
ಲಖನೌ: ಕಳೆದ ವರ್ಷ ಐಪಿಎಲ್‌ನಲ್ಲಿ ಲಖನ್ ಸೂಪರ್‌ಜೈಂಟ್ಸ್ ತಂಡದ ಮಾಲಿಕ ಸಂಜೀವ್ ಗೋಯೆಂಕಾದಿಂದ ಮೈದಾನದಲ್ಲೇ ಅವಮಾನಕ್ಕೊಳಗಾಗಿದ್ದ ಕೆ.ಎಲ್.ರಾಹುಲ್, ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. 3 ವರ್ಷ ಲಖನೌ ತಂಡದಲ್ಲಿ ಆಡಿದ್ದ ರಾಹುಲ್, ಮೊದಲ ಬಾರಿಗೆ ಆ ತಂಡದ ವಿರುದ್ಧ ಆಡಲು ಎದುರು ನೋಡುತ್ತಿದ್ದು, ಮಂಗಳವಾರ ಇಲ್ಲಿನ ಏಕನಾ ಕ್ರೀಡಾಂಗಣ ಉಭಯ ತಂಡಗಳ ಮುಖಾಮುಖಿಗೆ ವೇದಿಕೆ ಕಲ್ಪಿಸಲಿದೆ.
ತಮ್ಮ ಮಾಜಿ ತಂಡಗಳ ವಿರುದ್ಧ ಅಬ್ಬರಿಸುವುದು ಈ ಐಪಿಎಲ್‌ನಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್, ರಾಹುಲ್, ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ 92 ರನ್ ಚಚ್ಚಿದ್ದರು. ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ, ಈ ವರ್ಷ ಲಖನ್ ವಿರುದ್ಧ ಮೊದಲ ಮುಖಾಮುಖಿಯನ್ನು ತಪ್ಪಿಸಿಕೊಂಡಿದ್ದ ರಾಹುಲ್, ಈ ಪಂದ್ಯದಲ್ಲಿ ಆರ್ಭಟಿಸಲು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: BCCI ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಡೆದ ಇಶಾನ್ ಕಿಶನ್‌ಗೆ ಟೀಂ ಇಂಡಿಯಾದಲ್ಲಿ ಸಿಗುತ್ತಾ ಸ್ಥಾನ?
ಎರಡೂ ತಂಡಗಳು ಉತ್ತಮ ಲಯದಲ್ಲಿದ್ದು, ತಲಾ 5 ಗೆಲುವುಗಳೊಂದಿಗೆ 10 ಅಂಕ ಗಳಿಸಿವೆ. ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವತ್ತ ದಾಪುಗಾಲಿರಿಸಲು ಉತ್ಸುಕಗೊಂಡಿರುವ ತಂಡಗಳು, ಗೆಲುವಿನ ಲಯ ಕಾಯ್ದುಕೊಂಡು ಮತ್ತೆರಡು ಅಂಕ ಸಂಪಾದಿಸಲು ಕಾಯುತ್ತಿವೆ. ಲಖನೌ ತಂಡದ ಪರ ಏಯ್ಡನ್ ಮಾರ್ಕ್‌ರಮ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ರಿಷಭ್ ಪಂತ್ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನೊಂದೆಡೆ ಫಾಫ್ ಡು ಪ್ಲೆಸಿಸ್ ತಂಡ ಕೂಡಿಕೊಂಡರೆ, ಕರುಣ್ ನಾಯರ್ ಇಲ್ಲವೇ ಅಭಿಷೇಕ್ ಪೊರೆಲ್ ಇಂಪ್ಯಾಕ್ಟ್ ಆಟಗಾರನಾಗಿ ಡೆಲ್ಲಿ ಪರ ಕಾಣಿಸಿಕೊಳ್ಳಬಹುದು. ಡೆಲ್ಲಿ ಕೂಡಾ ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಡೆಲ್ಲಿಯ ಫಾಫ್ ಡು ಪ್ಲೆಸಿಸ್, ಲಖನೌನ ವೇಗಿ ಮಯಾಂಕ್ ಯಾದವ್ ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದು. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಎರಡೂ ತಂಡ ಗಳ ರಣತಂತ್ರಗಳ ಬಗ್ಗೆ ಕುತೂಹಲವಿದೆ.
ಈ ಹಿಂದಿನ ಮುಖಾಮುಖಿಯಲ್ಲಿ ಡೆಲ್ಲಿ ಎದುರು ಲಖನೌ ಸೂಪರ್ ಜೈಂಟ್ಸ್ ಗೆಲುವಿನ ಹೊಸ್ತಿಲಲ್ಲಿತ್ತು. ಆದರೆ ಅಶುತೋಷ್ ಶರ್ಮಾ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಲಖನೌ ಕೈಯಲ್ಲಿದ್ದ ಗೆಲುವನ್ನು ಕಸಿಯುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ರಿಷಭ್ ಪಂತ್ ಪಡೆ ಎದುರು ನೋಡುತ್ತಿದೆ.
ಇದನ್ನೂ ಓದಿ: ಮುಂಬೈ ಎದುರು ಸೋತ ಸಿಎಸ್‌ಕೆ; ಧೋನಿ ಪಡೆ ಬಗ್ಗೆ ರಾಯುಡು ಅಚ್ಚರಿ ಹೇಳಿಕೆ!
ಆರಂಭದಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಜಯಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಎದುರು ಮುಗ್ಗರಿಸಿತ್ತು. ಆದರೆ ರಾಜಸ್ಥಾನ ಎದುರು ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಜಯದ ಹಳಿಗೆ ಮರಳಲಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಉಭಯ ತಂಡಗಳ ಆಟಗಾರ ಪಟ್ಟಿ:
ಲಖನೌ ಸೂಪರ್ ಜೈಂಟ್ಸ್: ಏಯ್ಡನ್ ಮಾರ್ಕ್‌ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್(ನಾಯಕ&ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ರವಿ ಬಿಷ್ಣೋಯಿ, ಶಾರ್ದೂಲ್ ಠಾಕೂರ್, ಮಯಾಂಕ್ ಯಾದವ್, ದಿಗ್ವೀಶ್ ಸಿಂಗ್ ರಾಥಿ, ಆವೇಶ್ ಖಾನ್, ಆಯುಷ್ ಬದೋನಿ.
ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೋರೆಲ್, ಕರುಣ್ ನಾಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಟ್ರಿಸ್ಟನ್ ಸ್ಟಬ್ಸ್, ಅಕ್ಷರ್ ಪಟೇಲ್(ನಾಯಕ), ಅಶುತೋಷ್ ಶರ್ಮಾ, ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಕೇಶ್ ಕುಮಾರ್, ದೊನಾವನ್ ಫೆರೇರಾ.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.