ರೋಹಿತ್ ಶರ್ಮಾ ಶತಕ ಸಿಡಿಸಿದ್ರೂ, ವಾಖೇಡೆಲಿ ಚೆನ್ನೈ ಗೆ ಶರಣಾದ ಮುಂಬೈ..!

By Kannadaprabha NewsFirst Published Apr 15, 2024, 6:34 AM IST
Highlights

ಮೊದಲು ಬ್ಯಾಟ್‌ ಮಾಡಿದ ಚೆನ್ನೈ, ಶಿವಂ ದುಬೆ, ಋತುರಾಜ್‌ ಗಾಯಕ್ವಾಡ್‌ ಹಾಗೂ ಕೊನೆಯಲ್ಲಿ ಎಂ.ಎಸ್‌.ಧೋನಿ ಆರ್ಭಟದಿಂದಾಗಿ 4 ವಿಕೆಟ್‌ಗೆ 206 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಗೆಲ್ಲುವ ನಿರೀಕ್ಷೆ ಮೂಡಿಸಿತ್ತಾದರೂ ಕೊನೆಯಲ್ಲಿ ಮಂಕಾಗಿ 6 ವಿಕೆಟ್‌ಗೆ 186 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮುಂಬೈ: ರೋಹಿತ್‌ ಶರ್ಮಾ ಸ್ಫೋಟಕ ಶತಕದ ಹೊರತಾಗಿಯೂ ಮಥೀಶ ಪತಿರನ ಮೊನಚು ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್‌, ತವರಿನ ವಾಂಖೇಡೆ ಕ್ರೀಡಾಂಗಣದಲ್ಲೇ ಚೆನ್ನೈ ವಿರುದ್ಧ 21 ರನ್‌ಗಳಿಂದ ಪರಾಭವಗೊಂಡಿದೆ. ಹ್ಯಾಟ್ರಿಕ್‌ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದ್ದ ಮುಂಬೈ ಮತ್ತೆ ಸೋಲಿನ ಆಘಾತಕ್ಕೊಳಗಾದರೆ, ಡೆತ್‌ ಓವರ್‌ನಲ್ಲಿ ಮಿಂಚಿದ ಚೆನ್ನೈ 4ನೇ ಗೆಲುವು ದಾಖಲಿಸಿತು.ಮೊದಲು ಬ್ಯಾಟ್‌ ಮಾಡಿದ ಚೆನ್ನೈ, ಶಿವಂ ದುಬೆ, ಋತುರಾಜ್‌ ಗಾಯಕ್ವಾಡ್‌ ಹಾಗೂ ಕೊನೆಯಲ್ಲಿ ಎಂ.ಎಸ್‌.ಧೋನಿ ಆರ್ಭಟದಿಂದಾಗಿ 4 ವಿಕೆಟ್‌ಗೆ 206 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಗೆಲ್ಲುವ ನಿರೀಕ್ಷೆ ಮೂಡಿಸಿತ್ತಾದರೂ ಕೊನೆಯಲ್ಲಿ ಮಂಕಾಗಿ 6 ವಿಕೆಟ್‌ಗೆ 186 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮೊದಲ ವಿಕೆಟ್‌ಗೆ ಜೊತೆಯಾದ ರೋಹಿತ್‌-ಇಶಾನ್‌ 7.1 ಓವರಲ್ಲಿ 70 ರನ್‌ ಸೇರಿಸಿದರು. ಆದರೆ 8ನೇ ಓವರಲ್ಲಿ ಇಶಾನ್‌(23) ಹಾಗೂ ಸೂರ್ಯಕುಮಾರ್‌(00)ರನ್ನು ಪತಿರನ ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ರೋಹಿತ್‌ಗೆ ಜೊತೆಯಾದ ತಿಲಕ್‌ ವರ್ಮಾ 31 ರನ್‌ ಕೊಡುಗೆ ನೀಡಿದರು. ಕೊನೆ 8 ಓವರಲ್ಲಿ 89 ರನ್‌ ಬೇಕಿದ್ದಾಗಲೂ ಮುಂಬೈ ಗೆಲ್ಲುವ ನೆಚ್ಚಿನ ತಂಡ ಎನಿಸತ್ತು. ಆದರೆ ತಿಲಕ್‌, ಹಾರ್ದಿಕ್‌, ಟಿಮ್‌ ಡೇವಿಡ್‌ ಹಾಗೂ ಶೆಫರ್ಡ್‌ ಸತತ ಓವರ್‌ಗಳಲ್ಲಿ ಔಟಾದರು. ಕೊನೆಯಲ್ಲಿ ರೋಹಿತ್(63 ಎಸೆತದಲ್ಲಿ ಔಟಾಗದೆ105) ಇತರರಿಂದ ಸೂಕ್ತ ಬೆಂಬಲ ಸಿಗದಿದ್ದರಿಂದ ತಂಡ ಸೋಲುವಂತಾಯಿತು. ಮಾರಕ ದಾಳಿ ನಡೆಸಿದ ಪತಿರನ 4 ವಿಕೆಟ್‌ ಕಬಳಿಸಿದರು.

