ಮನೀಷ್‌ ಪಾಂಡೆ ಫರ್ಸ್ಟ್‌ ಬಾಲ್‌ ಡಕ್, ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಸೋಲು!

By Santosh NaikFirst Published Apr 8, 2023, 7:20 PM IST
Highlights

ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹಾಲಿ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಸೋಲು ಎದುರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಶನಿವಾರ ಗುವಾಹಟಿಯಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 57 ರನ್‌ಗಳಿಂದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಶರಣಾಯಿತು.
 

ಗುವಾಹಟಿ (ಏ.8): ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಲಖನೌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡದ ವಿರುದ್ಧ ದೊಡ್ಡ ಅಂತರದ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಸೋಲು ಎದುರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಶನಿವಾರ ಗುವಾಹಟಿಯ ಬರ್ಸಾಪರ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ 000 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಹಳಿಗೆ ಏರಿತು. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ 72 ರನ್‌ಗಳ ಗೆಲುವು ಕಂಡಿದ್ದ ರಾಜಸ್ಥಾನ ರಾಯಲ್ಸ್‌ ಕಳೆದ ಪಂದ್ಯದಲ್ಲಿ  ಪಂಜಾಬ್‌ ಕಿಂಗ್ಸ್‌ ವಿರುದ್ಧ 5 ರನ್‌ಗಳ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್‌ ಹಾಗೂ ಜೋಸ್‌ ಬಟ್ಲರ್‌ ಅವರ ಸ್ಫೋಟಕ ಆಟ ಹಾಗೂ ಇನ್ನಿಂಗ್ಸ್‌ನ ಕೊನೆಯಲ್ಲಿ ಹೆಟ್ಮೆಯರ್‌ ಭರ್ಜರಿ ಇನ್ನಿಂಗ್ಸ್‌ನಿಂದ 4 ವಿಕೆಟ್‌ಗೆ 199 ರನ್‌ ಕಲೆಹಾಕಿತ್ತು. ಪ್ರತಿಯಾಗಿ ಟ್ರೆಂಟ್‌ ಬೌಲ್ಟ್‌ (29ಕ್ಕೆ 3) ಮಾರಕ ದಾಳಿಗೆ ಆರಂಭದಲ್ಲಿಯೇ ನೆಲಕ್ಕುರುಳಿದಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಡೇವಿಡ್‌ ವಾರ್ನರ್‌ ಅವರ ಹೋರಾಟ ಇನ್ನಿಂಗ್ಸ್‌ ನಡುವೆಯೂ 9 ವಿಕೆಟ್‌ಗೆ 142 ರನ್‌ ಬಾರಿಸಿ ಸೋಲು ಕಂಡಿತು.

ಚೇಸಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಮೊದಲ ಓವರ್‌ನಲ್ಲಿಯೇ ಪೃಥ್ವಿ ಶಾ ಹಾಗೂ ಮನೀಷ್‌ ಪಾಂಡೆ ಶೂನ್ಯಕ್ಕೆ ಔಟಾದರು. ಪೃಥ್ವಿ ಶಾ ಮೂರು ಎಸೆತಗಳಲ್ಲಿ ಶೂನ್ಯ ಸುತ್ತಿದ್ದರೆ, ಮನೀಷ್‌ ಪಾಂಡೆ ಎದುರಿಸಿದ ಮೊದಲ ಎಸೆತದಲ್ಲಿಯೇ ಎಲ್‌ಬಿಯಾಗಿ ಔಟಾದರು. ಇದರಿಂದಾಗಿ ಚೇಸಿಂಗ್‌ ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್‌ ಸೋಲು ಕಾಣೋದು ಬಹುತೇಕ ಖಚಿತ ಎನ್ನುವಂತಿತ್ತು.  12 ಎಸೆತಗಳಲ್ಲಿ 2 ಬೌಂಡರಿಗಳಿದ್ದ 14 ರನ್‌ ಬಾರಿಸಿದ್ದ ರಿಲ್ಲಿ ರೊಸೌ, ಪವರ್‌ ಪ್ಲೇಯ ಕೊನೇ ಓವರ್‌ನಲ್ಲಿ ಔಟಾದಾಗ ಡೆಲ್ಲಿ ಇನ್ನಷ್ಟು ಆಘಾತ ಕಂಡಿತು.    

36 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಡೇವಿಡ್‌ ವಾರ್ನರ್‌ (65 ರನ್‌, 55 ಎಸೆತ, 7 ಬೌಂಡರಿ) ಹಾಗೂ ಲಲಿತ್‌ ಯಾದವ್‌ (38 ರನ್‌, 24 ಎಸೆತ, 5 ಬೌಂಡರಿ) ನಾಲ್ಕನೇ ವಿಕೆಟ್‌ಗೆ ಅಮೂಲ್ಯ 64 ರನ್‌ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ಮುಟ್ಟಿಸಿದರು. ಒಂದೆಡೆ ತಂಡ ಚೇತರಿಕೆ ಕಾಣುತ್ತಿದ್ದರೆ, ಇನ್ನೊಂದೆಡೆ ಗೆಲುವಿಗೆ ಅಗತ್ಯವಾಗಿದ್ದ ರನ್‌ರೇಟ್‌ ಆಕಾಶಕ್ಕೆ ಏರಿತ್ತು. ಸ್ಫೋಟಕ ಆಟವಾಡಬೇಕಾದ ಹಂತದಲ್ಲಿ ಮತ್ತೊಮ್ಮೆ ದಾಳಿಗಿಳಿದ ಟ್ರೆಂಟ್‌ ಬೌಲ್ಟ್‌, ಲಲಿತ್‌ ಯಾದವ್‌ ವಿಕೆಟ್‌ ಉರುಳಿಸಿದರು. ನಂತರ ಬಂದ ಅಕ್ಷರ್‌ ಪಟೇಲ್‌ (2), ರೋವ್‌ಮನ್‌ ಪಾವೆಲ್‌ (2), ಅಭಿಷೇಕ್‌ ಪೊರೆಲ್‌ (7) ಬಂದಷ್ಟೇ ವೇಗವಾಗಿ ನಿರ್ಗಮಿಸಿದ್ದರಿಂದ ಸೋಲಿನ ಅಂತರ ತಗ್ಗಿಸುವ ಪ್ರಯತ್ನವೂ ಯಶಸ್ವಿಯಾಗಲಿಲ್ಲ.

click me!