
ಮೊಹಾಲಿ(ಏ.28): ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಅನುಭವಿಸಿದ ಹೀನಾಯ ಸೋಲಿನ ಕಹಿಯನ್ನು ಮರೆತು ಜಯದ ಹಳಿಗೆ ಮರಳಲು ಎದುರು ನೋಡುತ್ತಿರುವ ಲಖನೌ ಸೂಪರ್ ಜೈಂಟ್ಸ್ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ತಂಡಕ್ಕೆ ನಾಯಕ ಕೆ.ಎಲ್.ರಾಹುಲ್‌ರ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನದ್ದೇ ಚಿಂತೆಯಾದಂತೆ ಕಾಣುತ್ತಿದ್ದು, ಅವರ ನಿಧಾನಗತಿ ಬ್ಯಾಟಿಂಗ್ ತಂಡದ ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ.
ರಾಹುಲ್ ಕೇವಲ 113.91ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಕಲೆಹಾಕಿದ್ದು, ಅವರ ಸಾಮರ್ಥ್ಯಕ್ಕೆ ವಿರುದ್ಧ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜೊತೆಗೆ ವೇಗಿ ಮಾರ್ಕ್ ವುಡ್ ಅನಾರೋಗ್ಯದ ಕಾರಣ ಗೈರಾಗುತ್ತಿರುವುದು ಸಹ ಲಖನೌ ಸೂಪರ್ ಜೈಂಟ್ಸ್‌ಗೆ ಹಿನ್ನಡೆ ಉಂಟು ಮಾಡಿದೆ. ಇಂದಿನ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್, ನಾಯಕ ರಾಹುಲ್ ಜತೆಗೂಡಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದ್ದು, ಸ್ಪೋಟಕ ಆರಂಭ ಪಡೆಯುವ ವಿಶ್ವಾಸದಲ್ಲಿದೆ. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೋಡಾ, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ ಜವಾಬ್ದಾರಿಯುತ ಆಟ ಆಡಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಅಮಿತ್ ಮಿಶ್ರಾ, ಆವೇಶ್ ಖಾನ್, ರವಿ ಬಿಷ್ಣೋಯಿ ಹಾಗೂ ನವೀನ್ ಉಲ್ ಹಕ್ ಪಂಜಾಬ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದೆ.
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಕ್ವಾರ್ಟರ್‌ಗೆ ಸಿಂಧು, ಪ್ರಣಯ್
ಮತ್ತೊಂದೆಡೆ ಶಿಖರ್ ಧವನ್ ಮೇಲೆ ಅತಿಯಾಗಿ ಅವಲಂಬಿತಗೊಂಡಿರುವ ಪಂಜಾಬ್ ಕಿಂಗ್ಸ್‌ಗೆ ಈ ಪಂದ್ಯದಲ್ಲಿ ಧವನ್‌ರ ಸೇವೆ ಲಭ್ಯವಾಗುವ ಸಾಧ್ಯತೆ ಇದೆ. ಭುಜದ ಗಾಯದಿಂದ ಚೇತರಿಸಿಕೊಂಡಿರುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಈ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇನ್ನು ಪಂಜಾಬ್ ತಂಡವು ಧವನ್ ಜತೆಗೆ ಐಪಿಎಲ್‌ನ ದುಬಾರಿ ಆಟಗಾರ ಎನಿಸಿಕೊಂಡಿರುವ ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಶಾರುಕ್ ಖಾನ್ ಸ್ಪೋಟಕ ಆಟವಾಡಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಆರ್ಶದೀಪ್ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ರಾಹುಲ್ ಚಹರ್ ಹಾಗೂ ಹಪ್ರೀತ್ ಬ್ರಾರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಲಖನೌ ವಿರುದ್ಧ ಪಂಜಾಬ್ 2 ವಿಕೆಟ್ ರೋಚಕ ಜಯ ಸಾಧಿಸಿತ್ತು. ಎರಡೂ ತಂಡಗಳು ತಲಾ 4 ಗೆಲುವು, 3 ಸೋಲು ಕಂಡಿದ್ದು ಟೂರ್ನಿಯ ದ್ವಿತೀಯಾರ್ಧವನ್ನು ಸಕಾರಾತ್ಮಕವಾಗಿ ಆರಂಭಿಸಲು ಎದುರು ನೋಡುತ್ತಿವೆ.
ಒಟ್ಟು ಮುಖಾಮುಖಿ: 02
ಪಂಜಾಬ್: 01
ಲಖನೌ: 01
ಸಂಭವನೀಯ ಆಟಗಾರರ ಪಟ್ಟಿ
ಪಂಜಾಬ್ ಕಿಂಗ್ಸ್: ಶಿಖರ್ ಧವನ್(ನಾಯಕ), ಪ್ರಭ್‌ಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ, ಭಾಟಿಯಾ, ಶಾರುಖ್ ಖಾನ್, ಹಪ್ರೀತ್ ಬ್ರಾರ್, ರಾಹುಲ್ ಚಹರ್, ಆರ್ಶದೀಪ್ ಸಿಂಗ್.
ಲಖನೌ ಸೂಪರ್ ಜೈಂಟ್ಸ್: ಕೆ ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಆವೇಶ್ ಖಾನ್, ರವಿ ಬಿಷ್ಣೋಯ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಈ ಆವೃತ್ತಿಯಲ್ಲಿ ಇಲ್ಲಿನ ಪಿಸಿಎ ಕ್ರೀಡಾಂಗಣದಲ್ಲಿ ಒಮ್ಮೆಯೂ 200 ರನ್ ದಾಖಲಾಗದೆ ಇದ್ದರೂ, ಪಿಚ್ ಬ್ಯಾಟರ್ ಸ್ನೇಹಿ ಎಂದೇ ಪರಿಗಣಿಸಲಾಗಿದೆ. ಸ್ಪಿನ್ನರ್‌ಗಳಿಗೆ ತಕ್ಕಮಟ್ಟಿಗಿನ ನೆರವು ಸಿಗುವ ನಿರೀಕ್ಷೆಯೂ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.