ಚೆನ್ನೈ ಬಳಿಕ ರಾಜಸ್ಥಾನ ರಾಯಲ್ಸ್‌ ತಂಡವೂ ಮನೆಗೆ! ಪ್ಲೇ ಆಫ್‌ ರೇಸ್‌ನಿಂದ ಅಧಿಕೃತ ಔಟ್

Published : May 02, 2025, 06:33 AM ISTUpdated : May 02, 2025, 07:02 AM IST
ಚೆನ್ನೈ ಬಳಿಕ ರಾಜಸ್ಥಾನ ರಾಯಲ್ಸ್‌ ತಂಡವೂ ಮನೆಗೆ! ಪ್ಲೇ ಆಫ್‌ ರೇಸ್‌ನಿಂದ ಅಧಿಕೃತ ಔಟ್

ಸಾರಾಂಶ

ರಾಜಸ್ಥಾನ ರಾಯಲ್ಸ್ ಐಪಿಎಲ್ 2024ರಿಂದ ಹೊರಬಿದ್ದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 100 ರನ್‌ಗಳಿಂದ ಸೋತು, ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಎರಡನೇ ತಂಡ ಎನಿಸಿಕೊಂಡಿತು. ರೋಹಿತ್ ಶರ್ಮಾ 6000 ರನ್ ಪೂರೈಸಿದರು ಮತ್ತು ಸೂರ್ಯಕುಮಾರ್ ಯಾದವ್ ಸತತ 11 ಪಂದ್ಯಗಳಲ್ಲಿ 25+ ರನ್ ಗಳಿಸಿದ ದಾಖಲೆ ನಿರ್ಮಿಸಿದರು.

ಜೈಪುರ: ಚೊಚ್ಚ ಆವೃತ್ತಿ ಐಪಿಎಲ್‌ನ ಚಾಂಪಿಯನ್ ರಾಜಸ್ಥಾನ ರಾಯಲ್ಸ್‌ 18ನೇ ಆವೃತ್ತಿ ಟೂರ್ನಿಯಲ್ಲಿ ಲೀಗ್‌ ಹಂತದಲ್ಲೇ ಹೊರಬಿದ್ದಿದೆ. ಗುರುವಾರ ಮುಂಬೈ ಇಂಡಿಯನ್ಸ್‌ ವಿರುದ್ಧ 100 ರನ್‌ಗಳ ಹೀನಾಯ ಸೋಲು ಕಂಡ ತಂಡ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಗುಳಿಯಿತು. ಇದಕ್ಕೂ ಮೊದಲು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿತ್ತು. ರಾಜಸ್ಥಾನ ಆಡಿದ 11 ಪಂದ್ಯಗಳಲ್ಲಿ 8ನೇ ಸೋಲುಂಡಿದ್ದು, ಇನ್ನುಳಿದ 3 ಪಂದ್ಯ ಗೆದ್ದರೂ ಉಪಯೋಗವಿಲ್ಲ. ಮತ್ತೊಂದೆಡೆ 5 ಬಾರಿ ಚಾಂಪಿಯನ್‌ ಮುಂಬೈ ಸತತ 6 ಸೇರಿ ಒಟ್ಟು 7 ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್‌ ಸೋತ ಮುಂಬೈ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟರೂ, ಸ್ಫೋಟಕ ಆರಂಭ ಪಡೆಯಿತು. ಕ್ರೀಸ್‌ಗಿಳಿದ ಎಲ್ಲಾ ಬ್ಯಾಟರ್‌ಗಳ ಅಬ್ಬರದಿಂದಾಗಿ ಮುಂಬೈ 2 ವಿಕೆಟ್‌ಗೆ 217 ರನ್‌ ಕಲೆಹಾಕಿತು. ಮೊದಲ ವಿಕೆಟ್‌ಗೆ ರೋಹಿತ್‌ ಶರ್ಮಾ ಹಾಗೂ ರಿಕೆಲ್ಟನ್‌ 116 ರನ್ ಸೇರಿಸಿದರು. ರೋಹಿತ್‌ 36 ಎಸೆತಕ್ಕೆ 53 ರನ್‌ ಗಳಿಸಿದರೆ, ರಿಕೆಲ್ಟನ್‌ 38 ಎಸೆತಕ್ಕೆ 61 ರನ್‌ ಸಿಡಿಸಿದರು. ಬಳಿಕ ಸೂರ್ಯಕುಮಾರ್‌ 23 ಎಸೆತಕ್ಕೆ ಔಟಾಗದೆ 48, ಹಾರ್ದಿಕ್‌ ಪಾಂಡ್ಯ 23 ಎಸೆತಕ್ಕೆ ಔಟಾಗದೆ 48 ರನ್‌ ಬಾರಿಸಿದರು.

