
ನವದೆಹಲಿ(ನ.03): ಟಿ20 ಕ್ರಿಕೆಟ್ ಎಂದಾಕ್ಷಣ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಸೇರಿದಂತೆ ಹಲವು ದಿಗ್ಗಜ ಆಟಗಾರರ ಹೆಸರುಗಳು ನೆನಪಾಗುತ್ತವೆ. ಆದರೆ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ಟಿ20 ಕ್ರಿಕೆಟಿಗ ಈ ಆಟಗಾರರಲ್ಲ. ಬದಲಿಗೆ ವೆಸ್ಟ್ ಇಂಡೀಸ್‌ನ ಸ್ಪಿನ್ ಆಲ್‌ರೌಂಡರ್ ಸುನಿಲ್ ನರೈನ್!
ಇತ್ತೀಚೆಗೆ ಕ್ರಿಕ್‌ಇನ್ಫೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಇರ್ಫಾನ್ ಪಠಾಣ್ ಅವರಿಗೆ ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನನ್ನು ಆಯ್ಕೆ ಮಾಡುವ ಸವಾಲು ನೀಡಲಾಗಿತ್ತು. ಮೂರು ಹಂತಗಳಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಸ್ಟಾರ್ ಆಟಗಾರರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಪಠಾಣ್ ಅವರು ಸುನಿಲ್ ನರೈನ್ ಅವರನ್ನು ತಮ್ಮ ಆಯ್ಕೆಯಾಗಿ ಘೋಷಿಸಿದರು.
ಇರ್ಫಾನ್ ಪಠಾಣ್ ಅವರಿಗೆ ಮೊದಲ ಹಂತದಲ್ಲಿ ನಾಲ್ಕು ಜೋಡಿ ಆಟಗಾರರ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ ಅವರು ರಶೀದ್ ಖಾನ್ ಬದಲಿಗೆ ಸುನಿಲ್ ನರೈನ್ ಅವರನ್ನು ಆಯ್ಕೆ ಮಾಡಿದರು. ಆಂಡ್ರೆ ರಸೆಲ್ ವಿರುದ್ಧ ಎಬಿ ಡಿವಿಲಿಯರ್ಸ್ ಅವರನ್ನು ಆರಿಸಿದರು. ಇನ್ನು ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ನಡುವಿನ ಆಯ್ಕೆಯಲ್ಲಿ ಕೊಹ್ಲಿಗೆ ಮಣೆ ಹಾಕಿದರು. ಕೀರನ್ ಪೊಲಾರ್ಡ್ ಬದಲಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿದರು.
ಮುಂದಿನ ಹಂತದಲ್ಲಿ ಮತ್ತೆ ನಾಲ್ವರು ಆಟಗಾರರ ನಡುವೆ ಪೈಪೋಟಿ ನಡೆಯಿತು. ಈ ಬಾರಿ ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿ ಸುನಿಲ್ ನರೈನ್ ಆಯ್ಕೆಯಾದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ವಿರುದ್ಧ ಜಸ್ಪ್ರೀತ್ ಬುಮ್ರಾ ಅವರನ್ನು ಪಠಾಣ್ ಆಯ್ಕೆ ಮಾಡಿದರು.
ಅಂತಿಮ ಸುತ್ತಿನಲ್ಲಿ ಸುನಿಲ್ ನರೈನ್ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ ಆಯ್ಕೆ ಮಾಡುವ ಅವಕಾಶ ಇರ್ಫಾನ್ ಪಠಾಣ್ ಅವರಿಗೆ ಸಿಕ್ಕಿತು. ಈ ವೇಳೆ ಅವರು ಯಾವುದೇ ಗೊಂದಲವಿಲ್ಲದೆ ಸುನಿಲ್ ನರೈನ್ ಅವರನ್ನೇ ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರ ಎಂದು ಆಯ್ಕೆ ಮಾಡಿದರು.
ನರೈನ್ ಅವರ ಬಹುಮುಖ ಸಾಮರ್ಥ್ಯವೇ ಈ ಆಯ್ಕೆಗೆ ಪ್ರಮುಖ ಕಾರಣ. ಅವರು ಕೇವಲ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲೂ ತಂಡಕ್ಕೆ ದೊಡ್ಡ ಕೊಡುಗೆ ನೀಡಬಲ್ಲ ಆಟಗಾರ. ವಿಶೇಷವಾಗಿ ಕೋಲ್ಕತಾ ನೈಟ್ ರೈಡರ್ಸ್ (KKR) ಪರ ಆರಂಭಿಕರಾಗಿ ಕಣಕ್ಕಿಳಿಯುವ ನರೈನ್, ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯಗಳ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.
