
ಬೆಂಗಳೂರು(ಮೇ.21): ಒಂದೆಡೆ ಪ್ಲೇ ಆಫ್ ಪ್ರವೇಶದ ಒತ್ತಡ, ಮತ್ತೊದೆಂಡೆ ಭಾರಿ ಮಳೆ. ಗುಜರಾತ್ ಟೈಟಾನ್ಸ್ ತಂಡದ ಬೌಲಿಂಗ್ ದಾಳಿ ನಡುವೆ ಒದ್ದೆಯಾದ ಮೈದಾನದಲ್ಲಿ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. 60 ಎಸೆತದಲ್ಲಿ ಕೊಹ್ಲಿ ಸೆಂಚುರಿ ಪೂರೈಸಿದ್ದಾರೆ. ಈ ಮೂಲಕ ಸತತ 2ನೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೊಹ್ಲಿ ಸೆಂಚುರಿ ಸಿಡಿಸಿದ್ದರು. ಐಪಿಎಲ್ ಟೂರ್ನಿಯಲ್ಲಿ 7ನೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ದಾಖಲೆ ಬರೆದಿದ್ದಾರೆ. ಕೊಹ್ಲಿ ಸೆಂಚುರಿಯಿಂದ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್‌ಸಿಬಿ ಟಾಸ್‌ನಲ್ಲಿ ಹಿನ್ನಡೆ ಅನುಭವಿಸಿತು. ಮೊದಲು ಬ್ಯಾಟಿಂಗ್ ಇಳಿದ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಹಾಗೂ ಪಾಫ್ ಡುಪ್ಲೆಸಿಸ್ ಆರಂಭದಿಂದ ಉತ್ತಮ ಸ್ಥಿತಿ ಕಾಪಾಡಿಕೊಂಡಿತು. ಆದರೆ ಫಾಫ್ ಡುಪ್ಲೆಸಿಸ್ 19 ಎಸೆತದಲ್ಲಿ 28 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಈ ಜೋಡಿ 67 ರನ್ ಜೊತೆಯಾಟ ನೀಡಿತು.
ವಿರಾಟ್ ಕೊಹ್ಲಿ ಹೋರಾಟ ಮುಂದುವರಿಸಿದರೆ, ಇತ್ತ ಆರ್‌ಸಿಬಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಹೋರಾಟ ಮೂಡಿ ಬರಲಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ 11 ರನ್ ಸಿಡಿಸಿದರೆ, ಮಹಿಪಾಲ್ ಲೊಮ್ರೊರ್ 1 ರನ್ ಸಿಡಿಸಿದರು.ಮೆಚೆಲ್ ಬ್ರೇಸ್‌ವೆಲ್ ಹಾಗೂ ಕೊಹ್ಲಿ ಹೋರಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು. ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
ಬ್ರೇಸ್‌ವೆಲ್ 28 ರನ್ ಕಾಣಿಕೆ ನೀಡಿದರು. ದಿನೇಶ್ ಕಾರ್ತಿಕ್ ಮತ್ತೆ ನಿರಾಸೆ ಅನುಭವಿಸಿದರು. ಕಾರ್ತಿಕ್ ಶೂನ್ಯಕ್ಕೆ ಔಟಾದರು. ಆದರೆ ಕೊಹ್ಲಿ ಅಬ್ಬರ ಮುಂದುವರಿಯಿತು. 60 ಎಸೆತದಲ್ಲಿ ಕೊಹ್ಲಿ ಸೆಂಚುರಿ ಸಿಡಿಸಿದರು. ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ 7ನೇ ಶತಕ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ದಾಖಲೆ ಬರೆದಿದ್ದಾರೆ. ಕ್ರಿಸ್ ಗೇಲ್ 6 ಸೆಂಚುರಿ ಸಿಡಿಸಿ ಮೊದಲ ಸ್ಥಾನದಲ್ಲಿದ್ದರು.
ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ದಾಖಲೆ
ವಿರಾಟ್ ಕೊಹ್ಲಿ: 7 ಸೆಂಚುರಿ
ಕ್ರಿಸ್ ಗೇಲ್: 6 ಸೆಂಚುರಿ
ಜೋಸ್ ಬಟ್ಲರ್: 5 ಸೆಂಚುರಿ
ಐಪಿಎಲ್ ಟೂರ್ನಿಯಲ್ಲಿ ಸತತ ಸೆಂಚುರಿ ದಾಖಲೆ ಸಾಧಕರು
ಶಿಖರ್ ಧವನ್ : 2 ಶತಕ
ಜೋಸ್ ಬಟ್ಲರ್ :2 ಶತಕ
ವಿರಾಟ್ ಕೊಹ್ಲಿ : 2 ಶತಕ
ಕೊಹ್ಲಿ ಅಜೇಯ 101 ರನ್ ಸಿಡಿಸಿದರೆ, ಅನೂಜ್ ರಾವತ್ ಅಜೇಯ 23 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.