
ಮುಂಬೈ(ಏ.27): ಹಲವು ಬಲಿಷ್ಠ ತಂಡಗಳನ್ನು ಮಣಿಸಿ ಚೊಚ್ಚಲ ಆವೃತ್ತಿಯಲ್ಲೇ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಗುಜರಾತ್ ಟೈಟಾನ್ಸ್ (Gujarat Titans) ಮತ್ತೊಂದು ಗೆಲುವಿನ ಹುಮ್ಮಸ್ಸಿನಲ್ಲಿದ್ದು, ಬುಧವಾರ ಪಂಚ ಗೆಲುವು ಸಾಧಿಸಿ ಪ್ರಚಂಡ ಲಯದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯ ಐಪಿಎಲ್‌ನ ‘ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್’ ಎನಿಸಿಕೊಂಡಿರುವ ಗುಜರಾತ್‌ನ ಲಾಕಿ ಫಗ್ರ್ಯೂಸನ್ ಹಾಗೂ ಹೈದ್ರಾಬಾದ್‌ನ ಉಮ್ರಾನ್ ಮಲಿಕ್ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ.
ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ಏಕೈಕ ಸೋಲು ಕಂಡಿದ್ದು ಹೈದರಾಬಾದ್ ವಿರುದ್ಧವೇ ಎಂಬುದು ಗಮನಾರ್ಹ. ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿ ತೋರುತ್ತಿರುವ ತಂಡ ಹಿಂದಿನ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಜೊತೆಗೆ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗುವ ತವಕದಲ್ಲಿರುವ ತಂಡ ಅಗ್ರಸ್ಥಾನ ಭದ್ರಪಡಿಸಿಕೊಳ್ಳಲೂ ಎದುರು ನೋಡುತ್ತಿದೆ.
ಮತ್ತೊಂದೆಡೆ ಮೊದಲೆರಡು ಪಂದ್ಯಗಳಲ್ಲಿ ಸೋತು ನಿರಾಸೆ ಮೂಡಿಸಿದ್ದರೂ ಬಳಿಕ ಸತತ 5 ಪಂದ್ಯ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್‌ಗೆ ಮತ್ತೊಂದು ಸೋಲುಣಿಸುವ ನಿರೀಕ್ಷೆಯಲ್ಲಿದೆ. ಅನುಭವಿ ಭಾರತೀಯ ವೇಗಿಗಳ ಜೊತೆ ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸನ್ ಎದುರಾಳಿ ಬ್ಯಾಟರ್‌ಗಳಿಗೆ ಮತ್ತೊಮ್ಮೆ ಕಂಟಕವಾಗಲು ಎದುರು ನೋಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಕೇವಲ 68 ರನ್‌ಗೆ ಆಲೌಟ್ ಮಾಡಿದ್ದು ಬೌಲಿಂಗ್ ಪರಾಕ್ರಮಕ್ಕೆ ಸಾಕ್ಷಿ. ತಂಡ ಈ ಪಂದ್ಯವನ್ನೂ ಗೆದ್ದರೆ ನಂ.1 ಸ್ಥಾನಕ್ಕೆ ಏರಲಿದೆ.
IPL 2022 ಸುಲಭ ಗುರಿ ಚೇಸ್ ಮಾಡಲು ವಿಫಲ, ರಾಜಸ್ಥಾನ ವಿರುದ್ಧ ಆರ್‌ಸಿಬಿ ಹೀನಾಯ ಸೋಲು!
ಎರಡೂ ತಂಡಗಳಲ್ಲೂ ಬಲಾಢ್ಯ ಬೌಲಿಂಗ್ ಪಡೆಯನ್ನು ಹೊಂದಿವೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ರಶೀದ್ ಖಾನ್ ಈ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರ ಜತೆಗೆ ಲಾಕಿ ಫರ್ಗ್ಯೂಸನ್, ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಮಾರಕ ದಾಳಿ ಸಂಘಟಿಸುತ್ತಿದ್ದಾರೆ. ಇನ್ನೊಂದಡೆ ಯುವ ವೇಗಿಗಳಾದ ಉಮ್ರಾನ್ ಮಲಿಕ್, ಮಾರ್ಕೊ ಯಾನ್ಸೆನ್, ಟಿ ನಟರಾಜನ್ ಜತೆಗೆ ಭುವನೇಶ್ವರ್ ಕುಮಾರ್ ಕೂಡಾ ಶಿಸ್ತು ಬದ್ದ ದಾಳಿ ನಡೆಸುತ್ತಿರುವುದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.
ಗುಜರಾತ್ ಟೈಟಾನ್ಸ್ ತಂಡದ ಪರ ಆರಂಭಿಕ ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹ ಉತ್ತಮ ಆರಂಭ ಒದಗಿಸಲು ವಿಫಲರಾಗುತ್ತಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಇದರ ಜತೆಗೆ ಡೇವಿಡ್ ಮಿಲ್ಲರ್ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ನಾಯಕ ಕೇನ್ ವಿಲಿಯಮ್ಸನ್ ಫಾರ್ಮ್ ಸಮಸ್ಯೆ ಎದುರಿಸುತ್ತಿರುವುದು ತಂಡದ ತಲೆನೋವು ಹೆಚ್ಚಿಸಿದೆ
ಸಂಭವನೀಯ ಆಟಗಾರರ ಪಟ್ಟಿ
ಗುಜರಾತ್ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಭಿನವ್ ಮನೋಹರ್, ಅಲ್ಜಾರಿ ಜೋಸೆಫ್, ಲಾಕಿ ಫಗ್ರ್ಯೂಸನ್, ಮೊಹಮ್ಮದ್ ಶಮಿ, ಯಶ್ ದಯಾಳ್.
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಜಗದೀಶ್ ಸುಚಿತ್, ಮಾರ್ಕೊ ಯಾನ್ಸನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್.
ಸ್ಥಳ: ಮುಂಬೈ
ವಾಂಖೇಡೆ ಕ್ರೀಡಾಂಗಣ, ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.