
ಜೈಪುರ(ಮಾ.24): ನಾಯಕ ಸಂಜು ಸ್ಯಾಮ್ಸನ್ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ರಿಯಾಗ್ ಪರಾಗ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಬಾರಿಸಿದ್ದು, ಲಖನೌ ಸೂಪರ್ ಜೈಂಟ್ಸ್‌ಗೆ ಸವಾಲಿನ ಗುರಿ ನೀಡಿದೆ.
ಇಲ್ಲಿನ ಸವಾಯಿ ಮಾನ್‌ಸಿಂಗ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಯ್ದುಕೊಂಡ ರಾಜಸ್ಥಾನ ರಾಯಲ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಸ್ಪೋಟಕ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಕೇವಲ 11 ರನ್ ಗಳಿಸಿ ನವೀನ್ ಉಲ್ ಹಕ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ 12 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 24 ರನ್ ಬಾರಿಸಿ ಮೊಯ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.
ಸಂಜು-ಪರಾಗ್ ಜುಗಲ್ಬಂದಿ: ಕೇವಲ 49 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮೂರನೇ ವಿಕೆಟ್‌ಗೆ ನಾಯಕ ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಕೇವಲ 59 ಎಸೆತಗಳಲ್ಲಿ 93 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಯಾನ್ ಪರಾಗ್ 29 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಮತ್ತೊಂದು ತುದಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ನಾಯಕ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಸಂಜು ಸ್ಯಾಮ್ಸನ್ ಕೇವಲ 33 ಎಸೆತಗಳನ್ನು ಎದುರಿಸಿ 21ನೇ ಐಪಿಎಲ್ ಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ ಸಂಜು ಸ್ಯಾಮ್ಸನ್ 52 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 82 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ಧೃವ್ ಜುರೆಲ್ ಕೇವಲ 12 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ಸಹಿತ ಆಕರ್ಷಕ 20 ರನ್ ಸಿಡಿಸಿದರು.
ಲಖನೌ ಸೂಪರ್ ಜೈಂಟ್ಸ್ ಪರ ನವೀನ್ ಉಲ್ ಹಕ್ 41 ರನ್ ನೀಡಿ ಎರಡು ವಿಕೆಟ್ ಪಡೆದರೆ, ರವಿ ಬಿಷ್ಣೋಯಿ ಹಾಗೂ ಮೊಯ್ಸಿನ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.