IPL 2024: ಎಲಿಮಿನೇಟರ್ ಕದನದಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಆರ್‌ಸಿಬಿ

By Naveen Kodase  |  First Published May 22, 2024, 9:21 PM IST

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಚ್ಚರಿಕೆಯ ಆರಂಭ ಪಡೆಯಿತು. ಆರಂಭದಲ್ಲೇ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮಾರಕ ದಾಳಿ ನಡೆಸಿದರು.


ಅಹಮದಾಬಾದ್(ಮೇ.22): ರಾಜಸ್ಥಾನ ರಾಯಲ್ಸ್ ಬೌಲರ್‌ಗಳ ಸಂಘಟಿತ ಪ್ರದರ್ಶನದ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭಿಕ ಆಘಾತದ ಹೊರತಾಗಿಯೂ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿದೆ. ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಆರ್‌ಸಿಬಿ ತಂಡವು ರಾಜಸ್ಥಾನ ರಾಯಲ್ಸ್ ಪಡೆಯನ್ನು 171 ರನ್‌ಗಳೊಳಗಾಗಿ ಕಟ್ಟಿಹಾಕಬೇಕಿದೆ

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಚ್ಚರಿಕೆಯ ಆರಂಭ ಪಡೆಯಿತು. ಆರಂಭದಲ್ಲೇ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮಾರಕ ದಾಳಿ ನಡೆಸಿದರು. ಮೊದಲ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿ 28 ಎಸೆತಗಳನ್ನು ಎದುರಿಸಿ 37 ರನ್‌ಗಳ ಜತೆಯಾಟವಾಡಿತು. ನಾಯಕ ಫಾಫ್ 14 ಎಸೆತಗಳನ್ನು ಎದುರಿಸಿ 17 ರನ್ ಗಳಿಸಿ ಟ್ರೆಂಟ್ ಬೌಲಿಂಗ್‌ನಲ್ಲಿ ಪೋವೆಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Tap to resize

Latest Videos

ಐಪಿಎಲ್‌ನಲ್ಲಿ 8 ಸಾವಿರ ರನ್ ಬಾರಿಸಿದ ಕೊಹ್ಲಿ: ಆರ್‌ಸಿಬಿ ರನ್ ಮಷೀನ್‌ ವಿರಾಟ್ ಕೊಹ್ಲಿ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಕೊಹ್ಲಿ 24 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 33 ರನ್ ಗಳಿಸಿ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದೇ ಪಂದ್ಯದಲ್ಲಿ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ 8 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾದರು. ಇನ್ನು ಶಿಖರ್ ಧವನ್(6769 ರನ್) ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಜತೆಯಾದ ಕ್ಯಾಮರೋನ್ ಗ್ರೀನ್ ಹಾಗೂ ರಜತ್ ಪಾಟೀದಾರ್ ಮೂರನೇ ವಿಕೆಟ್‌ಗೆ 31 ಎಸೆತಗಳಲ್ಲಿ 41 ರನ್‌ಗಳ ಜತೆಯಾಟವಾಡಿದರು. 

ಒಂದೇ ಓವರ್‌ನಲ್ಲಿ ಎರಡು ಬಲಿ ಪಡೆದ ಅಶ್ವಿನ್: ಪಾಟೀದಾರ್ ಹಾಗೂ ಗ್ರೀನ್ ಜತೆಯಾಟ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದರು. ಈ ವೇಳೆ ಅಶ್ವಿನ್ 13ನೇ ಓವರ್‌ನಲ್ಲಿ ಕ್ಯಾಮರೋನ್ ಗ್ರೀನ್(27) ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಕ್ರೀಸ್‌ಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಯತ್ನಿಸಿ ಜುರೆಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮ್ಯಾಕ್ಸ್‌ವೆಲ್ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 4ನೇ ಬಾರಿ ಶೂನ್ಯ ಸಂಪಾದನೆ ಮಾಡಿ ನಿರಾಸೆ ಮೂಡಿಸಿದರು. 

ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಜತ್ ಪಾಟೀದಾರ್ 22 ಎಸೆತಗಳನ್ನು ಎದುರಿಸಿ 34 ರನ್ ಗಳಿಸಿ ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ದಿನೇಶ್ ಕಾರ್ತಿಕ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಮಹಿಪಾಲ್ ಲೋಮ್ರಾರ್ ಕೇವಲ 17 ಎಸೆತಗಳನ್ನು ಎದುರಿಸಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ಸಹಿತ 32 ರನ್ ಗಳಿಸಿ ಆವೇಶ್‌ ಖಾನ್‌ಗೆ ಮೂರನೇ ಬಲಿಯಾದರು.
 

click me!