
ದೆಹಲಿ(ಏ.11): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರೋಚಕ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್ ಗೆಲುವು ದಾಖಲಿಸಿದೆ. ಸೋತ ತಂಡಗಳ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಹಳಿಗೆ ಮರಳಿದೆ. ನಾಯಕ ರೋಹಿತ್ ಶರ್ಮಾ ಅಬ್ಬರ, ತಿಲಕ್ ವರ್ಮಾ ಜೊತೆಯಾಟ, ಅಂತಿಮ ಹಂತದಲ್ಲಿ ಟಿಮ್ ಡೇವಿಡ್ ಹಾಗೂ ಕ್ಯಾಮರೂನ್ ಗ್ರೀನ್ ಸಿಕ್ಸರ್ ಆಟ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿತು.
ಮುಂಬೈ ಇಂಡಿಯನ್ಸ್ ತಂಡಕ್ಕೆ 173 ರನ್ ಟಾರ್ಗೆಟ್ ನೀಡಲಾಗಿತ್ತು. ಗೆಲ್ಲಲೇಬೇಕೆಂಬ ಛಲದಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮೊದಲ ವಿಕೆಟ್‌ಗೆ 71 ರನ್ ಜೊತೆಯಾಟ ನೀಡಿದರು. ಈ ಮೂಲಕ ಮುಂಬೈ ಉತ್ತಮ ಸ್ಥಿತಿ ಕಾಪಾಡಿಕೊಂಡಿತು. ಇಶಾನ್ ಕಿಶನ್ 26 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು.
ರೋಹಿತ್ ಶರ್ಮಾ ಹಾಗೂ ತಿಲಕ್ ವರ್ಮಾ ಜೊತೆಯಾಟ ಮುಂಬೈ ಇಂಡಿಯನ್ಸ್ ತಂಡವನ್ನು ಕಷ್ಟದಿಂದ ಪಾರು ಮಾಡಿತು. ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಇತ್ತ ತಿಲಕ್ ವರ್ಮಾ ಉತ್ತಮ ಸಾಥ್‌ನಿಂದ ಮುಂಬೈ ರನ್‌ರೇಟ್ ಉತ್ತಮಗೊಂಡಿತು. ಇಷ್ಟೇ ಅಲ್ಲ ಗೆಲುವಿನ ಹಾದಿಯಲ್ಲಿ ಸಾಗಿತು. ತಿಲಕ್ ವರ್ಮಾ ವಿಕೆಟ್ ಪತನ ಮುಂಬೈ ತಂಡಕ್ಕೆ ಆಘಾತ ನೀಡಿತು. ತಿಲಕ್ ವರ್ಮಾ 40 ರನ್ ಸಿಡಿಸಿ ಔಟಾದರು. ಇತ್ತ ಸೂರ್ಯಕುಮಾರ್ ಯಾದವ್ ಡಕೌಟ್ ಆದರು.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಇನ್ನೂ ಲಯ ಕಂಡುಕೊಂಡಿಲ್ಲ. 45 ಎಸೆತದಲ್ಲಿ 65 ರನ್ ಸಿಡಿಸಿದ ರೋಹಿತ್ ಶರ್ಮಾ ವಿಕೆಟ್ ಕೈಚೆಲ್ಲಿದರು. ಈ ವೇಳೆ 19 ಎಸೆತದಲ್ಲಿ ಮುಂಬೈ ಗೆಲುವಿಗೆ 30 ರನ್ ಅವಶ್ಯಕತೆ ಇತ್ತು. ಗೆಲುವಿನ ಹಾದಿಯಲ್ಲಿದ್ದ ಮುಂಬೈ ಸೋಲಿನಲ್ಲಿ ವಾಲತೊಡಗಿತು. ಅಂತಿಮ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು.
ಟಿಮ್ ಡೇವಿಡ್ ಹಾಗೂ ಕ್ಯಾಮರೂನ್ ಗ್ರೀನ್ ಸಿಕ್ಸರ್ ನಿಂದ ಮುಂಬೈ ಮತ್ತೆ ಹಿಡಿತ ಸಾಧಿಸಿತು. ಅಂತಿಮ 6 ಎಸೆತದಲ್ಲಿ ಮುಂಬೈ ಗೆಲುವಿಗೆ 5 ರನ್ ಅವಶ್ಯಕತೆ ಇತ್ತು. ಆದರೆ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ತಂಡವನ್ನು ಕಟ್ಟಿಹಾಕುವ ಪ್ರಯತ್ನ ಮಾಡಿತು. ಅಂತಿಮ 1 ಎಸೆತದಲ್ಲಿ 2 ರನ್ ಅವಶ್ಯತೆ ಇತ್ತು. ಈ ಬಾರಿಯ ಮೊದಲ ಸೂಪರ್ ಓವರ್ ಪಂದ್ಯದ ಎಲ್ಲಾ ಲಕ್ಷಣ ಗೋಚರಿಸಿತ್ತು. ಆದರೆ ಅಂತಿಮ ಎಸೆತದಲ್ಲಿ 2 ರನ್ ಸಿಡಿಸಿದ ಡೇವಿಡ್ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ 6 ವಿಕೆಟ್ ಗೆಲುವು ದಾಖಲಿಸಿತು.
ಡೆಲ್ಲಿ ಇನ್ನಿಂಗ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಘಟಾನುಘಟಿ ಬ್ಯಾಟ್ಸ್‌ಮನ್ ಅಬ್ಬರಿಸಲಿಲ್ಲ. ಆದರೆ ನಾಯಕ ಡೇವಿಡ್ ವಾರ್ನರ್ ಹಾಗೂ ಅಕ್ಸರ್ ಪಟೆಲ್ ಹೋರಾಟ ನೀಡಿದರು. ವಾರ್ನರ್ 51 ರನ್ ಸಿಡಿಸಿದರೆ ಅಕ್ಸರ್ ಪಟೇಲ್ 54 ರನ್ ಸಿಡಿಸಿದರು. ಪೃಥ್ವಿ ಶಾ 15, ಮನೀಶ್ ಪಾಂಡೆ 26 ರನ್ ಕಾಣಿಕೆ ನೀಡಿದರು. ಯಶ್ ಧುಲ್, ರೋವ್ಮನ ಪೊವೆಲ್, ಲಲಿತ್ ಯಾದವ್ ಅಬ್ಬರಿಸಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ 19.4 ಓವರ್‌ಗಳಲ್ಲಿ 172 ರನ್‌ಗೆ ಆಲೌಟ್ ಆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.