IPL 2023: ಜಯದ ಖಾತೆ ತೆರೆದ ಚೆನ್ನೈ ಸೂಪರ್‌ ಕಿಂಗ್ಸ್‌, ಲಖನೌ ಹೋರಾಟ ವ್ಯರ್ಥ

Published : Apr 03, 2023, 11:34 PM ISTUpdated : Apr 03, 2023, 11:42 PM IST
IPL 2023: ಜಯದ ಖಾತೆ ತೆರೆದ ಚೆನ್ನೈ ಸೂಪರ್‌ ಕಿಂಗ್ಸ್‌, ಲಖನೌ ಹೋರಾಟ ವ್ಯರ್ಥ

ಸಾರಾಂಶ

ಕೈಲ್‌ ಮೇಯರ್ಸ್‌ ಅಬ್ಬರದ ಬ್ಯಾಟಿಂಗ್‌ ನಡುವೆಯೂ ಕೊನೆ ಹಂತದಲ್ಲಿ ಧೋನಿ ಚಾಣಾಕ್ಷ ನಾಯಕತ್ವದ ಮುಂದೆ ಲಖನೌ ಸೂಪರ್‌ ಜೈಂಟ್ಸ್‌ ಮಂಡಿಯೂರಿದೆ. ಅದರೊಂದಿಗೆ ಐಪಿಎಲ್‌ 2023ಯಲ್ಲ ಚೆನ್ನೈ ಸೂಪರ್‌ ಕಿಂಗ್ಸ್‌ ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ  

ಚೆನ್ನೈ(ಏ.03): ಪಂದ್ಯ ಕೊನೆಯ ಓವರ್‌ಗಳಲ್ಲಿ ನಾಯಕ ಎಂಎಸ್‌ ಧೋನಿ ಚಾಣಾಕ್ಷ ನಾಯಕತ್ವದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ 2023ಯಲ್ಲಿ ತನ್ನ ಮೊದಲ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.  ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಶರಣಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ 2ನೇ ಪಂದ್ಯ ಹಾಗೂ ತವರಿನಲ್ಲಿ ಹಲವು ವರ್ಷಗಳ ಬಳಿಕ ನಡೆದ ಮೊದಲ ಪಂದ್ಯದಲ್ಲಿ 12 ರನ್‌ಗಳ ಗೆಲುವು ದಾಖಲಿಸಿದೆ. 218 ರನ್‌ಗಳ ಅಗಾಧ ಮೊತ್ತವನ್ನು ಬೆನ್ನಟ್ಟಿದ್ದ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಭರ್ಜರಿ ಆರಂಭ ಸಿಕ್ಕಿತ್ತು. ಮೊದಲ 33 ಎಸೆತಗಳಲ್ಲಿಯೇ ಲಖನೌ ತಂಡ 79 ರನ್‌ ಬಾರಿಸಿತ್ತು. ಆದರೆ, ಒಮ್ಮೆ ಕೆಎಲ್‌ ರಾಹುಲ್‌ ಹಾಗೂ ಕೈಲ್‌ ಮೇಯರ್ಸ್‌ (53ರನ್‌, 22 ಎಸೆತ, 8 ಬೌಂಡರಿ, 2 ಸಿಕ್ಸರ್‌) ಜೊತೆಯಾಟ ಬೇರ್ಪಟ್ಟ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಅನುಭವಿ ನಾಯಕ ಎಂಎಸ್‌ ಧೋನಿ, ಮೋಯಿನ್‌ ಅಲಿ (26ಕ್ಕೆ 4) ಕಣಕ್ಕಿಳಿಸುವ ಮೂಲಕ ಲಖನೌ ತಂಡದ ಮೇಲೆ ಕಡಿವಾಣ ಹಾಕಿದರು. ಇದರಿಂದಾಗಿ ಲಖನೌ ಸೂಪರ್‌ ಜೈಂಟ್ಸ್‌ ತಂಡ 7 ವಿಕೆಟ್‌ಗೆ 205 ರನ್‌ ಬಾರಿಸಲಷ್ಟೇ ಯಶಸ್ವಿಯಾಯಿತು. ಮೊದಲ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡ ಡೆಲ್ಲಿ ವಿರುದ್ಧ 50 ರನ್‌ಗಳ ಗೆಲುವು ಕಂಡಿತ್ತು.

