ಪುಣೆ(ಏ.26): ಟಾರ್ಗೆಟ್ 145 ರನ್. ಆದರೆ ಆರ್‌ಸಿಬಿ ಲೆಕ್ಕಾಚಾರಗಳು ತಲೆಕೆಳಗಾಯಿತು. ಆರ್ ಆಶ್ವಿನ್ ಹಾಗೂ ಕುಲ್ದೀಪ್ ಸೇನ್ ದಾಳಿಗೆ ಸುಲಭ ಗುರಿಯೂ ಮೌಂಟ್ ಎವರೆಸ್ಟ್ ಬೆಟ್ಟಕ್ಕಿಂತ ದೊಡ್ಡದಾಯಿತು. ಬ್ಯಾಟಿಂಗ್ ಕಷ್ಟವಾಯಿತು, ವಿಕೆಟ್ ಉಳಿಸಿಕೊಳ್ಳಲು ಪರದಾಡಬೇಕಾಯಿತು. ಪರಿಣಾಮ ರಾಜಸ್ಥಾನ ರಾಯಲ್ಸ್ ವಿರುದ್ದ ಆರ್‌ಸಿಬಿ ಸೋಲಿಗೆ ಶರಣಾಯಿತು.
ಸುಲಭ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಸೇರಿದಂತೆ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ನೆರವಿಗೆ ನಿಲ್ಲಲಿಲ್ಲ. ಈ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು, ಯಶಸ್ವಿ ಬೌಲಿಂಗ್ ಮಾಡಿದ್ದೇ ಬಂತು, ಬ್ಯಾಟಿಂಗ್‌ನಲ್ಲಿ ಮತ್ತೆ ಕಳಪೆ ಪ್ರದರ್ಶನದಿಂದ ಸೋಲೋಪ್ಪಿಕೊಂಡಿತು.
IPL 2022 ಸಾಲು ಸಾಲು ವೈಫಲ್ಯ, ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ವಿರಾಟ್ ಕೊಹ್ಲಿ..!
ರಾಜಸ್ಥಾನ ರಾಯಲ್ಸ್ ತಂಡವನ್ನು 144 ರನ್‌ಗಳಿಗೆ ಕಟ್ಟಿಹಾಕಿದ ಆರ್‌ಸಿಬಿ ಸುಲಭ ಟಾರ್ಗೆಟ್ ಪಡೆಯಿತು. ಆದರೆ ಆರ್‌ಸಿಬಿಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಅನುಭವಿಸಿದರು. ಕೇವಲ 9 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್ ಕಬಳಿಸಿದ ರಾಜಸ್ಥಾನ ದಾಳಿ ಮತ್ತಷ್ಟು ಚುರುಕುಗೊಳಿಸಿತು.
ನಾಯಕ ಫಾಫ್ ಡುಪ್ಲೆಸಿಸ್ 3 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 23 ರನ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರು. ಆದರೆ ಸಾಧ್ಯವಾಗಲಿಲ್ಲ. ಆರ್‌ಸಿಬಿ 37 ರನ್ ಸಿಡಿಸುವಷ್ಟರಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಡುಪ್ಲೆಸಿಸ್ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಪತನಗೊಂಡಿತು. ಮ್ಯಾಕ್ಸ್‌ವೆಲ್ ಶೂನ್ಯ ಸುತ್ತಿದರು.
ಶಬಬಾಜ್ ಅಹಮ್ಮದ್ 17 ರನ್ ಸಿಡಿಸಿ ಔಟಾದರು. ಇನ್ನೂ ಸೂಯಷ್ ಪ್ರಬುದೇಸಾಯಿ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು. ಪ್ರತಿ ಬಾರಿ ಆರ್‌ಸಿಬಿಗೆ ಗೆಲವಿನ ಉಡುಗೊರೆ ನೀಡುತ್ತಿದ್ದ, ಪಂದ್ಯ ಫಿನೀಶ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ರನೌಟ್‌ಗೆ ಬಲಿಯಾದರು. ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಇದು ಆರ್‌ಸಿಬಿ ತಂಡಕ್ಕೆ ದೊಡ್ಡ ಹೊಡೆತ ನೀಡಿತು.
