
ಬೆಂಗಳೂರು(ಏ.15): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು 7 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದ್ದು, ವಾರ್ನರ್ ಪಡೆಗೆ ಸವಾಲಿನ ಗುರಿ ನೀಡಿದೆ. ಆದರೆ ಇಂಪ್ಯಾಕ್ಟ್ ಆಟಗಾರನಾಗಿ ಅನೂಜ್ ರಾವತ್ ಅವರನ್ನು ನೇಮಕ ಮಾಡಿದ್ದರ ಬಗ್ಗೆ ಬೆಂಗಳೂರು ತಂಡವನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಒಂದು ಹಂತದಲ್ಲಿ ಆರ್‌ಸಿಬಿ ತಂಡವು ಕೇವಲ 13 ಓವರ್ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 119 ರನ್ ಬಾರಿಸುವ ಮೂಲಕ ತಂಡವು ಅನಾಯಾಸವಾಗಿ ಇನ್ನೂರರ ಗಡಿ ದಾಟಬಹುದು ಎಂದೇ ಊಹಿಸಲಾಗಿತ್ತು. ಆದರೆ ಸತತ 3 ಎಸೆತಗಳಲ್ಲಿ ಹರ್ಷಲ್ ಪಟೇಲ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್ ವಿಕೆಟ್ ಪತನವಾಗುತ್ತಿದ್ದಂತೆಯೇ ಆರ್‌ಸಿಬಿ ತಂಡವು ಆತಂಕಕ್ಕೆ ಒಳಗಾಯಿತು.
ಆರ್‌ಸಿಬಿ ತಂಡವು 14.2 ಓವರ್‌ಗೆ 132 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದ್ದಾಗ ತಂಡವು ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಮಹಿಪಾಲ್ ಲೋಮ್ರಾರ್ ಬದಲಿಗೆ ಅನೂಜ್ ರಾವತ್ ಅವರನ್ನು ಕಣಕ್ಕಿಳಿಸಿತು. ಅನೂಜ್ ರಾವತ್ ಹಾಗೂ ಶಹಬಾಜ್ ಅಹಮ್ಮದ್ ಜೋಡಿ 7ನೇ ವಿಕೆಟ್‌ಗೆ ಮುರಿಯದ 42 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಯಿತು.
ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ಅನೂಜ್ ರಾವತ್ ಉತ್ತಮ ಜತೆಯಾಟ ನಿಭಾಯಿಸಿದರೂ, ಇಂಪ್ಯಾಕ್ಟ್ ಆಟವಾಡಲು ವಿಫಲರಾದರು. ಅನೂಜ್ ರಾವತ್ ಬರೋಬ್ಬರಿ 22 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ ಕೇವಲ 15 ರನ್ ಗಳಿಸಿ ಅಜೇಯರಾಗುಳಿದರು. ಡೆತ್ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಬದಲು ಅನೂಜ್ ರಾವತ್ ಮಂದಗತಿಯಲ್ಲಿ ಬ್ಯಾಟ್ ಬೀಸಿದ್ದರ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ವಿರಾಟ್ ಕೊಹ್ಲಿ ಮತ್ತೊಂದು ಫಿಫ್ಟಿ; ಡೆಲ್ಲಿಗೆ ಸವಾಲಿನ ಗುರಿ ನೀಡಿದ ಆರ್‌ಸಿಬಿ
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಈ ಕುರಿತಾದ ಒಂದು ಝಲಕ್ ಇಲ್ಲಿದೆ ನೋಡಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.