
ಬೆಂಗಳೂರು(ನ.30): ಕಳೆದ ಎರಡು-ಮೂರು ಆವೃತ್ತಿಗಳಿಂದಲೂ ಕಪ್ ಗೆಲ್ಲದಿದ್ದರೂ ಅಮೋಘ ಪ್ರದರ್ಶನ ತೋರುವ ಅಭಿಮಾನಿಗಳನ್ನು ರಂಜಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಸಾಕಷ್ಟು ಅಲೋಚನೆ ಮಾಡಿ ರಿಷಭ್ ಪಂತ್ (Rishabh Pant) ಸೇರಿದಂತೆ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಆದರೆ ತನ್ನ ಮಾಜಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer), ಸ್ಪೋಟಕ ಬ್ಯಾಟರ್ ಶಿಮ್ರೊನ್ ಹೆಟ್ಮೇಯರ್ (Shimron Hetmyer), ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಹಾಗೂ ಡೆಡ್ಲಿ ವೇಗಿ ಕಗಿಸೋ ರಬಾಡ (Kagiso Rabada) ಅವರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಹೌದು, ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ನಾಯಕ ರಿಷಭ್ ಪಂತ್, ಆರಂಭಿಕ ಬ್ಯಾಟರ್ ಪೃಥ್ವಿ ಶಾ (Prithvi Shaw), ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಹಾಗೂ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಆನ್ರಿಚ್ ನೊಕಿಯೆ (Anrich Nortje) ಅವರನ್ನು ರೀಟೈನ್ ಮಾಡಿಕೊಂಡಿದ್ದಾರೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ರಿಷಭ್ ಪಂತ್ ಬರೋಬ್ಬರಿ 16 ಕೋಟಿ ರುಪಾಯಿ ಪಡೆಯಲಿದ್ದಾರೆ. ಇನ್ನು ಮುಂಬೈ ಮೂಲದ ಯುವ ಬ್ಯಾಟರ್ ಪೃಥ್ವಿ ಶಾ 12 ಕೋಟಿ, ಅಕ್ಷರ್ ಪಟೇಲ್ 8 ಕೋಟಿ ಹಾಗೂ ಏನ್ರಿಚ್ ನೊಕಿಯೆ 6 ಕೋಟಿ ರುಪಾಯಿಗಳನ್ನು ಜೀಬಿಗಿಳಿಸಲಿದ್ದಾರೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 42 ಕೋಟಿ ರುಪಾಯಿಗಳನ್ನು ಈಗಾಗಲೇ ಖರ್ಚು ಮಾಡಿದ್ದು, ಇನ್ನು ಕೇವಲ 48 ಕೋಟಿ ರುಪಾಯಿಗಳಲ್ಲಿ ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದಾಗಿದೆ.
IPL retention: ಚಹಾಲ್, ಕನ್ನಡಿಗರ ಕೈಬಿಟ್ಟು, ಕೊಹ್ಲಿ ಸೇರಿ ಮೂವರ ಉಳಿಸಿಕೊಂಡ RCB!
ಅಚ್ಚರಿಗೆ ಕಾರಣವಾದ ಡೆಲ್ಲಿ ನಿರ್ಧಾರ: ಹೌದು ಡೆಲ್ಲಿ ಕ್ಯಾಪಿಟಲ್ಸ್ ಪರ ಕಳೆದ ಆವೃತ್ತಿಯಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ (Shikhar Dhawan) ಗರಿಷ್ಠ ಮೊತ್ತ ಕಲೆಹಾಕುವ ಮೂಲಕ ಗಮನ ಸೆಳೆದಿದ್ದರು. ಇದೀಗ ಶಿಖರ್ ಧವನ್ ಅವರನ್ನು ರೀಟೈನ್ ಮಾಡಿಕೊಂಡಿಲ್ಲ. ಇನ್ನು ಅನ್ ಕ್ಯಾಪ್ ಆಟಗಾರ ಆವೇಶ್ ಖಾನ್ (Avesh Khan) ಅವರನ್ನು ಸಹಾ ತಂಡದಿಂದ ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಇದಷ್ಟೇ ಅಲ್ಲದೇ ರವಿಚಂದ್ರನ್ ಅಶ್ವಿನ್ (Ravichandran Ashwin), ಶ್ರೇಯಸ್ ಅಯ್ಯರ್ ಅವರಂತಹ ತಾರಾ ಆಟಗಾರರನ್ನು ಕೈಬಿಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಫೈನಲ್ ಪ್ರವೇಶಿಸಿ ಕಪ್ ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ ಮುಂಬೈ ಇಂಡಿಯನ್ಸ್ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ಇನ್ನು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಗ್ರೂಪ್ ಹಂತದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿತ್ತು. ಆದರೆ ಮೊದಲ ಕ್ವಾಲಿಫೈಯರ್ ಹಾಗೂ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ನಿರಾಸೆ ಅನುಭವಿಸುವ ಮೂಲಕ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು.
ಕಳೆದ ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ ಪರ 16 ಪಂದ್ಯಗಳನ್ನಾಡಿ 587 ರನ್ ಬಾರಿಸುವ ಮೂಲಕ ಡೆಲ್ಲಿ ಪರ ಗರಿಷ್ಠ ಹಾಗೂ ಒಟ್ಟಾರೆ 4ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಹೀಗಿದ್ದು ಗಬ್ಬರ್ ಸಿಂಗ್ ಅವರನ್ನು ರೀಟೈನ್ ಮಾಡಿಕೊಳ್ಳಲು ಡೆಲ್ಲಿ ಫ್ರಾಂಚೈಸಿ ಹಿಂದೇಟು ಹಾಕಿದೆ. ಇನ್ನು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ಗರಿಷ್ಠ ವಿಕೆಟ್ ಪಡೆದಿದ್ದ ಆವೇಶ್ ಖಾನ್ ಅವರನ್ನು ಸಹಾ ರೀಟೈನ್ ಮಾಡಿಕೊಳ್ಳಲು ಡೆಲ್ಲಿ ಫ್ರಾಂಚೈಸಿ ಮನಸು ಮಾಡಿಲ್ಲ.
ರಿಷಭ್ ಪಂತ್ ಕಳೆದ ಆವೃತ್ತಿಯಲ್ಲಿ 16 ಪಂದ್ಯಗಳಿಂದ 419 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದರು. ಇನ್ನು ಪೃಥ್ವಿ ಶಾ 479 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದರು. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ 12 ಪಂದ್ಯಗಳಿಂದ 15 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದ್ದರೆ, ಹರಿಣಗಳ ವೇಗಿ ಆನ್ರಿಚ್ ನೊಕೊಯೆ ಟಾಪ್ 15 ಪಟ್ಟಿಯೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.