
ಕೋಲ್ಕತಾ(ಏ.22): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್‌ಗೇರುವ ಕೊನೆಯ ಅವಕಾಶವನ್ನು ಕೈಚೆಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಕೇವಲ ಒಂದು ರನ್ ಅಂತರದಲ್ಲಿ ರೋಚಕ ಸೋಲು ಅನುಭವಿಸಿದೆ. ಈ ಮೂಲಕ ಬೆಂಗಳೂರು ತಂಡವು ಈ ಬಾರಿಯ ಪ್ಲೇ ಆಫ್ ಕನಸು ಬಹುತೇಕ ನುಚ್ಚುನೂರಾಗಿದೆ. ಟೂರ್ನಿಯಲ್ಲಿ 8ನೇ ಪಂದ್ಯವನ್ನಾಡಿದ ಆರ್‌ಸಿಬಿ 7 ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ಸೋಲಲು ಅಂಪೈರ್ ಕೂಡಾ ಕಾರಣ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಅದರ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋವೀಗ ಇದಕ್ಕೆ ಪುಷ್ಠಿ ನೀಡುವಂತಿದೆ.
ಹೌದು, ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗೆಲ್ಲಲು 223 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಆರಂಭದಲ್ಲೇ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ರಜತ್ ಪಾಟೀದಾರ್(52) ಹಾಗೂ ವಿಲ್ ಜ್ಯಾಕ್ಸ್(55) ಸ್ಪೋಟಕ ಅರ್ಧಶತಕ ಸಿಡಿಸಿದರು. ಆರ್‌ಸಿಬಿ ಒಂದು ಹಂತದಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿ ಗೆಲುವಿನತ್ತ ಮುನ್ನುಗ್ಗುತ್ತಿತ್ತು. ಆದರೆ ಆಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್ ಕೇವಲ ಎರಡು ಓವರ್ ಅಂತರದಲ್ಲಿ ಆರ್‌ಸಿಬಿಯ 4 ವಿಕೆಟ್ ಕಬಳಿಸಿ ತಂಡಕ್ಕೆ ಬಲವಾದ ಹೊಡೆತ ಕೊಟ್ಟರು. ಪರಿಣಾಮ ಆರ್‌ಸಿಬಿ 155 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು.
ಯಾವಾಗಲೂ ಸೀರಿಯಸ್ ಆಗಿರುವ ನರೈನ್ ನಗಿಸಿದ ಕೊಹ್ಲಿ..! ನರೈನ್ ಎರಡನೇ ಪತ್ನಿ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ
ಇನ್ನು ಇದರ ಹೊರತಾಗಿಯೂ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ಇಂಪ್ಯಾಕ್ಟ್ ಆಟಗಾರ ಸುಯಾಶ್ ಪ್ರಭುದೇಸಾಯಿ ಉಪಯುಕ್ತ ಜತೆಯಾಟವಾಡಿದರು. 17ನೇ ಓವರ್‌ನಲ್ಲಿ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಪ್ರಭುದೇಸಾಯಿ ಚೆಂಡನ್ನು ಬೌಂಡರಿಗಟ್ಟಿದರು. ಅದರ ವಿಡಿಯೋವನ್ನು ಝೂಮ್ ಮಾಡಿ ನೋಡಿ ನೋಡಿದರೆ ಚೆಂಡು ಸ್ಪಷ್ಟವಾಗಿ ಸಿಕ್ಸರ್ ಆಗಿರುವುದು ಗೋಚರಿಸುತ್ತಿದೆ. ಆದರೆ ಅಂಪೈರ್ ಅದನ್ನು ಸೂಕ್ಷ್ಮವಾಗಿ ಗಮನಿಸದೇ ಬೌಂಡರಿ ತೀರ್ಪು ನೀಡುತ್ತಾರೆ. ಒಂದು ವೇಳೆ ಅದನ್ನು ಅಂಪೈರ್ ಸಿಕ್ಸರ್ ಎಂದು ತೀರ್ಪು ನೀಡಿದ್ದರೆ, ಆರ್‌ಸಿಬಿ ಸುಲಭವಾಗಿ ಗೆಲುವಿನ ದಡ ಸೇರುತ್ತಿತ್ತು. ಯಾಕೆಂದರೆ ಆರ್‌ಸಿಬಿ ಸೋತಿದ್ದು ಕೇವಲ ಒಂದು ರನ್ ಅಂತರದಲ್ಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಮಾತಾಗಿದೆ.
ಇಲ್ಲಿದೆ ನೋಡಿ ವಿಡಿಯೋ ಸಾಕ್ಷಿ;
ಇನ್ನು ಆರ್‌ಸಿಬಿ ತಂಡವು ಗೆಲ್ಲಲು ಕೊನೆಯ ಓವರ್‌ನಲ್ಲಿ 21 ರನ್ ಅಗತ್ಯವಿತ್ತು. ಮಿಚೆಲ್ ಸ್ಟಾರ್ಕ್ ಓವರ್‌ನಲ್ಲಿ ಕರ್ಣ್ ಶರ್ಮಾ 3 ಸಿಕ್ಸರ್ ಸಿಡಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಒಂದು ರನ್ ಅಂತರದ ವಿರೋಚಿತ ಸೋಲು ಅನುಭವಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.