
ಚೆನ್ನೈ(ಮೇ.24): ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತಿದ್ದರಿಂದ ಪ್ಲೇ-ಆಫ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್, ಬುಧವಾರ ಎಲಿಮಿನೇಟರ್ ಪಂದ್ಯದಲ್ಲಿ 3ನೇ ಸ್ಥಾನಿಯಾಗಿ ಲೀಗ್ ಹಂತವನ್ನು ಮುಕ್ತಾಯಗೊಳಿಸಿದ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಸೆಣಸಲಿದೆ. ಒಂದು ವಾರದ ಹಿಂದಷ್ಟೇ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಲಖನೌ 5 ರನ್ ರೋಚಕ ಗೆಲುವು ಸಾಧಿಸಿತ್ತು. ಅಲ್ಲದೇ ಕಳೆದ ಆವೃತ್ತಿಯಲ್ಲಿ ಆಡಿದ್ದ ಎರಡೂ ಪಂದ್ಯಗಳಲ್ಲಿ ಮುಂಬೈ ಸೋಲುಂಡಿತ್ತು. ಲಖನೌ ವಿರುದ್ಧ ಮೊದಲ ಜಯಕ್ಕಾಗಿ ಮುಂಬೈ ತುಡಿಯುತ್ತಿದೆ.
ಕಳೆದ ವರ್ಷ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟು, ಈ ಆವೃತ್ತಿಯಲ್ಲೂ ಕಳಪೆ ಆರಂಭ ಪಡೆದಿದ್ದ ಮುಂಬೈ ತನ್ನ ಬ್ಯಾಟರ್‌ಗಳ ಸಾಹಸದಿಂದಲೇ ಪ್ಲೇ-ಆಫ್‌ವರೆಗೂ ಬಂದಿದೆ. 4 ಪಂದ್ಯಗಳಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನತ್ತಿ ಗೆದ್ದಿರುವ ಮುಂಬೈ ಮತ್ತೊಮ್ಮೆ ತನ್ನ ಪ್ರಮುಖ ಬ್ಯಾಟರ್‌ಗಳಾದ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಕ್ಯಾಮರೂನ್ ಗ್ರೀನ್ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಜಸ್‌ಪ್ರೀತ್ ಬುಮ್ರಾ ಹಾಗೂ ಜೋಫ್ರಾ ಆರ್ಚರ್ ಅನುಪಸ್ಥಿತಿಯಲ್ಲಿ ಜೇಸನ್ ಬೆಹ್ರನ್‌ಡೊಫ್, ಆಕಾಶ್ ಮಧ್ವಾಲ್ ಸಮಾಧಾನಕರ ಪ್ರದರ್ಶನ ನೀಡುತ್ತಿದ್ದು, ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಮುಂಬೈ ತನ್ನ ಸ್ಪಿನ್ ಟ್ರಂಪ್‌ಕಾರ್ಡ್ ಪೀಯೂಷ್ ಚಾವ್ಲಾ ಅವರಿಂದ ಜಾದೂ ನಿರೀಕ್ಷಿಸುತ್ತಿದೆ.
ಮತ್ತೊಂದೆಡೆ ಕೆ.ಎಲ್.ರಾಹುಲ್ ಹೊರಬಿದ್ದರೂ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹಂಗಾಮಿ ನಾಯಕ ಕೃನಾಲ್ ಪಾಂಡ್ಯ, ತಮ್ಮಲ್ಲಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. 14 ಪಂದ್ಯಗಳಲ್ಲಿ 16 ವಿಕೆಟ್ ಕಿತ್ತಿರುವ ಸ್ಪಿನ್ನರ್ ರವಿ ಬಿಷ್ಣೋಯ್ ಮೇಲೆ ಲಖನೌ ಹೆಚ್ಚು ವಿಶ್ವಾಸವಿರಿಸಿದ್ದು, ಆವೇಶ್ ಖಾನ್ ಹಾಗೂ ನವೀನ್-ಉಲ್-ಹಕ್‌ರ ಪ್ರದರ್ಶನವೂ ಮಹತ್ವದೆನಿಸಿದೆ.