\Bಸ್ಫೋಟಕ ಬ್ಯಾಟಿಂಗ್:\B ಚೆನ್ನೈ ಆರಂಭವೇನೂ ಉತ್ತಮವಾಗಿರಲಿಲ್ಲ. ರಹಾನೆ(05) ಬೇಗನೇ ಔಟಾದರೆ, ರಚಿನ್‌ ರವೀಂದ್ರ ಕೊಡುಗೆ 21 ರನ್‌. ಮೊದಲ 10 ಓವರಲ್ಲಿ 80 ರನ್‌ ಗಳಿಸಿದ್ದ ತಂಡಕ್ಕೆ ಬಳಿಕ ಋತುರಾಜ್‌, ಶಿವಂ ದುಬೆ ಆಸರೆಯಾದರು. 3ನೇ ವಿಕೆಟ್‌ಗೆ ಇವರಿಬ್ಬರು 90 ರನ್‌ ಸೇರಿಸಿದರು. ಋತುರಾಜ್‌ 40 ಎಸೆತಗಳಲ್ಲಿ 69 ರನ್‌ ಸಿಡಿಸಿದರೆ, ಶಿವಂ ದುಬೆ 38 ಎಸೆತಗಳಲ್ಲಿ 66 ರನ್‌ ಚಚ್ಚಿ ಔಟಾಗದೆ ಉಳಿದರು. ಕೊನೆಯಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ಧೋನಿ 200ರ ಗಡಿ ದಾಟಿಸಿದರು.

ಸ್ಕೋರ್‌: 
ಚೆನ್ನೈ 20 ಓವರಲ್ಲಿ 206/4 (ಋತುರಾಜ್‌ 69, ದುಬೆ 66*, ಹಾರ್ದಿಕ್‌ 2-43)
ಮುಂಬೈ 20 ಓವರಲ್ಲಿ 186/6 (ರೋಹಿತ್‌ 105*, ತಿಲಕ್‌ 31, ಪತಿರನ 4-28)

500 ಸಿಕ್ಸರ್‌ ಕ್ಲಬ್‌ಗೆ ರೋಹಿತ್‌

ರೋಹಿತ್‌ ಟಿ20 ಕ್ರಿಕೆಟ್‌ನಲ್ಲಿ 500 ಸಿಕ್ಸರ್‌ ಸಿಡಿಸಿದವ ಕ್ಲಬ್‌ ಸೇರ್ಪಡೆಗೊಂಡರು. ಅವರು ಈ ಸಾಧನೆ ಮಾಡಿದ 5ನೇ ಬ್ಯಾಟರ್‌. ವಿಂಡೀಸ್‌ನ ಕ್ರಿಸ್‌ ಗೇಲ್‌ 1056, ಪೊಲ್ಲಾರ್ಡ್‌ 860, ರಸೆಲ್‌ 678, ಕಿವೀಸ್‌ನ ಕಾಲಿನ್ ಮನ್ರೋ 548 ಸಿಕ್ಸರ್‌ ಸಿಡಿಸಿದ್ದಾರೆ.
 

click me!