ದೊಡ್ಡ ಗುರಿ ಬೆನ್ನತ್ತಿದ ರಾಜಸ್ಥಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಐಪಿಎಲ್‌ನ ಅತಿ ಕಿರಿಯ ಶತಕವೀರ, 14 ವೈಭವ್‌ ಸೂರ್ಯವಂಶಿ ಸೊನ್ನೆಗೆ ಔಟಾದರು. ಬಳಿಕ ಯಾವ ಬ್ಯಾಟರ್‌ಗೂ ಕ್ರೀಸ್‌ನಲ್ಲಿ ನೆಲೆಯೂರಲಾಗಲಿಲ್ಲ. ಪವರ್‌-ಪ್ಲೇನಲ್ಲೇ 5 ವಿಕೆಟ್‌ ಕಳೆದುಕೊಂಡ ತಂಡ, 16.1 ಓವರ್‌ಗಳಲ್ಲಿ ಸರ್ವಪತನ ಕಂಡಿತು. ಟ್ರೆಂಟ್‌ ಬೌಲ್ಟ್‌, ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್: 
ಮುಂಬೈ 20 ಓವರಲ್ಲಿ 217/2 (ರಿಕೆಲ್ಟನ್‌ 61, ರೋಹಿತ್ 53, ಸೂರ್ಯಕುಮಾರ್‌ 48*, ಹಾರ್ದಿಕ್‌ 48*, ಪರಾಗ್‌ 1-12),
ರಾಜಸ್ಥಾನ 16.1 ಓವರಲ್ಲಿ 117/10 (ರಿಯಾನ್‌ 16, ಆರ್ಚರ್: 30, ಕರ್ಣ ಶರ್ಮಾ: 23-3)

ಮುಂಬೈ ಪರ ರೋಹಿತ್‌ ಶರ್ಮಾ 6000 ರನ್‌

ಜೈಪುರ: ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ 6000 ರನ್‌ ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 6000ಕ್ಕಿಂತ ಹೆಚ್ಚು ರನ್‌ ಗಳಿಸಿದ ಕೇವಲ 2ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ 8871 ರನ್‌ ಗಳಿಸಿದ್ದಾರೆ.

ಗುರುವಾರ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ರೋಹಿತ್‌ ಈ ಮೈಲುಗಲ್ಲು ಸಾಧಿಸಿದರು. ಅವರು ಮುಂಬೈ ಪರ 231 ಪಂದ್ಯಗಳನ್ನಾಡಿದ್ದು, 6024 ರನ್‌ ಸಿಡಿಸಿದ್ದಾರೆ. ಇದರಲ್ಲಿ 2 ಶತಕ, 39 ಅರ್ಧಶತಕಗಳೂ ಒಳಗೊಂಡಿವೆ. ಮುಂಬೈ ಪರ 2ನೇ ಗರಿಷ್ಠ ರನ್‌ ಬಾರಿಸಿದ್ದು ಕೀರನ್‌ ಪೊಲ್ಲಾರ್ಡ್‌. ಅವರು 211 ಪಂದ್ಯಗಳಲ್ಲಿ 3915 ರನ್ ಗಳಿಸಿದ್ದಾರೆ.

ಸತತ 11 ಬಾರಿ 25+ ರನ್‌: ಸೂರ್‍ಯ ದಾಖಲೆ

ಐಪಿಎಲ್‌ನಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳಲ್ಲಿ ತಲಾ 25+ ರನ್‌ ಕಲೆಹಾಕಿದ ಆಟಗಾರ ಎಂಬ ಖ್ಯಾತಿಗೆ ಸೂರ್ಯಕುಮಾರ್‌ ಪಾತ್ರರಾಗಿದ್ದಾರೆ. ಅವರು ಈ ಬಾರಿ ಐಪಿಎಲ್‌ನ 11 ಪಂದ್ಯಗಳಲ್ಲೂ ತಲಾ 25+ ರನ್‌ ಗಳಿಸಿದ್ದಾರೆ. 2014ರಲ್ಲಿ ರಾಬಿನ್‌ ಉತ್ತಪ್ಪ 10 ಬಾರಿ ಈ ಸಾಧನೆ ಮಾಡಿದ್ದರು. ಅದನ್ನು ಸೂರ್ಯ ಮುರಿದಿದ್ದಾರೆ.

ಪ್ಲೇ-ಆಫ್‌ ರೇಸ್‌ನಿಂದ2 ತಂಡಗಳು ಹೊರಕ್ಕೆ

ಈ ಬಾರಿ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ 2ನೇ ತಂಡ ರಾಜಸ್ಥಾನ. ಗುರುವಾರ ಚೆನ್ನೈ ಸೂಪರ್‌ ಕಿಂಗ್ಸ್‌ ಹೊರಬಿದ್ದಿತ್ತು. ಈ ಎರಡೂ ತಂಡಗಳು ತಲಾ 8 ಪಂದ್ಯಗಳಲ್ಲಿ ಸೋತಿವೆ.

ಬೆರಳು ಮುರಿತ: ರಾಯಲ್ಸ್‌ ವೇಗಿ ಸಂದೀಪ್‌ ಹೊರಕ್ಕೆ

ಜೈಪುರ: ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಸಂದೀಪ್‌ ಶರ್ಮಾರ ಕೈ ಬೆರಳು ಮುರಿತಕ್ಕೊಳಗಾಗಿದ್ದು, ಈ ಬಾರಿ ಐಪಿಎಲ್‌ನ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದನ್ನು ಫ್ರಾಂಚೈಸಿ ಗುರುವಾರ ಖಚಿತಪಡಿಸಿದೆ. ತಂಡ ಇನ್ನಷ್ಟೇ ಬದಲಿ ಆಟಗಾರನ ಹೆಸರು ಪ್ರಕಟಿಸಬೇಕಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