿ.

ವಾಸ್ತವ vs ಸೋಷಿಯಲ್ ಮೀಡಿಯಾ ಪೋಸ್ಟರ್‌ ಸತ್ಯಾಸತ್ಯತೆ?

ಆರ್‌ಸಿಬಿ ಪುರುಷ ಹಾಗೂ ಮಹಿಳಾ ತಂಡಗಳನ್ನು ಹೊಂದಿರುವ ಡಿಯಾಜಿಯೊ ಒಡೆತನದ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹೂಡಿಕೆಯ ಕಾರ್ಯತಂತ್ರವನ್ನು ವಿಮರ್ಶಿಸಲು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮುಂದಾಗಿದೆ. ಮುಂಬರುವ ಮಾರ್ಚ್ 31, 2026ರೊಳಗಾಗಿ ಫ್ರಾಂಚೈಸಿಯು ತಂಡವನ್ನು ಮಾರಾಟ ಮಾಡುವ, ಪುನರ್ರಚನೆ ಅಥವಾ ಮಾಲೀಕತ್ವದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದೀಗ ಆರ್‌ಸಿಬಿ ತಂಡವನ್ನು ಖರೀದಿಸಲು ಹಲವು ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ವರದಿಯಾಗುತ್ತಲೇ ಇವೆ. ಈ ಪೈಕಿ ಹೊಂಬಾಳೆ ಫಿಲ್ಮ್ಸ್‌ ಕೂಡಾ ಆಸಕ್ತಿ ತೋರಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವರದಿಯಾಗಿದೆ. ಹೊಂಬಾಳೆ ಸಂಸ್ಥೆಯು ಆರ್‌ಸಿಬಿಯ ಜತೆ ಈಗಾಗಲೇ ಡಿಜಿಟಲ್ ಕಂಟೆಂಟ್ ಪಾರ್ಟ್ನರ್ ಆಗಿದೆ. 2023ರಿಂದಲೂ ಅರ್‌ಸಿಬಿ ಹಾಗೂ ಹೊಂಬಾಳೆ ಫಿಲ್ಮ್ಸ್ ಡಿಜಿಟಲ್ ಕಂಟೆಂಟ್ ಪಾಲುದಾರಿಕೆ ಹೊಂದಿವೆ. ಈ ಎರಡು ಸಂಸ್ಥೆಗಳು ಒಟ್ಟಾಗಿ ಫ್ರಾಂಚೈಸಿಗಾಗಿ ಸಿನಿಮಾಟೋಗ್ರಾಫಿಕ್ ಪ್ರೊಮೋ, ಅಭಿಮಾನಿಗಳ ಜತೆ ನಿರಂತರ ಸಂಪರ್ಕ ಹೊಂದಲು ಹಲವು ವಿಡಿಯೋಗಳನ್ನು ಮಾಡುತ್ತಾ ಬಂದಿದೆ. ಇವೆಲ್ಲವೂ ಹೊಂಬಾಳೆ ಸಂಸ್ಥೆಯು ಆರ್‌ಸಿಬಿ ತಂಡವನ್ನು ಖರೀದಿಸುತ್ತದೆ ಎನ್ನುವ ಸುದ್ದಿಗೆ ರೆಕ್ಕೆಪುಕ್ಕ ಬರುವಂತೆ ಮಾಡಿದೆ.

ಹೊಂಬಾಳೆ ಫಿಲ್ಮ್ಸ್‌ನಲ್ಲಿ ಯಾರೆಲ್ಲಾ ಇದ್ದಾರೆ?

ಹೊಂಬಳೆ ಫಿಲ್ಮ್ಸ್‌ ಬೆಂಗಳೂರು ಮೂಲದ ಸಿನಿಮಾ ಪ್ರೊಡಕ್ಷನ್ ಹಾಗೂ ಡಿಸ್ಟ್ರಿಬ್ಯೂಷನ್ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು 2012ರಲ್ಲಿ ವಿಜಯ್ ಕಿರಗಂದೂರು ಹಾಗೂ ಚಲುವೆ ಗೌಡ ಅವರು ಸೇರಿ ಸ್ಥಾಪಿಸಿದರು. ಕಳೆದೊಂದು ದಶಕದಲ್ಲಿ ಹೊಂಬಾಳೆ ಫಿಲ್ಮ್ಸ್‌, ರಾಜಕುಮಾರ, ಕೆಜಿಎಫ್‌, ಕಾಂತಾರ ಹಾಗೂ ಸಲಾರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿದೆ. ಈ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆಹೊಡೆದದ್ದು ಮಾತ್ರವಲ್ಲದೇ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಮನೆ ಮಾತಾಗಿದ್ದು, ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡವೆನಿಸಿಕೊಂಡಿರುವ ಆರ್‌ಸಿಬಿಯನ್ನು ಖರೀದಿಸಿದರೆ, ಕ್ರಿಕೆಟ್ ಹಾಗೂ ಸಿನಿಮಾ ಒಟ್ಟಿಗೆ ಬಂದಂತೆ ಆಗುತ್ತದೆ. ಅದರ ಜತೆಗೆ ಸ್ಥಳೀಯ ಮಾಲೀಕತ್ವದ ತಂಡ ಎನಿಸಿಕೊಳ್ಳುತ್ತದೆ ಎನ್ನುವುದು ನೆಟ್ಟಿಗರ ಲೆಕ್ಕಾಚಾರ ಆಗಿದೆ. ಆದರೆ ಇದು ಅಂದುಕೊಂಡಷ್ಟು ಸುಲಭದ ಮಾತಲ್ಲ.

ಸದ್ಯ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಬೀಗಿರುವ ಹಾಲಿ ಚಾಂಪಿಯನ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ವ್ಯಾಲ್ಯೂ 2 ಬಿಲಿಯನ್ ಯುಎಸ್ ಡಾಲರ್. ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಸುಮಾರು 17,000 ಕೋಟಿಗಳಷ್ಟು. ಇಷ್ಟು ಮೊತ್ತಕ್ಕೆ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ತಂಡವನ್ನು ಖರೀದಿಸುವುದು ಕಷ್ಟ ಸಾಧ್ಯ. ಇದರಾಚೆಗೂ ಹೊಂಬಾಳೆ ಫಿಲ್ಮ್ಸ್‌, ಬೆಂಗಳೂರು ಮೂಲದ ಆರ್‌ಸಿಬಿ ತಂಡ ಖರೀದಿಸಿದರೆ ನಿಜಕ್ಕೂ ಕನ್ನಡಿಗರ ಪಾಲಿಗೆ ದೊಡ್ಡ ಸುದ್ದಿಯಾಗುವುದರಲ್ಲಿ ಎರಡು ಮಾತಿಲ್ಲ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