ಗುಜರಾತ್ ಟೈಟಾನ್ಸ್‌ ಪರ ತಮಿಳುನಾಡಿನ ಸಾಯಿ ಸುದರ್ಶನ್‌, ವಿಜಯ್ ಶಂಕರ್ ಅಬ್ಬರ, ಕೆಕೆಆರ್ ಗೆಲ್ಲಲು ಕಠಿಣ ಗುರಿ

By Naveen KodaseFirst Published Apr 9, 2023, 5:21 PM IST
Highlights

ಕೆಕೆಆರ್ ಎದುರು ಬೃಹತ್ ಮೊತ್ತ ಕಲೆಹಾಕಿದ ಗುಜರಾತ್ ಟೈಟಾನ್ಸ್
ಹ್ಯಾಟ್ರಿಕ್ ಗೆಲುವಿನತ್ತ ದಾಪುಗಾಲಿಟ್ಟ ಗುಜರಾತ್ ಟೈಟಾನ್ಸ್ ಪಡೆ
ಆಕರ್ಷಕ ಅರ್ಧಶತಕ ಸಿಡಿಸಿದ ವಿಜಯ್ ಶಂಕರ್, ಸಾಯಿ ಸುದರ್ಶನ್

ಅಹಮದಾಬಾದ್‌(ಏ.09): ತಮಿಳುನಾಡು ಮೂಲದ ಬ್ಯಾಟರ್‌ಗಳಾದ ಸಾಯಿ ಸುದರ್ಶನ್‌ ಹಾಗೂ ವಿಜಯ್ ಶಂಕರ್ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್‌ ತಂಡವು 4 ವಿಕೆಟ್ ಕಳೆದುಕೊಂಡು 204 ರನ್‌ ಬಾರಿಸಿದ್ದು, ಕೋಲ್ಕತಾ ನೈಟ್‌ ರೈಡರ್ಸ್‌ಗೆ ಸವಾಲಿನ ಗುರಿ ನೀಡಿದೆ. ಸಾಯಿ ಸುದರ್ಶನ್ 53 ರನ್ ಬಾರಿಸಿದರೆ, ವಿಜಯ್ ಶಂಕರ್ ಕೇವಲ 24 ಎಸೆತಗಳಲ್ಲಿ ಅಜೇಯ 63 ರನ್ ಚಚ್ಚಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್‌ ತಂಡವು ಎಚ್ಚರಿಕೆಯ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹ 4.2 ಓವರ್‌ಗಳಲ್ಲಿ 33 ರನ್‌ಗಳ ಜತೆಯಾಟವಾಡಿತು. ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ 17 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 17 ರನ್ ಬಾರಿಸಿ ಸುನಿಲ್‌ ನರೈನ್‌ಗೆ ವಿಕೆಟ್ ಒಪ್ಪಿಸಿದರು. 

ಇನ್ನು ಇದಾದ ಬಳಿಕ ಎರಡನೇ ವಿಕೆಟ್‌ಗೆ ಸಾಯಿ ಸುದರ್ಶನ್‌ ಹಾಗೂ ಶುಭ್‌ಮನ್‌ ಗಿಲ್‌ 67 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ 31 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 39 ರನ್ ಬಾರಿಸಿ ಸುನಿಲ್‌ ನರೈನ್‌ಗೆ ಎರಡನೇ ಬಲಿಯಾದರು. ಇನ್ನು ನಾಯಕ ಹಾರ್ದಿಕ್ ಪಾಂಡ್ಯ ಬದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಕನ್ನಡಿಗ ಅಭಿನವ್ ಮನೋಹರ್, ಉಮೇಶ್ ಯಾದವ್ ಬೌಂಡರಿ ಬಾರಿಸುವ ಮೂಲಕ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. 14 ರನ್‌ ಗಳಿಸಿದ್ದ ಮನೋಹರ್ ಅವರನ್ನು ಸುಯಾಶ್ ಶರ್ಮಾ, ಕ್ಲೀನ್ ಬೌಲ್ಡ್‌ ಮಾಡಿ ಪೆವಿಲಿಯನ್ನಿಗಟ್ಟಿದರು.

ಆಕರ್ಷಕ ಅರ್ಧಶತಕ ಸಿಡಿಸಿದ ಸಾಯಿ ಸುದರ್ಶನ್‌: ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ತಮಿಳುನಾಡು ಮೂಲದ ಬ್ಯಾಟರ್ ಸಾಯಿ ಸುದರ್ಶನ್‌, ಇದೀಗ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಕೆಕೆಆರ್ ಬೌಲರ್‌ಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ ಸುದರ್ಶನ್‌, ಕೇವಲ 38 ಎಸೆತಗಳಲ್ಲಿ3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಸಿಡಲಬ್ಬರದ ಬ್ಯಾಟಿಂಗ್ ನಡೆಸಿದ ವಿಜಯ್‌ ಶಂಕರ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು. ಕೊನೆಯ ಓವರ್‌ನಲ್ಲಿ ವಿಜಯ್ ಶಂಕರ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ವಿಜಯ್ ಶಂಕರ್‌ ಅಂತಿಮವಾಗಿ 24 ಎಸೆತಗಳನ್ನು ಎದುರಿಸಿ 4 ಬೌಂಡರ ಹಾಗೂ 5 ಸಿಕ್ಸರ್ ಸಹಿತ 63 ರನ್ ಬಾರಿಸಿ ಅಜೇಯರಾಗುಳಿದರು.  

click me!