
ನವದೆಹಲಿ(ನ.14): ಭಾರತದ ತಾರಾ ವೇಗಿ ಶಾರ್ದೂಲ್ ಠಾಕೂರ್, 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮಿನಿ ಹರಾಜಿಗೂ ಮುನ್ನ ಶಾರ್ದೂಲ್ ಠಾಕೂರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಕೆಕೆಆರ್ ಫ್ರಾಂಚೈಸಿಯು ಯಶಸ್ವಿಯಾಗಿದೆ.
2022ರಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 10.75 ಕೋಟಿ ರುಪಾಯಿ ನೀಡಿ ಶಾರ್ದೂಲ್ ಠಾಕೂರ್ ಅವರನ್ನು ಖರೀದಿಸಿತ್ತು. ಇದೀಗ ಅದೇ ಬೆಲೆಗೆ ಡೆಲ್ಲಿ ತಂಡದಿಂದ ಕೆಕೆಆರ್ ತಂಡವು ಶಾರ್ದೂಲ್ ಠಾಕೂರ್ ಅವರನ್ನು ಖರೀದಿಸಿದೆ. ಟೀಂ ಇಂಡಿಯಾ ಬೌಲಿಂಗ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಶಾರ್ದೂಲ್ ಠಾಕೂರ್ ಅವರನ್ನು ಖರೀದಿಸಲು ಕಳೆದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸಿದವಾದರೂ ಕೊನೆಯಲ್ಲಿ ಡೆಲ್ಲಿ ತಂಡವು ಒಂದು ಹೆಜ್ಜೆ ಮುಂದೆ ಹೋಗಿ 10.75 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿತ್ತು.
2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶಾರ್ದೂಲ್ ಠಾಕೂರ್ 14 ಪಂದ್ಯಗಳನ್ನಾಡಿ 9.79ರ ಬ್ಯಾಟಿಂಗ್ ಸರಾಸರಿಯಲ್ಲಿ 15 ವಿಕೆಟ್‌ಗಳನ್ನಷ್ಟೇ ಕಬಳಿಸಲು ಯಶಸ್ವಿಯಾಗಿದ್ದರು. ಇದು 2017ರ ಬಳಿಕ ಶಾರ್ದೂಲ್ ಠಾಕೂರ್ ತೋರಿದ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನವೆನಿಸಿಕೊಂಡಿತ್ತು. ಇನ್ನು ಬ್ಯಾಟಿಂಗ್‌ನಲ್ಲಿ ಶಾರ್ದೂಲ್ ಠಾಕೂರ್ 138ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 120 ರನ್ ಗಳಿಸಲಷ್ಟೇ ಯಶಸ್ವಿಯಾಗಿದ್ದರು.
ಐಪಿಎಲ್ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ನವೆಂಬರ್ 15ರ ಸಂಜೆ 5 ಗಂಟೆಯವರೆಗೆ ಅವಕಾಶವಿದ್ದು, ಕೆಕೆಆರ್ ಫ್ರಾಂಚೈಸಿಯು ಮಿನಿ ಹರಾಜಿಗೂ ಮುನ್ನ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಸಾಕಷ್ಟು ಚುರುಕಾಗಿ ಸ್ಪಂದಿಸುತ್ತಿದೆ. ಈಗಾಗಲೇ ಕೆಕೆಆರ್ ಫ್ರಾಂಚೈಸಿಯು, ಗುಜರಾತ್ ಟೈಟಾನ್ಸ್ ತಂಡದ ಮಾರಕ ವೇಗಿ ಲಾಕಿ ಫರ್ಗ್ಯೂಸನ್ ಹಾಗೂ ರೆಹಮನುಲ್ಲಾ ಗುರ್ಬಾಜ್ ಅವರನ್ನು ಖರೀದಿಸಿದೆ. ಇದೀಗ ಶಾರ್ದೂಲ್ ಠಾಕೂರ್ ಕೂಡಾ ಕೆಕೆಆರ್ ತೆಕ್ಕೆಗೆ ಜಾರಿದ್ದಾರೆ.
IPL 2023: KKR ತೆಕ್ಕೆಗೆ ಜಾರಿದ ಗುಜರಾತ್ ಟೈಟಾನ್ಸ್ ಮಾರಕ ವೇಗಿ..!
ಕಳೆದ ವರ್ಷ ನಾಕೌಟ್ ಹಂತಕ್ಕೇರಲು ಕೆಕೆಆರ್ ಫೇಲ್: 2020ರ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವು, ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯಲ್ಲಿ ಅಡಿದ 14 ಪಂದ್ಯಗಳಲ್ಲಿ ಕೇವಲ 6 ಗೆಲುವು ಹಾಗೂ 8 ಸೋಲು ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ತನ್ನ ಅಭಿಯಾನ ಮುಗಿಸಿತ್ತು. ನೂತನ ನಾಯಕ ಶ್ರೇಯಸ್ ಅಯ್ಯರ್ ಕೆಕೆಆರ್ ತಂಡವನ್ನು ಪ್ಲೇ ಆಫ್ ಹಂತಕ್ಕೇರಿಸುವಲ್ಲಿ ವಿಫಲವಾಗಿದ್ದರು. ಇದೀಗ 2023ರ ಐಪಿಎಲ್ ಟೂರ್ನಿಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ಬ್ರೆಂಡನ್ ಮೆಕ್ಕಲಂ ಅವರ ಬದಲಿಗೆ ಚಂದ್ರಕಾಂತ್ ಪಂಡಿತ್ ಕೆಕೆಆರ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ.
ಕೋಲ್ಕತ ನೈಟ್ ರೈಡರ್ಸ್ ತಂಡವು 2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಕೆಕೆಆರ್ ತಂಡವು ತಂಡದಲ್ಲಿ ಹಲವಾರು ಮಾರ್ಪಾಡು ಮಾಡಿಕೊಂಡು ಮೂರನೇ ಟ್ರೋಫಿ ಜಯಿಸಲು ರಣತಂತ್ರ ರೂಪಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.