IPL 2022: ಮುಂಬೈ ಎದುರಿನ ಗೆಲುವಿನ ಬೆನ್ನಲ್ಲೇ ಕೆ.ಎಲ್. ರಾಹುಲ್‌ಗೆ ದಂಡದ ಬರೆ..!
ವಾನಿಂದು ಹಸರಂಗ 18 ರನ್ ಸಿಡಿಸಿ ಔಟಾದರು. ಮೊಹಮ್ಮದ್ ಸಿರಾಜ್ 5 ರನ್ ಸಿಡಿಸಿದರು. ಆರ್‌ಸಿಬಿ 19.3 ಓವರ್‌ಗಳಲ್ಲಿ 115 ರನ್ ಸಿಡಿಸಿ ಆಲೌಟ್ ಆಯಿತು. ರಾಜಸ್ಥಾನ ರಾಯಲ್ಸ್ 15 ರನ್ ಗೆಲುವು ದಾಖಲಿಸಿತು.
ಕ್ಯಾಚ್ ಬಿಟ್ಟು ಹಸರಂಗ ಎಡವಟ್ಟು:
ರಾಯಲ್ಸ್‌ನ ಅಗ್ರ ಕ್ರಮಾಂಕ ಆರ್‌ಸಿಬಿ ಬೌಲರ್‌ಗಳ ಮುಂದೆ ತಿಣುಕಾಡಿತು. ಪಡಿಕ್ಕಲ್ ಹಾಗೂ ಅಶ್ವಿನ್ ವಿಕೆಟನ್ನು ಸಿರಾಜ್ ಕಿತ್ತರೆ, ಅಪಾಯಕಾರಿ ಬಟ್ಲರ್(08)ರನ್ನು ಹೇಜಲ್‌ವುಡ್ ಔಟ್ ಮಾಡಿದರು. ಸ್ಯಾಮ್ಸನ್ 5ನೇ ಬಾರಿಗೆ ಹಸರಂಗಗೆ ವಿಕೆಟ್ ನೀಡಿದರು. 10ನೇ ಓವರಲ್ಲಿ 68 ರನ್‌ಗೆ 4 ವಿಕೆಟ್ ಕಳೆದುಕೊಂಡ ರಾಯಲ್ಸ್ ಭಾರೀ ಸಂಕಷ್ಟದಲ್ಲಿದ್ದಾಗ ಪರಾಗ್ ತಂಡವನ್ನು ಮೇಲೆತ್ತಿದರು. ಹಸರಂಗ ಸುಲಭ ಕ್ಯಾಚ್ ಕೈಚೆಲ್ಲಿ ಪರಾಗ್‌ಗೆ ಜೀವದಾನ ನೀಡಿದರು. ಆ ಬಳಿಕ ಅವರು 23 ರನ್ ಗಳಿಸಿ ತಂಡ 140 ರನ್ ದಾಟಲು ನೆರವಾದರು. 11ನೇ ಓವರ್‌ನಿಂದ 18ನೇ ಓವರ್ ಮಧ್ಯೆ 44 ಎಸೆತಗಳಲ್ಲಿ ರಾಯಲ್ಸ್ ಬೌಂಡರಿ ಗಳಿಸಿರಲಿಲ್ಲ. ಆದರೆ ಕೊನೆ 2 ಓವರ್ ದುಬಾರಿಯಾದವು. ರಿಯಾನ್ 31 ಎಸೆತಗಳಲ್ಲಿ 56 ರನ್ ಸಿಡಿಸಿ ಔಟಾಗದೆ ಉಳಿದರು.