ಬೆಂಗಳೂರು: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಮೊದಲ ನಾಲ್ಕು ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವಂತೆ ಮಾಡಿದೆ. ಮೊದಲ ಮೂರು ಪಂದ್ಯಗಳು ಹೈಸ್ಕೋರಿಂಗ್ ಮ್ಯಾಚ್ ಎನಿಸಿಕೊಂಡರೆ, ಮಂಗಳವಾರ ನಡೆದ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಕೊನೆಯ ಓವರ್‌ನಲ್ಲಿ ಗುಜರಾತ್ ಎದುರು ಪಂಜಾಬ್ ಗೆದ್ದು ಶುಭಾರಂಭ ಮಾಡುವಲ್ಲಿ ಯಶಸ್ವಿಯಾಗಿದೆ.
ಇನ್ನು ಇದೆಲ್ಲದರ ನಡುವೆ ಈ ಬಾರಿಯ ಐಪಿಎಲ್‌ನಲ್ಲೂ ಹೊಸ ಹೊಸ ಮೈಲಿಗಲ್ಲುಗಳು ನಿರ್ಮಾಣವಾಗುತ್ತಿವೆ. ಹೀಗಿರುವಾಗಲೇ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂದೆ-ಮಗನ ಮುಖಾಮುಖಿಗೂ ವೇದಿಕೆ ಸಜ್ಜಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು ರೆಡಿಯಾಗಿದ್ದಾರೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್, 2023ರಲ್ಲಿ ಮುಂಬೈ ಇಂಡಿಯನ್ಸ್ ಮೂಲಕವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರೂ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ. ಮುಂಬೈ ಇಂಡಿಯನ್ಸ್ ಪರ ಅರ್ಜುನ್ 5 ಪಂದ್ಯಗಳನ್ನಾಡಿ ಕೇವಲ 3 ವಿಕೆಟ್ ಪಡೆದಿದ್ದರು. ಇದೇ ಕಾರಣಕ್ಕಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ತೊರೆಯಲು ಅರ್ಜುನ್ ತೆಂಡೂಲ್ಕರ್ ಒಲವು ತೋರಿದ್ದರು ಎನ್ನಲಾಗಿದೆ. ಹೀಗಾಗಿ ಮುಂಬೈ ಫ್ರಾಂಚೈಸಿಯು ಕಳೆದ ಐಪಿಎಲ್ ಮಿನಿ ಹರಾಜಿಗೂ ಮುನ್ನ ಅರ್ಜುನ್ ತೆಂಡೂಲ್ಕರ್ ಅವರನ್ನು 30 ಲಕ್ಷ ರುಪಾಯಿಗೆ ಲಖನೌ ಸೂಪರ್ ಜೈಂಟ್ಸ್‌ಗೆ ಟ್ರೇಡ್ ಮಾಡಿತ್ತು. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ತಂದೆ ಹಾಗೂ ಮಗ ಎದುರಾಳಿ ಪಡೆಯಲ್ಲಿ ಗುರುತಿಸಿಕೊಳ್ಳಲಿದ್ದಾರೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮುಂಬರುವ ಮೇ 04ರಂದು ಮುಂಬೈನ ವಾಂಖಡೆ ಮೈದಾನದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ತಂದೆ-ಮಗನ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಈ ಮ್ಯಾಚ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಫ್ಯಾನ್ಸ್ ಇನ್ನೊಂದು ತಿಂಗಳು ಕಾಯಬೇಕಾಗುತ್ತದೆ.
ಐಪಿಎಲ್‌ನಲ್ಲಿ ಈಗಾಗಲೇ ಸಹೋದರರ ಸವಾಲುಗಳಿಗೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಈಗಾಗಲೇ ಇರ್ಫಾನ್ ಪಠಾಣ್, ಯೂಸೂಪ್ ಪಠಾಣ್, ರಾಹುಲ್ ಚಹಾರ್-ದೀಪಕ್ ಚಹರ್, ಹಾರ್ದಿಕ್ ಪಾಂಡ್ಯ-ಕೃನಾಲ್ ಪಾಂಡ್ಯ ನಡುವಿನ ಕಾದಾಟವನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾರ್ಗದರ್ಶನದ ಮುಂಬೈ ಎದುರು ಅರ್ಜುನ್ ತೆಂಡೂಲ್ಕರ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.