ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗೆಲ್ಲಲು 200 ರನ್ ಗುರಿ ಪಡೆದ ಪಂಜಾಬ್ ಕಿಂಗ್ಸ್ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಶಿಖರ್ ಧವನ್ ಕಳೆದುಕೊಂಡಿತು. ಧವನ್ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಅಹಮದಾಬಾದ್(ಏ.04): ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಗೆಲುವಿನ ನಗೆ ಬೀರುವಲ್ಲಿ ಪಂಜಾಬ್ ಕಿಂಗ್ಸ್ ತಂಡವು ಯಶಸ್ವಿಯಾಗಿದೆ. ಪಂಜಾಬ್ ಕಿಂಗ್ಸ್ ತಂಡವು ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 200 ರನ್ ಗುರಿಯನ್ನು ಯಶಸ್ವಿಯಾಗಿ ತಲುಪಿದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗೆಲ್ಲಲು 200 ರನ್ ಗುರಿ ಪಡೆದ ಪಂಜಾಬ್ ಕಿಂಗ್ಸ್ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಶಿಖರ್ ಧವನ್ ಕಳೆದುಕೊಂಡಿತು. ಧವನ್ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಜಾನಿ ಬೇರ್‌ಸ್ಟೋವ್ ಚುರುಕಾಗಿ 22 ರನ್ ಗಳಿಸಿದರು. ಪ್ರಭ್‌ಸಿಮ್ರನ್ ಸಿಂಗ್ 24 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 35 ರನ್ ಚಚ್ಚಿದರು.
ಶಶಾಂಕ್-ಅಶುತೋಷ್ ಜುಗಲ್ಬಂದಿ: ಒಂದು ಹಂತದಲ್ಲಿ 111 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಪಂಜಾಬ್ ತಂಡಕ್ಕೆ ಶಶಾಂಕ್ ಸಿಂಗ್ ಆಸರೆಯಾದರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಶಶಾಂಕ್ ಸಿಂಗ್ ಕೇವಲ 29 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 61 ರನ್ ಸಿಡಿಸಿ ಗೆಲುವಿನ ರೂವಾರಿ ಎನಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಅಶುತೋಷ್ ಶರ್ಮಾ, ಪರಿಣಾಮಕಾರಿ ಇನಿಂಗ್ಸ್ ಆಡಿದರು. ಅಶುತೋಷ್ ಕೇವಲ 17 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 31 ರನ್ ಸಿಡಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಗುಜರಾತ್ ಟೈಟಾನ್ಸ್ ತಂಡವು ಆರಂಭದಲ್ಲೇ ವೃದ್ದಿಮಾನ್ ಸಾಹ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ಶುಭ್‌ಮನ್ ಗಿಲ್ ಹಾಗೂ ಕೇನ್ ವಿಲಿಯಮ್ಸನ್ 40 ರನ್‌ಗಳ ಜತೆಯಾಟವಾಡಿದರು. ವಿಲಿಯಮ್ಸನ್ 26 ರನ್ ಬಾರಿಸಿ ಹರ್ಪ್ರೀತ್ ಬ್ರಾರ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಇದಾದ ಶುಭ್‌ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಶುಭ್‌ಮನ್ ಗಿಲ್ 48 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 89 ರನ್ ಬಾರಿಸಿ ಅಜೇಯರಾಗುಳಿದರೆ, ಸಾಯಿ ಸುದರ್ಶನ್ 33 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ರಾಹುಲ್ ತೆವಾಟಿಯಾ ಕೇವಲ 8 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇತ 23 ರನ್ ಸಿಡಿಸಿದರು.