
ಲಖನೌ(ಮೇ.01): ಭಾರೀ ಹೈಡ್ರಾಮದ ಬಳಿಕ ಎದುರಾದ ಸೋಲು, ಅಭಿಮಾನಿಗಳನ್ನು ಕೆಣಕಿದ್ದ ಗೌತಮ್ ಗಂಭೀರ್ ಹಾಗೂ ಆವೇಶ್ ಖಾನ್ ಅತಿರೇಕದ ಸಂಭ್ರಮಾಚರಣೆ. ತನ್ನದೇ ತವರಿನಲ್ಲಿ ಲಖನೌ ವಿರುದ್ಧದ ಪಂದ್ಯದಲ್ಲಿ ಎದುರಾದ ಈ ಸನ್ನಿವೇಶಗಳನ್ನು ಆರ್‌ಸಿಬಿ ಇನ್ನೂ ಮರೆತಿರಲಿಕ್ಕಿಲ್ಲ. ಸೋಮವಾರ ನಡೆಯಲಿರುವ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಈ ಎಲ್ಲದಕ್ಕೂ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಅಂಕಪಟ್ಟಿಯಲ್ಲಿ ಮೇಲೇರಲು ಆರ್‌ಸಿಬಿ ಕಾತರಿಸುತ್ತಿದೆ.
ಪ್ಲೇ-ಆಫ್ ದೃಷ್ಟಿಯಿಂದ ಆರ್ಸಿಬಿಗೆ ಈ ಪಂದ್ಯ ಮಹತ್ವದ್ದಾಗಿದ್ದರೆ, ಕಳೆದ ಪಂದ್ಯದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಾಹುಲ್ ಪಡೆ ತವರಿನಲ್ಲಿ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿದೆ.
ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿಯೇ ಹೇಳಿದಂತೆ ಆರ್‌ಸಿಬಿ ತನ್ನ ಗೆಲುವನ್ನು ಎದುರಾಳಿಗೆ ಬಿಟ್ಟುಕೊಡುವುದರಲ್ಲಿ ಹೆಸರುವಾಸಿ. ಒಂದಿಬ್ಬರ ಮೇಲೆಯೇ ಅವಲಂಬಿತಗೊಂಡು ಆಡುತ್ತಿರುವ ತಂಡ ಇನ್ನಾದರೂ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಪ್ಲೇ-ಆಫ್ಗೇರುವುದು ಕಷ್ಟವಿದೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅಭೂತಪೂರ್ವ ಲಯದಲ್ಲಿದ್ದರೂ ಲಖನೌನ ಸ್ಪರ್ಧಾತ್ಮಕ ಪಿಚ್‌ನಲ್ಲಿ ಇತರರಿಂದಲೂ ಅಗತ್ಯ ಕೊಡುಗೆ ಸಿಗಬೇಕಿದೆ. 8 ಪಂದ್ಯವಾಡಿದರೂ ಇನ್ನೂ 85ಕ್ಕಿಂತ ಹೆಚ್ಚು ರನ್ ಗಳಿಸದ ಕಾರ್ತಿಕ್‌ರ ಜೊತೆಗೆ ಮಹಿಪಾಲ್ ಲೊಮ್ರೊರ್, ಶಾಜಾಬ್ ಅಹಮ್ಮದ್, ಸುಯಾಶ್ ದೇಸಾಯಿ ಕೂಡಾ ಜವಾಬ್ದಾರಿಯುತ ಆಟವಾಡಬೇಕಿದೆ. ಡು ಪ್ಲೆಸಿಸ್ ಬದಲು ಈ ಪಂದ್ಯದಲ್ಲೂ ವಿರಾಟ್ ಕೊಹ್ಲಿಯೇ ತಂಡ ಮುನ್ನಡೆಸುವ ಸಾಧ್ಯತೆಯಿದೆ.
IPL 2023 ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮುಂಬೈಗೆ ಗೆಲುವು ತಂದುಕೊಟ್ಟ ಡೇವಿಡ್!
ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಹೊರತುಪಡಿಸಿ ಉಳಿದವರ ಕೊಡುಗೆ ಅಷ್ಟಕ್ಕಷ್ಟೇ. ಹರ್ಷಲ್ ಪಟೇಲ್ ಮೇಲೆ ಭಾರೀ ನಿರೀಕ್ಷೆ ಇದ್ದು, 10ರ ಸಮೀಪವಿರುವ ಅವರ ಎಕಾನಮಿ ರೇಟನ್ನು ಕಡಿಮೆಗೊಳಿಸಬೇಕಿದೆ. ಸ್ಪಿನ್ ಪಿಚ್ ಆಗಿರುವುದರಿಂದ ಲಖನೌ ಸ್ಫೋಟಕ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಹಸರಂಗ ಟ್ರಂಪ್ಕಾರ್ಡ್ ಎನಿಸಬಹುದು.
ಅಸ್ಥಿರ ಆಟ: ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 257 ರನ್ ಚಚ್ಚಿದ್ದ ಲಖನೌ ಅಸ್ಥಿರ ಆಟಕ್ಕೂ ಹೆಸರುವಾಸಿ. ಇದೇ ಕ್ರೀಡಾಂಗಣದಲ್ಲಿ ಗುಜರಾತ್ ವಿರುದ್ಧ 135 ರನ್ ಬೆನ್ನತ್ತಲೂ ಲಖನೌ ವಿಫಲವಾಗಿತ್ತು. ತವರಿನ ಕಳೆದೆರಡು ಪಂದ್ಯದ ಸೋಲು ಕೂಡಾ ತಂಡವನ್ನು ಕಾಡುತ್ತಿದ್ದು, ಒಂದಿಬ್ಬರನ್ನು ನೆಚ್ಚಿಕೊಳ್ಳದೇ ಸಂಘಟಿತ ಪ್ರದರ್ಶನ ನೀಡಲು ಕಾಯುತ್ತಿದೆ.
ಒಟ್ಟು ಮುಖಾಮುಖಿ: 03
ಆರ್‌ಸಿಬಿ: 02
ಲಖನೌ: 01
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ವಿರಾಟ್ ವಿರಾಟ್(ನಾಯಕ), ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶಾಬಾಜ್ ಅಹಮ್ಮದ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯ್‌ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಲಖನೌ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ಕೆ ಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ನವೀನ್ ಉಲ್ ಹಕ್, ರವಿ ಬಿಷ್ಣೋಯ್, ಆವೇಶ್ ಖಾನ್, ಅಮಿತ್ ಮಿಶ್ರಾ.
ಪಂದ್ಯ: ಸಂಜೆ 7.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಏಕನಾ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕವಾಗಿದ್ದು, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆ ಕಡಿಮೆ. ಇಲ್ಲಿ ನಡೆದ 4 ಪಂದ್ಯಗಳಲ್ಲಿ ಒಮ್ಮೆ ಮಾತ್ರ 165+ ರನ್ ದಾಖಲಾಗಿದೆ. ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಟಾಸ್ ನಿರ್ಣಾಯಕ ಎನಿಸಿಕೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.