Latest Videos

IPL 2024 Final ನೈಟ್‌ ರೈಡರ್ಸ್‌ vs ಸನ್‌ರೈಸರ್ಸ್‌: ಯಾರಿಗೆ ಐಪಿಎಲ್‌ ಕಿರೀಟ?

By Kannadaprabha NewsFirst Published May 26, 2024, 10:45 AM IST
Highlights

ಕೋಲ್ಕತಾ ಟೂರ್ನಿಯುದಕ್ಕೂ ಪ್ರಾಬಲ್ಯ ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ತಂಡ. ಕ್ವಾಲಿಫೈಯರ್‌-1ರಲ್ಲಿ ಸನ್‌ರೈಸರ್ಸ್‌ ವಿರುದ್ಧವೆ ಗೆದ್ದು ನೇರವಾಗಿ ಫೈನಲ್‌ಗೇರಿತ್ತು. ಮತ್ತೊಂದೆಡೆ ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕವೇ ಎದುರಾಳಿಗಳ ನಿದ್ದೆಗೆಡಿಸಿದ್ದ ಸನ್‌ರೈಸರ್ಸ್‌, ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿತ್ತು.

ಚೆನ್ನೈ: 17ನೇ ಆವೃತ್ತಿ ಐಪಿಎಲ್‌ನ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, ಈ ಬಾರಿ ಕಿರೀಟ ತೊಡುವವರು ಯಾರು ಎಂಬ ಕುತೂಹಲಕ್ಕೆ ಭಾನುವಾರ ತೆರೆ ಬೀಳಲಿದೆ. 2 ಬಾರಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ 1 ಬಾರಿ ಟ್ರೋಫಿ ವಿಜೇತ ಸನ್‌ರೈಸರ್ಸ್‌ ಹೈದರಾಬಾದ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ. ಬಹುನಿರೀಕ್ಷಿತ ಪಂದ್ಯಕ್ಕೆ ಚೆನ್ನೈನ ಚೆಪಾಕ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ರಣರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.

ಕೋಲ್ಕತಾ ಟೂರ್ನಿಯುದಕ್ಕೂ ಪ್ರಾಬಲ್ಯ ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ತಂಡ. ಕ್ವಾಲಿಫೈಯರ್‌-1ರಲ್ಲಿ ಸನ್‌ರೈಸರ್ಸ್‌ ವಿರುದ್ಧವೆ ಗೆದ್ದು ನೇರವಾಗಿ ಫೈನಲ್‌ಗೇರಿತ್ತು. ಮತ್ತೊಂದೆಡೆ ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕವೇ ಎದುರಾಳಿಗಳ ನಿದ್ದೆಗೆಡಿಸಿದ್ದ ಸನ್‌ರೈಸರ್ಸ್‌, ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿತ್ತು. ಕೆಕೆಆರ್‌ ವಿರುದ್ಧ ಸೋತರೂ 2ನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದೆ.

2022ರ ಟಿ20 ವಿಶ್ವಕಪ್‌ಗೆ ಸೆಲೆಕ್ಟ್ ಆಗಿದ್ದೇ ಆರ್‌ಸಿಬಿ ಫ್ಯಾನ್ಸ್‌ಗಳಿಂದ..! ಅವರ ಸಪೋರ್ಟ್ ನಾನೆಂದೂ ಮರೆಯೊಲ್ಲ: ಡಿಕೆ

