IPL 2022: ಗುಜರಾತ್ ಟೈಟಾನ್ಸ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

By Naveen Kodase  |  First Published Apr 30, 2022, 3:08 PM IST

* ಗುಜರಾತ್ ಟೈಟಾನ್ಸ್ ಎದುರು ಟಾಸ್ ಗೆದ್ದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ

* ಆರ್‌ಸಿಬಿ ತಂಡದಲ್ಲಿ ಒಂದು, ಗುಜರಾತ್ ಟೈಟಾನ್ಸ್ ತಂಡದಲ್ಲಿ ಎರಡು ಬದಲಾವಣೆ

* ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ ಆರ್‌ಸಿಬಿ


ನವಿ ಮುಂಬೈ(ಏ.30): 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 43ನೇ ಪಂದ್ಯದಲ್ಲಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ

ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಬ್ರೆಬೋರ್ನ್‌ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸುಯಾಶ್ ಪ್ರಭುದೇಸಾಯಿ ಬದಲಿಗೆ ಮಹಿಪಾಲ್ ಲೋಮ್ರಾರ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಅಭಿನವ್ ಮನೋಹರ್ ಹಾಗೂ ಯಶ್ ದಯಾಳ್‌ಗೆ ವಿಶ್ರಾಂತಿ ನೀಡಲಾಗಿದ್ದು, ಪ್ರದೀಪ್ ಸಂಗ್ವಾನ್ ಹಾಗೂ ಸಾಯಿ ಸುದರ್ಶನ್‌ ತಂಡ ಕೂಡಿಕೊಂಡಿದ್ದಾರೆ.

Tap to resize

Latest Videos

ಗುಜರಾತ್ ಟೈಟಾನ್ಸ್‌ನ 7 ಗೆಲುವುಗಳ ಪೈಕಿ 6ರಲ್ಲಿ ಬೇರೆ ಬೇರೆ ಆಟಗಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇದೇ ತಂಡದ ಯಶಸ್ಸಿನ ರಹಸ್ಯ. ಪ್ರತಿ ಪಂದ್ಯದಲ್ಲೂ ಒಬ್ಬೊಬ್ಬ ಹೀರೋ ಹುಟ್ಟಿಕೊಳ್ಳುತ್ತಿದ್ದಾನೆ. ಮೊಹಮದ್‌ ಶಮಿ, ಲಾಕಿ ಫಗ್ರ್ಯೂಸನ್‌, ಶುಭ್‌ಮನ್‌ ಗಿಲ್‌, ಹಾರ್ದಿಕ್‌ ಪಾಂಡ್ಯ, ಡೇವಿಡ್‌ ಮಿಲ್ಲರ್‌ ಹಾಗೂ ರಶೀದ್‌ ಖಾನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಕಷ್ಟು ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದ್ದರೂ ಸಹಾ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಗ್ರಕ್ರಮಾಂಕದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್ ಈ ಮೂವರು ಆಟಗಾರರ ಪೈಕಿ ಒಬ್ಬ ಆಟಗಾರನಿಂದ ದೊಡ್ಡ ಇನಿಂಗ್ಸ್ ನಿರೀಕ್ಷೆ ಮಾಡುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹಮ್ಮದ್ ಜವಾಬ್ದಾರಿಯುತ ಪ್ರದರ್ಶನ ನೀಡಬೇಕಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಆರ್‌ಸಿಬಿ ಬೌಲರ್‌ಗಳು ಶಿಸ್ತುಬದ್ದ ದಾಳಿ ನಡೆಸಿದ್ದರು. ಇಂದೂ ಕೂಡಾ ಅದೇ ರೀತಿಯ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.

ತಂಡಗಳು ಹೀಗಿವೆ ನೋಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದರ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಮಹಿಪಾಲ್ ಲೊಮ್ರಾರ್‌, ದಿನೇಶ್ ಕಾರ್ತಿಕ್‌, ಶಾಬಾಜ್ ಅಹಮ್ಮದ್‌, ಹರ್ಷಲ್ ಪಟೇಲ್‌, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್‌, ಜೋಶ್ ಹೇಜಲ್‌ವುಡ್‌.

ಗುಜರಾತ್ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್‌, ಹಾರ್ದಿಕ್‌ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್ ಖಾನ್‌, ಸಾಯಿ ಸುದರ್ಶನ್‌‌, ಅಲ್ಜಾರಿ ಜೋಸೆಫ್, ಲಾಕಿ ಫಗ್ರ್ಯೂಸನ್‌, ಮೊಹಮ್ಮದ್ ಶಮಿ, ಪ್ರದೀಪ್ ಸಂಗ್ವಾನ್‌.

ಸ್ಥಳ: ಮುಂಬೈ, ಬ್ರೆಬೋರ್ನ್‌ ಕ್ರೀಡಾಂಗಣ
ಪಂದ್ಯ: ಮಧ್ಯಾಹ್ನ 3.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!