
ಬೆಂಗಳೂರು(ನ.13): ಬಹುನಿರೀಕ್ಷಿತ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಸಿದ್ದತೆಗಳು ಭರದಿಂದು ಶುರುವಾಗಿದ್ದು, ಆಟಗಾರರ ಟ್ರೇಡಿಂಗ್ ಕೂಡಾ ಜೋರಾಗಿಯೇ ನಡೆಯುತ್ತಿದೆ. ಇದೀಗ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ನ್ಯೂಜಿಲೆಂಡ್ ಮಾರಕ ವೇಗಿ ಲಾಕಿ ಫರ್ಗ್ಯೂಸನ್ ಹಾಗೂ ಆಫ್ಘಾನಿಸ್ತಾನ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮಾರಾಟ ಮಾಡಿದೆ. ಹೀಗಾಗಿ ಈ ಇಬ್ಬರು ಆಟಗಾರರು 2023ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಪರವಾಗಿ 13 ಪಂದ್ಯಗಳನ್ನಾಡಿ ತಂಡ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ನ್ಯೂಜಿಲೆಂಡ್ ಬಲಗೈ ವೇಗಿ ಲಾಕಿ ಫರ್ಗ್ಯೂಸನ್ ಮತ್ತೊಮ್ಮೆ ಕೋಲ್ಕತಾ ನೈಟ್ ರೈಡರ್ಸ್ ತೆಕ್ಕೆಗೆ ಜಾರಿದ್ದಾರೆ. ಇನ್ನು ಇದೇ ವೇಳೆ ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ ಕೂಡಾ ಕೆಕೆಆರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಜೇಸನ್ ರಾಯ್ ಕೊನೆಯ ಕ್ಷಣದಲ್ಲಿ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡವು ರೆಹಮನುಲ್ಲಾ ಗುರ್ಬಾಜ್ ಅವರನ್ನು ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಆದರೆ ಗುರ್ಬಾಜ್‌ಗೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ.
ನ್ಯೂಜಿಲೆಂಡ್ ವೇಗದ ಬೌಲರ್ ಲಾಕಿ ಫರ್ಗ್ಯೂಸನ್ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್‌ಗೆ ಮಾರಾಟ ಮಾಡಿದೆ. ಅವರು ಗುಜರಾತ್ ಟೈಟಾನ್ಸ್ ತಂಡದ ಪರ 13 ಪಂದ್ಯಗಳನ್ನಾಡಿ 12 ವಿಕೆಟ್ ಕಬಳಿಸಿದ್ದರು ಎಂದು ಐಪಿಎಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
IPL 2023 ಟ್ರೇಡ್ ಮೂಲಕ ಆರ್‌ಸಿಬಿ ವೇಗಿ ಖರೀದಿಸಿದ ಮುಂಬೈ ಇಂಡಿಯನ್ಸ್!
ಇನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ ಅವರನ್ನು ಗುಜರಾತ್ ಟೈಟಾನ್ಸ್ ತಂಡದಿಂದ ಖರೀದಿಸಿದೆ. ಅವರು 2022ರ ಟಾಟಾ ಐಪಿಎಲ್ ಟೂರ್ನಿಯಲ್ಲಿ ಜೇಸನ್ ರಾಯ್ ಬದಲಿಗೆ ಗುಜರಾತ್ ತಂಡ ಕೂಡಿಕೊಂಡಿದ್ದರು. ಆದರೆ ಅವರಿಗೆ ಕಳೆದ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನಾಡಲು ಅವಕಾಶ ಸಿಕ್ಕಿರಲಿಲ್ಲ ಎಂದು ಐಪಿಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಲಾಕಿ ಫರ್ಗ್ಯೂಸನ್ ಈ ಮೊದಲು 2019ರಿಂದ 2021ರ ಅವಧಿಯಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2021ರ ಐಪಿಎಲ್‌ನಲ್ಲಿ ಕೆಕೆಆರ್ ಪರ ಕೇವಲ 8 ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸುವ ಮೂಲಕ ತಂಡ ಫೈನಲ್‌ಗೇರುವಲ್ಲಿ ಲಾಕಿ ಫರ್ಗ್ಯೂಸನ್ ಮಹತ್ತರ ಪಾತ್ರ ವಹಿಸಿದ್ದರು.
ಕಳೆದ ವರ್ಷ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಬರೋಬ್ಬರಿ 10 ಕೋಟಿ ರುಪಾಯಿ ನೀಡಿ ಲಾಕಿ ಫರ್ಗ್ಯೂಸನ್ ಅವರನ್ನು ಖರೀದಿಸಿತ್ತು. ಇದೀಗ ಫರ್ಗ್ಯೂಸನ್ ಅವರನ್ನು ರಿಲೀಸ್ ಮಾಡಿದ್ದರಿಂದ ಗುಜರಾತ್ ಟೈಟಾನ್ಸ್ ತಂಡದ ಖಾತೆಯಲ್ಲಿ 10 ಕೋಟಿ ರುಪಾಯಿ ಉಳಿದುಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.