ಭಾರಿ ಪೈಪೋಟಿ ನಿರೀಕ್ಷೆ: ಕೋಲ್ಕತಾ ಈ ಬಾರಿ ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತ ಪ್ರದರ್ಶನ ನೀಡಿ ಗೆದ್ದಿದ್ದೇ ಹೆಚ್ಚು. ಸುನಿಲ್‌ ನರೈನ್‌, ಫಿಲ್‌ ಸಾಲ್ಟ್‌ ಸ್ಫೋಟಕ ಆಟ, ಬೌಲಿಂಗ್‌ನಲ್ಲಿ ನರೈನ್‌, ವರುಣ್‌ ಚಕ್ರವರ್ತಿ, ಹರ್ಷಿತ್‌ ರಾಣಾ ಮೊನಚು ದಾಳಿ ಸಂಘಟಿಸಿದ್ದಾರೆ. ಚೆನ್ನೈನಲ್ಲಿ ಸ್ಪಿನ್ನರ್‌ಗಳೇ ಹೆಚ್ಚಿನ ನೆರವು ಪಡೆಯುವ ನಿರೀಕ್ಷೆಯಿರುವ ಕಾರಣ ನರೈನ್‌, ವರುಣ್‌ ಮತ್ತೊಮ್ಮೆ ಟ್ರಂಪ್‌ಕಾರ್ಡ್ಸ್‌ ಎನಿಸಿಕೊಳ್ಳಬಹುದು. ನಾಯಕ ಶ್ರೇಯಸ್‌ ಅಯ್ಯರ್‌, ವೆಂಕಟೇಶ್‌ ಅಯ್ಯರ್‌ ಸ್ಫೋಟಕ ಆಟ, ಆ್ಯಂಡ್ರೆ ರಸೆಲ್‌ ಆಲ್ರೌಂಡ್‌ ಪ್ರದರ್ಶನ ತಂಡದ ಪ್ಲಸ್‌ ಪಾಯಿಂಟ್‌. ಮಾರಕ ವೇಗಿ ಮಿಚೆಲ್‌ ಸ್ಟಾರ್ಕ್‌ ನಿರ್ಣಾಯಕ ಹಂತದಲ್ಲಿ ಲಯ ಕಂಡುಕೊಂಡಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಮತ್ತೊಂದೆಡೆ ಸನ್‌ರೈಸರ್ಸ್‌ ಬ್ಯಾಟಿಂಗ್‌ ಬಲದಿಂದಲೇ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಗೆದ್ದಿದ್ದರೂ, ಕ್ವಾಲಿಫೈಯರ್‌-2ರಲ್ಲಿ ತಂಡ ಅನಿರೀಕ್ಷಿತವಾಗಿ ಮಾರಕ ಬೌಲಿಂಗ್‌ ದಾಳಿ ಮೂಲಕ ಜಯಭೇರಿ ಬಾರಿಸಿತ್ತು. ಅಭಿಷೇಕ್‌ ಶರ್ಮಾ, ಟ್ರ್ಯಾವಿಸ್‌ ಹೆಡ್‌, ಕ್ಲಾಸೆನ್‌, ರಾಹುಲ್‌ ತ್ರಿಪಾಠಿ ಬ್ಯಾಟಿಂಗ್‌ ಆಧಾರಸ್ತಂಭ. ಬೌಲಿಂಗ್‌ನಲ್ಲಿ ಕಮಿನ್ಸ್‌ ಜೊತೆ ನಟರಾಜನ್‌, ಭುವನೇಶ್ವರ್‌, ಶಾಬಾಜ್‌ ಅಹ್ಮದ್‌ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ RCB ಈ ಐವರನ್ನು ಕೈಬಿಡೋದು ಗ್ಯಾರಂಟಿ..!

ಆದರೆ ಲೀಗ್‌ ಹಂತ ಹಾಗೂ ಕ್ವಾಲಿಫೈಯರ್‌-1ರಲ್ಲಿ ಸನ್‌ರೈಸರ್ಸ್‌ನ ಮಣಿಸಿರುವ ಕೋಲ್ಕತಾ, ಫೈನಲ್‌ನಲ್ಲೂ ಜಯಭೇರಿ ಬಾರಿಸಿ ಟ್ರೋಫಿ ಎತ್ತಿಹಿಡಿಯುವ ಆತ್ಮವಿಶ್ವಾಸದಲ್ಲಿದೆ.

ಒಟ್ಟು ಮುಖಾಮುಖಿ: 27

ಕೋಲ್ಕತಾ: 18

ಹೈದ್ರಾಬಾದ್‌: 09

ಸಂಭವನೀಯ ಆಟಗಾರರ ಪಟ್ಟಿ:

ಕೋಲ್ಕತಾ: ನರೈನ್‌, ಗುರ್ಬಾಜ್‌, ವೆಂಟಕೇಶ್‌, ಶ್ರೇಯಸ್‌(ನಾಯಕ), ರಿಂಕು, ರಸೆಲ್‌, ರಮನ್‌ದೀಪ್‌, ಸ್ಟಾರ್ಕ್‌, ವೈಭವ್‌, ಹರ್ಷಿತ್‌, ವರುಣ್‌.

ಹೈದ್ರಾಬಾದ್‌: ಅಭಿಷೇಕ್‌, ಹೆಡ್‌, ತ್ರಿಪಾಠಿ, ನಿತೀಶ್‌, ಕ್ಲಾಸೆನ್‌, ಮಾರ್ಕ್‌ರಮ್‌, ಸಮದ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ಉನಾದ್ಕಟ್‌, ನಟರಾಜನ್‌.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್ ರಿಪೋರ್ಟ್

ಚೆನ್ನೈ ಕ್ರೀಡಾಂಗಣದ ಪಿಚ್‌ ಬೌಲಿಂಗ್‌ ಸ್ನೇಹಿಯಾಗಿದ್ದರೂ, ಫೈನಲ್‌ ಪಂದ್ಯ ಕೆಂಪು ಮಣ್ಣು ಮಿಶ್ರಿತ ಪಿಚ್‌ನಲ್ಲಿ ನಡೆಯಲಿರುವ ಕಾರಣ ದೊಡ್ಡ ಸ್ಕೋರ್‌ ನಿರೀಕ್ಷಿಸಬಹುದು. ಆದರೂ ಇಲ್ಲಿ ಚೇಸಿಂಗ್‌ ಕಷ್ಟವಾಗಲಿದ್ದು, ಟಾಸ್‌ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.
 

click me!