Sunil Narine, Jasprit Bumrah or someone else? Who's the greatest T20 cricketer of all time? https://t.co/wRGixU7lyR
— Cricinfo (@cricinfo) November 3, 2026
ಸುನಿಲ್ ನರೈನ್ ಅವರ ಟಿ20 ದಾಖಲೆ ಕೂಡ ಗಮನಾರ್ಹವಾಗಿದೆ. 2011ರಿಂದ 2026ರವರೆಗೆ ಫ್ರಾಂಚೈಸಿ ಹಾಗೂ ದೇಶದ ಪರವಾಗಿ ಒಟ್ಟು 617 ಟಿ20 ಪಂದ್ಯಗಳನ್ನಾಡಿರುವ ಅವರು 658 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಇದಲ್ಲದೆ, ನರೈನ್ ಎರಡು ಟಿ20 ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಅವರ ಸ್ಪಿನ್ ಬೌಲಿಂಗ್, ಬ್ಯಾಟಿಂಗ್ ಸಾಮರ್ಥ್ಯ ಹಾಗೂ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡುವ ಗುಣ ಅವರನ್ನು ವಿಶೇಷ ಆಟಗಾರನನ್ನಾಗಿಸಿದೆ.
ಇರ್ಫಾನ್ ಪಠಾಣ್ ಅವರು ತಮ್ಮ ನೇರ ಮಾತು ಹಾಗೂ ಕ್ರಿಕೆಟ್ ಕುರಿತ ಅಭಿಪ್ರಾಯಗಳಿಂದ ಆಗಾಗ ಸುದ್ದಿಯಾಗುತ್ತಾರೆ. ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದಾಗ, ದೇಶೀಯ ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ಆಡಲು ಅವರು ಹಿಂದೇಟು ಹಾಕುತ್ತಿರುವುದನ್ನು ಪಠಾಣ್ ಟೀಕಿಸಿದ್ದರು.
ಆ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ನೀಡಿದ್ದ ಪಠಾಣ್, ನಿವೃತ್ತಿಗೂ ಮುನ್ನ 2013ರಲ್ಲಿ ಸಚಿನ್ ರಣಜಿ ಟ್ರೋಫಿ ಪಂದ್ಯವನ್ನಾಡಿದ್ದನ್ನು ನೆನಪಿಸಿದ್ದರು. "ಭಾರತಕ್ಕೆ ಸೂಪರ್‌ಸ್ಟಾರ್ ಸಂಸ್ಕೃತಿ ಬೇಕಾಗಿಲ್ಲ, ತಂಡದ ಸಂಸ್ಕೃತಿ ಬೇಕು. ವಿರಾಟ್ ಕೊಹ್ಲಿ ಬಿಡುವಿದ್ದಾಗ ಕೊನೆಯ ಬಾರಿ ದೇಶೀಯ ಕ್ರಿಕೆಟ್ ಆಡಿದ್ದು ಯಾವಾಗ? ಸುಮಾರು ಒಂದು ದಶಕವಾಗಿದೆ. ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರೂ ನಿವೃತ್ತಿಗೂ ಮುನ್ನ ದೇಶೀಯ ಕ್ರಿಕೆಟ್ ಆಡಿದ್ದರು. ಅವರು ಆಡುವ ಅಗತ್ಯವಿರಲಿಲ್ಲ. ಆದರೂ ಆಡಲು ಬಂದಿದ್ದರು" ಎಂದು ಪಠಾಣ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದರು.
ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಳಿಕ ಕಾಮೆಂಟರಿ ವಿಚಾರದಲ್ಲೂ ಕೆಲ ಬೆಳವಣಿಗೆಗಳು ನಡೆದು, ಅವರನ್ನು ಟಿವಿ ಕಾಮೆಂಟ್ರಿಯಿಂದ ಹೊರಗಿಡಲಾಗಿತ್ತು. ನಂತರ ಅವರು ಮತ್ತೆ ಕಾಮೆಂಟರಿ ತಂಡಕ್ಕೆ ಮರಳಿದ್ದರು. ಇದೀಗ ಸಾರ್ವಕಾಲಿಕ ಶ್ರೇಷ್ಠ ಟಿ20 ಕ್ರಿಕೆಟಿಗನ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಹಾಗೂ ಬುಮ್ರಾ ಅವರಂತಹ ಆಟಗಾರರನ್ನು ಹಿಂದಿಕ್ಕಿ ಸುನಿಲ್ ನರೈನ್ ಅವರನ್ನು ಆಯ್ಕೆ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.