ಚೇಸಿಂಗ್‌ ಆರಂಭಿಸಿದ ಲಖನೌ ತಂಡಕ್ಕೆ ಕೈಲ್‌ ಮೇಯರ್ಸ್‌ ನಿರೀಕ್ಷೆಗೂ ಮೀರಿದ ಆರಂಭವನ್ನು ನೀಡಿದರು. ದೀಪಕ್‌ ಚಹರ್‌, ಬೆನ್‌ ಸ್ಟೋಕ್ಸ್‌ ಹಾಗೂ ತುಷಾರ್‌ ದೇಶಪಾಂಡೆ ಎಸೆತಗಳನ್ನು ಮನಸೋಇಚ್ಛೆ ದಂಡನೆ ಮಾಡಿದ್ದರಿಂದ ಮೊದಲ 33 ಎಸೆತಗಳಲ್ಲಿಯೇ ಲಖನೌ ತಂಡ 79 ರನ್‌ ಪೇರಿಸಿತು. ಈ ಹಂತದಲ್ಲಿ ಮೋಯಿನ್‌ ಅಲಿ, ಮೇಯರ್ಸ್‌ (Chennai Super Kings) ವಿಕೆಟ್‌ ಉರುಳಿಸಿ ಚೆನ್ನೈ ತಂಡಕ್ಕೆ ಮೊದಲ ಯಶಸ್ಸು ನೀಡಿದರು. ಇದರ ಬೆನ್ನಲ್ಲಿಯೇ ದೀಪಕ್‌ ಹೂಡಾ (2) ಹಾಗೂ ಕೆಎಲ್‌ ರಾಹುಲ್‌ (20) ವಿಕೆಟ್ ತಂಡದ ಮೊತ್ತ 82 ರನ್‌ ಆಗಿದ್ದಾಗ ಉರುಳಿದವು. ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಅಲಿ ಈ ವಿಕೆಟ್‌ ಅನ್ನು ಹಂಚಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಬೇಕಿದ್ದ ಕೃನಾಲ್‌ ಪಾಂಡ್ಯ (9) ತಂಡದ ಮೊತ್ತ 100 ರನ್‌ಗಳ ಗಡಿ ದಾಟಿಸಿ ಔಟಾದರು.

'ರಿಷಭ್‌ ಶೆಟ್ರೇ.. ಪ್ಲೀಸ್‌ ಕಾಂತಾರ-2 ಮಾಡ್ಬೇಡಿ..' ಐಪಿಎಲ್‌ ಮ್ಯಾಚ್‌ ಮುಗಿದ ಮೇಲೆ ತುಳುವರ ಮನವಿ!

ಅದಾದ ಬಳಿಕ ಲಖನೌ (Lucknow Super Giants) ಹೋರಾಟದಲ್ಲಿ ಅಷ್ಟು ಜೀವವಿರಲಿಲ್ಲ.  ಭಾರೀ ನಿರೀಕ್ಷ ಇಟ್ಟುಕೊಂಡಿದ್ದ ಮಾರ್ಕ್‌ ಸ್ಟೋಯಿನಿಸ್‌ 18 ಎಸೆತಗಳಲ್ಲಿ ಒಂದು ಆಕರ್ಷಕ ಸಿಕ್ಸರ್‌ ಇದ್ದ 22 ರನ್‌ ಬಾರಿಸಿ ಔಟಾದರು. ಸ್ಫೋಟಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಮೂರು ಆಕರ್ಷಕ ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 18 ಎಸೆತಗಳಲ್ಲಿ 32 ರನ್‌ ಬಾರಿಸಿದಾಗ ಲಖನೌ ಸಣ್ಣ ಪ್ರಮಾಣದ ಗೆಲುವಿನ ನಿರೀಕ್ಷೆ ಇರಿಸಿಕೊಂಡಿತ್ತು. 16ನೇ ಓವರ್‌ನ ಕೊನೆಯ ಎಸೆತದಲ್ಲಿ ತುಷಾರ್‌ ದೇಶಪಾಂಡೆ, ಪೂರನ್‌ ವಿಕೆಟ್‌ ಉರುಳಿಸಿದಾಗ ಚೆನ್ನೈ ತಂಡದ ಗೆಲುವು ಖಚಿತಗೊಂಡಿತು.

'40 ಸಾವಿರ ಪ್ರೇಕ್ಷಕರಲ್ಲಿ 36 ಸಾವಿರ ಆರ್‌ಸಿಬಿ ಅಭಿಮಾನಿಗಳು..' ಬೆಂಗ್ಳೂರು ಟೀಮ್‌ ಕುರಿತಾಗಿ ಸುನಿ ಸ್ಪೆಷಲ್‌ ಟ್ವೀಟ್‌!

ಕೊನೆಯಲ್ಲಿ ಆಯುಷ್‌ ಬಡೋನಿ (23ರನ್‌, 18 ಎಸೆತ), ಕನ್ನಡಿಗ ಕೆ ಗೌತಮ್‌ (17 ರನ್,‌ 11 ಎಸೆತ, 1 ಸಿಕ್ಸರ್‌) ಹಾಗೂ ಮಾರ್ಕ್‌ವುಡ್‌ (10 ರನ್‌, 3 ಎಸೆತ, 1 ಬೌಂಡರಿ, 1 ಸಿಕ್ಸರ್‌) ಗಳಿಸಿದ ರನ್‌ಗಳು ಲಖನೌ ತಂಡದ ಸೋಲಿನ ಅಂತರವನ್ನು ತಗ್ಗಿಸಲಷ್ಟೇ ಸಹಾಯ ಮಾಡಿದವು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