IPL 2023 ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಸಿಎಸ್‌ಕೆ, ಗುಜರಾತ್‌ಗೆ ಇನ್ನೂ ಇದೆ ಅವಕಾಶ!
ಬ್ಯಾಟಿಂಗ್‌ನಲ್ಲಿ ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ. ತಂಡದಲ್ಲಿರುವ ಭಾರತೀಯ ಬ್ಯಾಟರ್‌ಗಳು ಲಯ ಕಳೆದುಕೊಂಡಿದ್ದು, ಇದು ಲಖನೌಗೆ ಹಿನ್ನಡೆ ಉಂಟು ಮಾಡಬಹುದು.
ಮೇಲ್ನೋಟಕ್ಕೆ ಲಖನೌ ಮೇಲುಗೈ ಸಾಧಿಸಬಹುದು ಎನ್ನುವ ಅಭಿಪ್ರಾಯ ಮೂಡಿಸಿದರೂ, ಮುಂಬೈ ಇಂಡಿಯನ್ಸ್ ತಂಡವನ್ನು ಯಾವತ್ತೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. 5 ಬಾರಿ ಚಾಂಪಿಯನ್ ಆಗಿರುವ ತಂಡಕ್ಕೆ ದೊಡ್ಡ ಪಂದ್ಯಗಳಲ್ಲಿ ಹೇಗಾಡಬೇಕು ಎನ್ನುವುದು ಸ್ಪಷ್ಟವಾಗಿ ತಿಳಿದಿದ್ದು, ತನ್ನ ಅನುಭವವೇ ವರವಾಗಿ ನೆರವಾಗಬಹುದು.
ಒಟ್ಟು ಮುಖಾಮುಖಿ: 03
ಮುಂಬೈ ಇಂಡಿಯನ್ಸ್: 00
ಲಖನೌ ಸೂಪರ್ ಜೈಂಟ್ಸ್: 03
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ಇಶಾನ್ ಕಿಶನ್, ರೋಹಿತ್ ಶರ್ಮಾ(ನಾಯಕ), ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೇಹಲ್ ವಧೇರಾ, ಕ್ರಿಸ್ ಜೊರ್ಡನ್, ಪೀಯೂಷ್ ಚಾವ್ಲಾ, ಜೇಸನ್ ಬೆಹ್ರನ್‌ಡೊರ್ಫ್, ಕುಮಾರ ಕಾರ್ತಿಕೇಯ, ಆಕಾಶ್ ಮಧ್ವಾಲ್, ವಿಷ್ಣು ವಿನೋದ್.
ಲಖನೌ: ಕರಣ್ ಶರ್ಮಾ, ಕ್ವಿಂಟನ್ ಡಿ ಕಾಕ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ(ನಾಯಕ), ಆಯುಷ್ ಬದೋನಿ, ನಿಕೋಲಸ್ ಪೂರನ್, ಕೆ.ಗೌತಮ್, ಬಿಷ್ಣೋಯ್, ನವೀನ್, ಮೊಹ್ಸಿನ್, ಯಶ್ ಠಾಕೂರ್.
ಪಂದ್ಯ: ಸಂಜೆ 7.30ರಿಂದ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಚೆಪಾಕ್‌ನ ಪಿಚ್‌ನಲ್ಲಿ ಬ್ಯಾಟರ್‌ಗಳ ಕೌಶಲ್ಯಕ್ಕೆ ಬೆಲೆ ಸಿಗಲಿದೆ. ಇಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಎರಡೂ ತಂಡಗಳಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳಿದ್ದು, ಇವರ ಪ್ರದರ್ಶನ ಪಂದ್ಯದ ಫಲಿತಾಂಶ ನಿರ್ಧರಿಸಬಹುದು. ಮೊದಲು ಬ್ಯಾಟ್ ಮಾಡುವ ತಂಡ 180ಕ್ಕಿಂತ ಹೆಚ್ಚು ರನ್ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.