ಗೆಲ್ಲಲು 177 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಖನೌ ತಂಡಕ್ಕೆ ನಾಯಕ ಕೆ ಎಲ್ ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಭರ್ಜರಿ ಆರಂಭ ಒದಗಿಸಿಕೊಟ್ಟರು. ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟಿತು.
ಲಖನೌ(ಏ.19): ನಾಯಕ ಕೆ ಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಲಖನೌ ಸೂಪರ್ ಜೈಂಟ್ಸ್ ತಂಡವು 08 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡು ಸೋಲುಗಳ ಬಳಿಕ ಲಖನೌ ತಂಡವು ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ.
ಗೆಲ್ಲಲು 177 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಖನೌ ತಂಡಕ್ಕೆ ನಾಯಕ ಕೆ ಎಲ್ ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಭರ್ಜರಿ ಆರಂಭ ಒದಗಿಸಿಕೊಟ್ಟರು. ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟಿತು. ಭರ್ತಿ 15 ಓವರ್ ಬ್ಯಾಟಿಂಗ್ ಮಾಡಿದ ಈ ಜೋಡಿ 134 ರನ್‌ಗಳ ಜತೆಯಾಟವಾಡಿತು. ಈ ಮೂಲಕ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜತೆಯಾಟವಾಡಿದ ಸಾಧನೆ ಮಾಡಿತು.
ಉತ್ತಮವಾಗಿ ಬ್ಯಾಟ್ ಬೀಸಿದ ಕ್ವಿಂಟನ್ ಡಿ ಕಾಕ್ ಕೇವಲ 43 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 54 ರನ್ ಬಾರಿಸಿ ಮುಸ್ತಾಫಿಜುರ್ ರೆಹಮಾನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತವಾಗಿ ನಾಯಕನ ಆಟವಾಡಿದ ಕೆ ಎಲ್ ರಾಹುಲ್ 53 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 82 ರನ್ ಬಾರಿಸಿ ಪತೀಶ್ ಪತಿರಣ ಬೌಲಿಂಗ್‌ನಲ್ಲಿ ಜಡೇಜಾ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಹಾದಿ ಹಿಡಿದರು.
ಗುಡುಗಿದ ಜಡ್ಡು-ಧೋನಿ; ಲಖನೌಗೆ ಸವಾಲಿನ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್
ಇನ್ನು ಕೊನೆಯಲ್ಲಿ ನಿಕೋಲಸ್ ಪೂರನ್ 12 ಎಸೆತಗಳನ್ನು ಎದುರಿಸಿ ಅಜೇಯ 23 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮತ್ತೊಂದು ತುದಿಯಲ್ಲಿ ಮಾರ್ಕಸ್ ಸ್ಟೋನಿಸ್ ಅಜೇಯ 8 ರನ್ ಗಳಿಸಿದರು.
ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ ಖಾತೆ ತೆರೆಯುವ ಮುನ್ನವೇ ಮೊಯ್ಸಿನ್ ಖಾನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರೆ ನಾಯಕ ಋತುರಾಜ್ ಗಾಯಕ್ವಾಡ್ 17 ರನ್ ಗಳಿಸಿ ಯಶ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಅಜಿಂಕ್ಯ ರಹಾನೆ ಚುರುಕಿನ 36 ರನ್ ಗಳಿಸಿ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ರೆಡ್ ಹಾಟ್ ಫಾರ್ಮ್‌ನಲ್ಲಿರುವ ಶಿವಂ ದುಬೆ ಕೇವಲ 3 ರನ್ ಗಳಿಸಿ ಮಾರ್ಕಸ್ ಸ್ಟೋನಿಸ್‌ಗೆ ವಿಕೆಟ್ ಒಪ್ಪಿಸಿದರೆ, ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಸಮೀರ್ ರಿಜ್ವಿ ಒಂದು ರನ್ ಗಳಿಸಿ ಸ್ಟಂಪೌಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಚೆನ್ನೈ ತಂಡವು 90 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.
ಸೋಲಿನಿಂದ ಕಂಗೆಟ್ಟರೂ ಬೆಂಗಳೂರಿಗರ ಹೃದಯ ಗೆದ್ದ ಆರ್‌ಸಿಬಿ, ಕೆರೆ ಮರುಜೀವಕ್ಕೆ ನೆರವು!
ಒಂದು ತುದಿಯಲ್ಲಿ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರವೀಂದ್ರ ಜಡೇಜಾ 40 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 57 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ ಕ್ರೀಸ್‌ಗಿಳಿದ ಮಾಜಿ ನಾಯಕ ಧೋನಿ ಕೇವಲ 9 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 28 ರನ್ ಬಾರಿಸಿ ತಂಡದ ಮೊತ್ತವನ್ನು 175ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.