ರೋಹಿತ್‌ ಶರ್ಮಾಗೆ ಹುಟ್ಟುಹಬ್ಬದ ಉಡುಗೊರೆ ಕೊಟ್ಟ ಟಿಮ್ ಡೇವಿಡ್‌; ವೀರೂ ಶಬ್ಬಾಶ್

By Naveen KodaseFirst Published May 1, 2023, 12:46 PM IST
Highlights

* ರಾಜಸ್ಥಾನ ರಾಯಲ್ಸ್ ಎದುರು ರೋಚಕ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್
* ರೋಹಿತ್ ಶರ್ಮಾ ಹುಟ್ಟುಹಬ್ಬಕ್ಕೆ ಪರ್ಫೆಕ್ಟ್‌ ಗಿಫ್ಟ್ ನೀಡಿದ ಟಿಮ್ ಡೇವಿಡ್
* ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಗೆಲುವು ತಂದಿತ್ತ ಟಿಮ್ ಡೇವಿಡ್

ಮುಂಬೈ(ಮೇ.01): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಂಬೈ ಇಂಡಿಯನ್ಸ್ ತಂಡವು 6 ವಿಕೆಟ್ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಗೆಲ್ಲಲು 17 ರನ್ ಅಗತ್ಯವಿದ್ದಾಗ ಮುಂಬೈನ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್‌, ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ರೋಹಿತ್ ಶರ್ಮಾ 36ನೇ ಹುಟ್ಟುಹಬ್ಬದ ದಿನದಂದೇ ಮುಂಬೈ ಇಂಡಿಯನ್ಸ್ ತಂಡವು ಸ್ಮರಣೀಯ ಗೆಲುವು ದಾಖಲಿಸಿದ್ದು, ಟಿಮ್ ಡೇವಿಡ್ ಬ್ಯಾಟಿಂಗ್ ಅನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಗುಣಗಾನ ಮಾಡಿದ್ದಾರೆ.

ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 213 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ಕೊನೆಯಲ್ಲಿ ಟಿಮ್ ಡೇವಿಡ್ ಕೇವಲ 14 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು. ಇದು 36 ವರ್ಷದ ರೋಹಿತ್ ಶರ್ಮಾ ಅವರ ಹುಟ್ಟುಹಬ್ಬಕ್ಕೆ ಅತ್ಯುತ್ತಮವಾದ ಉಡುಗೊರೆ ಎಂದು ವಿರೇಂದ್ರ ಸೆಹ್ವಾಗ್ ಬಣ್ಣಿಸಿದ್ದಾರೆ.

Latest Videos

ಈ ಕುರಿತಂತೆ ಟ್ವೀಟ್ ಮಾಡಿರುವ ವೀರೂ, " ಟಿಮ್‌ ಡೇವಿಡ್‌, ರೋಹಿತ್ ಶರ್ಮಾ ಅವರ ಹುಟ್ಟುಹಬ್ಬಕ್ಕೆ ಪರ್ಫೆಕ್ಟ್‌ ಉಡುಗೊರೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು ವಿಸ್ಪೋಟಕ ಬ್ಯಾಟಿಂಗ್ ಹಾಗೂ ಅದ್ಭುತ ರನ್ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾಯಿತು. ಈ ಆವೃತ್ತಿಯಲ್ಲಿ ಕೊನೆಯ ಓವರ್‌ನಲ್ಲಿ ಫಲಿತಾಂಶ ಬರುತ್ತಿರುವುದು ನೋಡುವುದಕ್ಕೆ ಖುಷಿಯಾಗುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ 

Tim David giving Rohit the perfect birthday gift. Astonishing hitting and what a spectacular run chase by the Mumbai Indians. Great to see so many last over finishes this season. pic.twitter.com/wrc9iqj2YO

— Virender Sehwag (@virendersehwag)

ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟಿಮ್ ಡೇವಿಡ್, "ನಾನು ಯಾವಾಗಲೂ ಇದೇ ರೀತಿ ಪಂದ್ಯವನ್ನು ಫಿನಿಶ್‌ ಮಾಡಲು ಕಾಯುತ್ತಿರುತ್ತೇನೆ. ಇಂದು ಖುಷಿ ಕೊಟ್ಟಿತು. ನಮ್ಮ ತಂಡದ ಆಟಗಾರರು ಒಳ್ಳೆಯ ರೀತಿಯಲ್ಲಿ ಪ್ರದರ್ಶನ ತೋರುತ್ತಿರುವುದರಿಂದ, ತಂಡ ಕೂಡಾ ಉತ್ಸುಕರಾಗಿದ್ದಾರೆ. ನಾನು ನನ್ನ ಅವಕಾಶಕ್ಕಾಗಿ ಕಾಯುತ್ತಿರುತ್ತೇನೆ ಹಾಗೂ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಟಿಮ್ ಡೇವಿಡ್ ಹೇಳಿದ್ದಾರೆ. 

IPL 2023 ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮುಂಬೈಗೆ ಗೆಲುವು ತಂದುಕೊಟ್ಟ ಡೇವಿಡ್!

ಸೂರ್ಯಕುಮಾರ್ ಯಾದವ್ ಸ್ಪೋಟಕ ಅರ್ಧಶತಕ ಹಾಗೂ ಟಿಮ್  ಡೇವಿಡ್‌ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್‌ ತಂಡವು ವಾಂಖೇಡೆ ಮೈದಾನದಲ್ಲಿ ಗರಿಷ್ಠ ರನ್ ಚೇಸ್‌ ಮಾಡುವ ಮೂಲಕ ಸ್ಮರಣೀಯವಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಆಡಿದ 8 ಪಂದ್ಯಗಳಲ್ಲಿ 4 ಗೆಲುವಿನ ಸಹಿತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಐಪಿಎಲ್ ಇತಿಹಾಸದ 1000ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 5 ಬಾರಿಯ ಐಪಿಎಲ್ ಚಾಂಪಿಯನ್‌ ಸ್ಮರಣೀಯ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಮುಂಬೈ ಇಂಡಿಯನ್ಸ್ ತಂಡವು ಮೇ 03ರಂದು ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಮುಂಬೈ ತಂಡವು, ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ದ್ವಿತಿಯಾರ್ಧದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು ಯಶಸ್ವಿ ಜೈಸ್ವಾಲ್ ಬಾರಿಸಿದ ಸಿಡಿಲಬ್ಬರದ ಶತಕ(124 ರನ್ 62 ಎಸೆತ)ದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಮುಂಬೈ ತಂಡವು ಇನ್ನೂ 3 ಎಸೆತ ಬಾಕಿ ಇರುವಂತೆಯೇ ರೋಚಕ ಗೆಲುವು ಸಾಧಿಸಿತು.

click me!